ಬೆಂಗಳೂರು: ‘ದೇಶದಲ್ಲಿ ಯಾರೂ ಸಂತೋಷವಾಗಿಲ್ಲ. ಇದಕ್ಕೆ ನಮಗೆ ನಾವೇ ಮಾಡಿಕೊಂಡ ಗಾಯಗಳೇ ಕಾರಣ. ಅದರಲ್ಲಿ ಕೆಲವು ಗಾಯಗಳು ಕಣ್ಣಿಗೆ ಕಾಣಿಸುವುದಿಲ್ಲ’ ಎಂದು ನಟ ಪ್ರಕಾಶ್ ರಾಜ್ ಹೇಳಿದರು.
ನಗರದಲ್ಲಿ ಶನಿವಾರ ಬಹುರೂಪಿ ಹಾಗೂ ಧಾರವಾಡದ ಡಾ. ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ‘ಪ್ರಜಾವಾಣಿ’ಯ ಹಿರಿಯ ಉಪ ಸಂಪಾದಕ ವಿಕ್ರಂ ಕಾಂತಿಕೆರೆ ಅವರು ಕನ್ನಡಕ್ಕೆ ಅನುವಾದಿಸಿರುವ ‘ಭಗವಂತನ ಸಾವು’ ಕೃತಿಯನ್ನು (ಮೂಲ: ಮಲಯಾಳಂನ ಲೇಖಕಿ ಕೆ.ಆರ್.ಮೀರಾ ಬರೆದಿರುವ ‘ಭಗವಾನ್ಡೆ ಮರಣಂ’) ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ನಮ್ಮನ್ನು ಘಾಸಿಗೊಳಿಸಿ ಮಾತನಾಡಲು ಆಗದಂತಹ ನೋವು ಇದೆ. ಇಂತಹ ಪರಿಸ್ಥಿತಿಯಲ್ಲಿ ‘ಭಗವಂತನ ಸಾವು’ ಕೃತಿ ಹೊರ ಬಂದಿದೆ. ಇದರಲ್ಲಿ ಬರುವ ಎಲ್ಲ ಪಾತ್ರಗಳು ಕಾಲ್ಪನಿಕವಾಗಿವೆ. ಬದುಕಿರುವ ಅಥವಾ ಕಾಲವಾಗಿರುವ ಯಾವುದಾದರೂ ವ್ಯಕ್ತಿಗಳ ಜತೆ ಇಲ್ಲಿನ ಪಾತ್ರಗಳು ಹೋಲುತ್ತವೆ ಎಂದಾದರೆ ಅದಕ್ಕೆ ನಾವು ಬದುಕುತ್ತಿರುವ ಕಾಲವೇ ಕಾರಣ’ ಎಂದು ಅಭಿಪ್ರಾಯಪಟ್ಟರು.
ಎಂ.ಎಂ.ಕಲಬುರ್ಗಿ ಅವರ ಪುತ್ರ ಶ್ರೀವಿಜಯ ಕಲಬುರ್ಗಿ ಮಾತನಾಡಿ, ‘ಇದು ನಮ್ಮ ತಂದೆಯ ಬಗ್ಗೆ ಬರೆದಿರುವ ಮೊದಲ ಕೃತಿ. ಅನುವಾದಕರು ಕೂಡ ಇನ್ನು ಎಚ್ಚರದಿಂದ ಇರಬೇಕು. ತಂದೆ ಸಮಾಜಕ್ಕಾಗಿ ಬದುಕಿದ್ದರು. ನಾವೂ ಅವರಂತೆ ಬದುಕಿದ್ದೇವೆ. ಅವರ ಮನೆಯನ್ನು ಸರ್ಕಾರಕ್ಕೆ ನೀಡಿದ್ದೇವೆ’ ಎಂದರು.
ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನದ ಸದಸ್ಯ ಸಿದ್ದನಗೌಡ ಪಾಟೀಲ ಅವರು, ‘ವಿಚಾರವಾದಿಗಳ ಹತ್ಯೆ ಬಳಿಕ ಕೆಲ ಬರಹಗಾರರು ಕಣ್ಣ ಮುಂದಿನ ಸತ್ಯ ಹೇಳಲು ಹೆದರುತ್ತಿದ್ದಾರೆ. ಕಲಬುರ್ಗಿ ಹೇಳಿದಂತೆ ಕಣ್ಣ ಮುಂದಿನ ಸತ್ಯವನ್ನು ಹೇಳಬೇಕಾದರೆ ಕಾಲ ಕೆಳಗಿನ ಬೆಂಕಿಯನ್ನು ನಿರ್ಲಕ್ಷಿಸಬೇಕು’ ಎಂದರು.
ಕೃತಿ ಕುರಿತು ಲೇಖಕರಾದ ಕೆ.ಆರ್.ಮೀರಾ, ವಿಕ್ರಂ ಕಾಂತಿಕೆರೆ ಮಾತನಾಡಿದರು. ಬಹುರೂಪಿ ಸಂಸ್ಥಾಪಕಿ ವಿ.ಎನ್.ಶ್ರೀಜಾ, ಪ್ರತಿಷ್ಠಾನದ ಅಧ್ಯಕ್ಷ ಡಾ.ವೀರಣ್ಣ ರಾಜೂರ, ಜಿ.ಎನ್.ಮೋಹನ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.