ADVERTISEMENT

ಹೈ–ಕ ವ್ಯಾಪ್ತಿ ವರ್ಗಾವಣೆಗೆ ನಿರ್ಬಂಧವಿಲ್ಲ: ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 3 ಜುಲೈ 2024, 16:22 IST
Last Updated 3 ಜುಲೈ 2024, 16:22 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಹೈದರಾಬಾದ್‌–ಕರ್ನಾಟಕ (ಹೈ–ಕ) ಪ್ರದೇಶದಲ್ಲಿ ಸ್ಥಳೀಯ ಮೀಸಲಾತಿ ಅಡಿ ನೇಮಕಗೊಂಡ ಸರ್ಕಾರಿ ನೌಕರನನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಹೈ-ಕ ಪ್ರದೇಶದಿಂದ ಹೊರ ಭಾಗಗಳಿಗೆ ವರ್ಗಾವಣೆ ಮಾಡಲು ಯಾವುದೇ ನಿರ್ಬಂಧ ಇರುವುದಿಲ್ಲ’ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಹೈ-ಕ ಪ್ರದೇಶದ ಮೀಸಲಾತಿ ಅಡಿಯಲ್ಲಿ ನೇಮಕವಾಗಿದ್ದ ಸಬ್ ರಿಜಿಸ್ಟ್ರಾರ್ ಎನ್.ಶ್ರೀಕಾಂತ್ ಅವರನ್ನು ಹೊರ ಪ್ರದೇಶಕ್ಕೆ ವರ್ಗಾವಣೆ ಮಾಡಿದ್ದ ಸರ್ಕಾರದ ಕ್ರಮವನ್ನು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಎತ್ತಿ ಹಿಡಿದಿತ್ತು. ಈ ಆದೇಶವನ್ನು ಪ್ರಶ್ನಿಸಿ ಮತ್ತೊಬ್ಬ ಸಬ್ ರಿಜಿಸ್ಟ್ರಾರ್ ಎಸ್.ನಂದೀಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಮೂರ್ತಿ ಅನು ಶಿವರಾಮನ್ ಹಾಗೂ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

‘ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲು) ಆದೇಶ 2013ರಲ್ಲಿ ಹೈ-ಕ ಮೀಸಲು ಅಡಿಯಲ್ಲಿ ನೇಮಕವಾದವರನ್ನು ಹೊರ ಭಾಗಗಳಿಗೆ ವರ್ಗಾವಣೆ ಮಾಡುವುದಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಬಂಧ ಇರುವುದಿಲ್ಲ. ಆದ್ದರಿಂದ, ಸಾರ್ವಜನಿಕ ಹಿತದೃಷ್ಟಿಯಿಂದ ಸರ್ಕಾರ ಹೊರ ಪ್ರದೇಶಕ್ಕೆ ವರ್ಗಾವಣೆ ಮಾಡಬಹುದು’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ADVERTISEMENT

ಪ್ರಕರಣವೇನು?: ಎನ್.ಶ್ರೀಕಾಂತ್ ಅವರು ಹೈ-ಕ ವೃಂದದಲ್ಲಿ ಸಬ್‌ ರಿಜಿಸ್ಟ್ರಾರ್ ಆಗಿ ನೇಮಕವಾಗಿದ್ದರು. ತರಬೇತಿ ಬಳಿಕ ಅವರನ್ನು ಚಿಕ್ಕಮಗಳೂರು ನಂತರ ಮೈಸೂರು ಪಶ್ಚಿಮದ ಸಬ್ ರಿಜಿಸ್ಟ್ರಾರ್ ಆಗಿ ನೇಮಕ ಮಾಡಲಾಗಿತ್ತು. ಏತನ್ಮಧ್ಯೆ, ನಂದೀಶ್ ಅವರನ್ನು ಶ್ರೀಕಾಂತ್ ಅವರ ಹುದ್ದೆಗೆ ನಿಯೋಜಿಸಿದ್ದು, ಶ್ರೀಕಾಂತ್ ಅವರಿಗೆ ಯಾವುದೇ ಹುದ್ದೆ ತೋರಿಸದೆ ವರ್ಗಾವಣೆ ಮಾಡಲಾಗಿತ್ತು. ಈ ವರ್ಗಾವಣೆ ಆದೇಶವನ್ನು ಪ್ರಶ್ನಿಸಿ ಶ್ರೀಕಾಂತ್; ಅವಧಿ ಪೂರ್ವ ವರ್ಗಾವಣೆ ಎಂದು ಆರೋಪಿಸಿ ಕೆಎಟಿ ಮೆಟ್ಟಿಲೇರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.