ಬೆಂಗಳೂರು: ಲೋಕಸಭಾ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು, ಕೂಡಲೇ ಸರ್ಕಾರಿ ಕಚೇರಿ, ಸರ್ಕಾರಿ ಆಸ್ತಿಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಜನಪ್ರತಿನಿಧಿಗಳ ಹೆಸರು, ಭಾವಚಿತ್ರಗಳು ಹಾಗೂ ಜಾಹೀರಾತುಗಳನ್ನು ತೆಗೆಯಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಫ್ಲೆಕ್ಸ್, ಪೋಸ್ಟರ್, ಬ್ಯಾನರ್, ಭಿತ್ತಿಪತ್ರಗಳು, ಗೋಡೆ ಬರಹಗಳು ಇರುವಂತಿಲ್ಲ. ಯಾರಾದರೂ ಪೋಸ್ಟರ್, ಬ್ಯಾನರ್ ಹಾಕಿದರೆ ಸಂಬಂಧಪಟ್ಟವರ ಮೇಲೆ ದೂರು ದಾಖಲಿಸಬೇಕು ಎಂದು ಆದೇಶಿಸಿದರು.
‘ಶುದ್ಧ ಕುಡಿಯುವ ನೀರಿನ ಘಟಕ, ಉದ್ಯಾನ ಇನ್ನಿತರೆ ಸ್ಥಳಗಳಲ್ಲಿ ಅಳವಡಿಸಿರುವ ನಾಮಫಲಕಗಳಲ್ಲಿ ಜನಪ್ರತಿನಿಧಿಗಳ ಹೆಸರು, ಭಾವಚಿತ್ರಗಳು ಇರುವಂತಿಲ್ಲ. ರಸ್ತೆ ಬದಿ ನಾಮಫಲಕಗಳಲ್ಲಿ ಜನಪ್ರತಿನಿಧಿಗಳ ಹೆಸರು ತೆಗೆಯಬೇಕು. ಎಲ್ಲೂ ಜನಪ್ರತಿನಿಧಿಗಳ ಹೆಸರಾಗಲಿ, ಸಂಪರ್ಕ ಸಂಖ್ಯೆಯಾಗಲಿ ಇರುವಂತಿಲ್ಲ. ಪಾಲಿಕೆಯ ಆಯಾ ವಲಯ ವ್ಯಾಪ್ತಿಯಲ್ಲಿ ಯಾವುದಾದರೂ ಕಾರ್ಯಕ್ರಮ ಆಯೋಜಿಸಿದ್ದಲ್ಲಿ ತತ್‌ಕ್ಷಣ ಅದನ್ನು ರದ್ದುಪಡಿಸಬೇಕು. ಚುನಾವಣೆ ಮುಗಿಯುವವರೆಗೆ ಯಾವುದೇ ಕಾರ್ಯಕ್ರಮ ಆಯೋಜಿಸುವಂತಿಲ್ಲ’ ಎಂದು ತಿಳಿಸಿದರು.
24 ಗಂಟೆಗಳ ಒಳಗೆ ಸರ್ಕಾರಿ ಅಧಿಕೃತ ವೆಬ್‌ಸೈಟ್‌ಗಳಲ್ಲಿ ರಾಜಕೀಯ ಪ್ರತಿನಿಧಿಗಳ ಛಾಯಾಚಿತ್ರಗಳನ್ನು ತೆಗೆಯಲು ಸೂಚನೆ ನೀಡಿದರು.
ನಿಯಂತ್ರಣ ಕೊಠಡಿ ಸ್ಥಾಪನೆ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ (ಆರ್‌ಒ), ಮತದಾರ ನೋಂದಣಾಧಿಕಾರಿ (ಎಆರ್‌ಒ) ಕಚೇರಿಗಳಲ್ಲಿ 24 ಗಂಟೆಯೊಳಗಾಗಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಬೇಕು ಎಂದು ತುಷಾರ್ ಗಿರಿನಾಥ್ ಸೂಚಿಸಿದರು.
ಚೆಕ್ ಪೋಸ್ಟ್
ಮಾದರಿ ನೀತಿ ಸಂಹಿತೆ (ಎಂಸಿಸಿ) ಉಲ್ಲಂಘನೆಗಳ ಮೇಲೆ ನಿಗಾವಹಿಸಲು ಎಫ್‌ಎಸ್‌ಟಿ, ಎಸ್‌ಎಸ್‌ಟಿ ಸೇರಿದಂತೆ ವಿವಿಧ ತಂಡಗಳನ್ನು ಸಕ್ರಿಯಗೊಳಿಸಬೇಕು. ಜೊತೆಗೆ ಪ್ರಮುಖ ಸ್ಥಳಗಳಲ್ಲಿ ಕೂಡಲೇ ಚೆಕ್‌ಪೋಸ್ಟ್‌ಗಳನ್ನು ಅಳವಡಿಸಬೇಕೆಂದು ಹೇಳಿದರು.
ಚುನಾವಣಾ ವಿಭಾಗದ ವಿಶೇಷ ಆಯುಕ್ತೆ ಸೆಲ್ವಮಣಿ, ಎಂಸಿಸಿ ನೋಡಲ್ ಅಧಿಕಾರಿ ಮುನೀಶ್ ಮೌದ್ಗಿಲ್, ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿಗಳಾದ ಡಾ. ಕೆ. ಹರೀಶ್ ಕುಮಾರ್, ಕೆ. ದಯಾನಂದ್, ವಿನೋತ್ ಪ್ರಿಯಾ, ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು.
6.22 ಲಕ್ಷ ಮತದಾರರ ಹೆಚ್ಚಳ
ಬೆಂಗಳೂರು ಉತ್ತರ ಕೇಂದ್ರ ಹಾಗೂ ದಕ್ಷಿಣ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 2019ಕ್ಕೆ ಹೋಲಿಸಿದರೆ 6.22 ಲಕ್ಷ ಮತದಾರರು ಹೆಚ್ಚಾಗಿದ್ದಾರೆ. ಈ ಮೂರು ಕ್ಷೇತ್ರಗಳಲ್ಲಿ 2019ರಲ್ಲಿ 7268433 ಮತದಾರರಿದ್ದು 2024ರ ಅಂತಿಮ ಮತದಾರರ ಪಟ್ಟಿಯಂತೆ 7890480 ಮತದಾರರಿದ್ದಾರೆ.
ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ 28 ವಿಧಾನಸಭೆ ಕ್ಷೇತ್ರಗಳಲ್ಲಿ 24 ವಿಧಾನಸಭೆ ಕ್ಷೇತ್ರಗಳು ಈ ಮೂರು ಲೋಕಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿವೆ. ಯಲಹಂಕ ರಾಜರಾಜೇಶ್ವರಿನಗರ ಬೆಂಗಳೂರು ದಕ್ಷಿಣ ಹಾಗೂ ಆನೇಕಲ್ ವಿಧಾನಸಭೆ ಕ್ಷೇತ್ರಗಳು ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ.
ಯಾವುದೆಲ್ಲ ಮಾಡಬಾರದು?
ಮಾದರಿ ನೀತಿ ಸಂಹಿತೆಯು ಲೋಕಸಭಾ ಕ್ಷೇತ್ರದಾದ್ಯಂತ ಜಾರಿಯಲ್ಲಿದೆ. ಮಾದರಿ ನೀತಿ ಸಂಹಿತೆಯನ್ನು ಪಾಲಿಸಲು ರಾಜಕೀಯ ಪಕ್ಷಗಳು ಹಾಗೂ ಚುನಾಯಿತ ಪ್ರತಿನಿಧಿಗಳನ್ನು ಕೋರಲಾಗಿದೆ. ಮಾದರಿ ನೀತಿ ಸಂಹಿತೆ ಯಾವುದೇ ರೀತಿಯಲ್ಲಿಯೂ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವಂತೆ ಜಿಲ್ಲೆಯ ಎಲ್ಲ ಅಧಿಕಾರಿಗಳಿಗೆ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಸೂಚಿಸಿದ್ದಾರೆ.
ಜಿಲ್ಲೆಯಾದ್ಯಂತ ಫ್ಲೆಕ್ಸ್ ಬ್ಯಾನರ್ ಪೋಸ್ಟರ್‌ಗಳನ್ನು 24 ಗಂಟೆಯೊಳಗೆ ತೆರವುಗೊಳಿಸಲು ತಂಡ ರಚನೆ
ಚುನಾಯಿತ ಪ್ರತಿನಿಧಿಗಳಿಗೆ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ನೀಡಿರುವ ಸರ್ಕಾರಿ ವಾಹನಗಳು ಸರ್ಕಾರಿ / ಅರೆ ಸರ್ಕಾರಿ / ನಿಗಮ ಹಾಗೂ ಸಂಘ ಸಂಸ್ಥೆಗಳಿಗೆ ಸಂಬಂಧಿಸಿದ ಪ್ರವಾಸಿ ಮಂದಿರ / ಅತಿಥಿ ಗೃಹಗಳನ್ನು ಜಿಲ್ಲಾಡಳಿತದ ವಶಕ್ಕೆ ಪಡೆಯಲಾಗಿದೆ.
ಅಧಿಕಾರಿಗಳನ್ನು ಹೊರತುಪಡಿಸಿ ಜನಪ್ರತಿನಿಧಿಗಳು ಯಾವುದೇ ಯೋಜನೆಯ ಶಂಕುಸ್ಥಾಪನೆ ನೆರವೇರಿಸಲು ಅವಕಾಶವಿರುವುದಿಲ್ಲ.
ಯಾವುದೇ ವ್ಯಕ್ತಿಗಳಿಗೆ ಅಥವಾ ಸಮುದಾಯಕ್ಕೆ ಆರ್ಥಿಕ ಸಹಾಯಧನವನ್ನು ಯಾವುದೇ ರೂಪದಲ್ಲಿ ಒದಗಿಸಲು ಅಥವಾ ಒದಗಿಸುವುದಾಗಿ ಆಶ್ವಾಸನೆ ನೀಡಲು ಜನಪ್ರತಿನಿಧಿಗಳಿಗೆ ಅವಕಾಶ ಇಲ್ಲ.
ಶಾಸಕರು ಅಥವಾ ಇತರೆ ಯಾವುದೇ ಪ್ರಾಧಿಕಾರ ತನ್ನ ವಿವೇಚನಾಧಿಕಾರ ಬಳಸಿ ನಗದು / ವೆಚ್ಚಗಳನ್ನು ಭರಿಸುವುದಾಗಿ ಭರವಸೆ ನೀಡಲು ಅವಕಾಶವಿರುವುದಿಲ್ಲ.
ಜನಪ್ರತಿನಿಧಿಗಳು ರಸ್ತೆ ನಿರ್ಮಿಸುವುದಾಗಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಕೊಡುವುದಾಗಿ ಯಾವುದೇ ಆಶ್ವಾಸನೆ ನೀಡುವಂತಿಲ್ಲ.
ಯಾವುದೇ ಧರ್ಮ ಭಾಷೆ ಜಾತಿ ಆಧರಿಸಿ ಮತ ಯಾಚಿಸಲು ಅವಕಾಶವಿರುವುದಿಲ್ಲ. ದೇವಸ್ಥಾನ ಚರ್ಚ್ ಮಸೀದಿ ಅಥವಾ ಇನ್ನಾವುದೇ ಧಾರ್ಮಿಕ ಸ್ಥಳಗಳಲ್ಲಿ ಚುನಾವಣಾ ಪ್ರಚಾರ ನಡೆಸುವಂತಿಲ್ಲ.
ಯಾವುದೇ ರಾಜಕೀಯ ಪಕ್ಷ ಅಥವಾ ಅಭ್ಯರ್ಥಿ ಕಾರ್ಯಕರ್ತರಾಗಲಿ ಖಾಸಗಿ ವ್ಯಕ್ತಿಗೆ ಸಂಬಂಧಿಸಿದ ಆವರಣ ಕಟ್ಟಡಗಳಲ್ಲಿ ಯಾವುದೇ ಬಾವುಟ ಬ್ಯಾನರ್ ಬಂಟಿಂಗ್ ಅಳವಡಿಸುವಂತಿಲ್ಲ.
ಲೋಕಸಭೆ ಕ್ಷೇತ್ರಗಳ ಮತದಾರರ ವಿವರ (ಕ್ಷೇತ್ರ; ಪುರುಷರು ಮಹಿಳೆಯರು; ಇತರೆ; ಒಟ್ಟು)
ಬೆಂಗಳೂರು ಉತ್ತರ; 1629089; 1544415; 594; 3174098
ಬೆಂಗಳೂರು ಕೇಂದ್ರ; 1236897; 1161548; 465; 2398910
ಬೆಂಗಳೂರು ದಕ್ಷಿಣ; 1195285; 1121788; 399; 2317472
ಒಟ್ಟು; 4061271; 3827751; 7890480
ಮತಗಟ್ಟೆ
2125; ಬೆಂಗಳೂರು ಕೇಂದ್ರ
2911; ಬೆಂಗಳೂರು ಉತ್ತರ
2118; ಬೆಂಗಳೂರು ದಕ್ಷಿಣ
ಮಾದರಿ ನೀತಿ ಸಂಹಿತೆ ನಿರ್ವಹಣೆ ತಂಡ 104; ಚೆಕ್‌ಪೋಸ್ಟ್ 679; ಸೆಕ್ಟರ್ ಆಫೀಸರ್ 297; ಫ್ಲೈಯಿಂಗ್ ಸ್ಕ್ವಾಡ್ 226; ವಿಡಿಯೊ ಸರ್ವೆಲನ್ಸ್ ತಂಡ (ವಿಎಸ್‌ಟಿ) 339; ಸ್ಯಾಟಿಕ್ ಸರ್ವೆಲನ್ಸ್ ತಂಡ (ಎಸ್‌ಎಸ್‌ಟಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.