ಬೆಂಗಳೂರು: ಮದುವೆ ಸೇರಿದಂತೆ ಯಾವುದೇ ಕೌಟುಂಬಿಕ ಕಾರ್ಯಕ್ರಮಗಳನ್ನು ನಡೆಸಲು ಚುನಾವಣಾ ನೀತಿಸಂಹಿತೆಯಲ್ಲಿ ನಿರ್ಬಂಧವಿಲ್ಲ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ.
ಈ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ಯಾವುದೇ ಕೌಟುಂಬಿಕ ಕಾರ್ಯಕ್ರಮಗಳಿಗೂ ಚುನಾವಣಾ ನೀತಿಸಂಹಿತೆ ಅನ್ವಯವಾಗುವುದಿಲ್ಲ. ಕೌಟುಂಬಿಕ ಕಾರ್ಯಕ್ರಮಗಳನ್ನು ನಡೆಸಲು ಚುನಾವಣಾಧಿಕಾರಿಯಿಂದ ಅನುಮತಿ ಪಡೆಯುವ ಅಗತ್ಯವೂ ಇಲ್ಲ’ ಎಂದರು.
ಕೌಟುಂಬಿಕ ಕಾರ್ಯಕ್ರಮಗಳನ್ನು ನಡೆಸಲು ಚುನಾವಣಾ ಆಯೋಗ ಅಥವಾ ಚುನಾವಣಾಧಿಕಾರಿಯಿಂದ ಅನುಮತಿ ಪಡೆಯಬೇಕು ಎಂಬ ತಪ್ಪು ಕಲ್ಪನೆ ಜನರಲ್ಲಿದೆ. ನಿಯಮಗಳು ಮತ್ತು ಮಾರ್ಗಸೂಚಿಗಳಲ್ಲಿ ಅಂತಹ ನಿರ್ಬಂಧ ಇಲ್ಲ. ಹೀಗಾಗಿ ಕೌಟುಂಬಿಕ ಕಾರ್ಯಕ್ರಮ ನಡೆಸಲು ಅನುಮತಿ ಕೋರಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂದು ಹೇಳಿದರು.
ನೀತಿಸಂಹಿತೆ ಉಲ್ಲಂಘಿಸಿದರೆ ಕ್ರಮ: ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ ಅವಕಾಶ ನೀಡಬಾರದು. ಇಂತಹ ಕಾರ್ಯಕ್ರಮಗಳಲ್ಲಿ ಮತ ಯಾಚನೆ ಮಾಡುವುದು, ಮತದಾರರಿಗೆ ಆಮಿಷ ಒಡ್ಡುವುದು, ನಗದು, ಉಡುಗೊರೆ ವಿತರಣೆ ಕಂಡುಬಂದಲ್ಲಿ ಸ್ಥಳೀಯ ಚುನಾವಣಾಧಿಕಾರಿಗಳು ಕ್ರಮ ಜರುಗಿಸುತ್ತಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.