ಬೆಂಗಳೂರು: ನಗರದ ರಸ್ತೆಗಳಲ್ಲಿ ಇನ್ನೂ 11 ಸಾವಿರಕ್ಕೂ ಹೆಚ್ಚು ಗುಂಡಿಗಳಿವೆ. ಇವುಗಳೆಲ್ಲವನ್ನು ಮುಚ್ಚಲು ಬಿಬಿಎಂಪಿ ಎಂಜಿನಿಯರ್‌ಗಳಿಗೆ ಮತ್ತೆ ಹೊಸ ಗಡುವು ನೀಡಿದೆ. ನ.10ರೊಳಗೆ ಎಲ್ಲ ಗುಂಡಿ ಮುಚ್ಚದಿದ್ದರೆ ಶಿಸ್ತುಕ್ರಮ ತೆಗೆದು
ಕೊಳ್ಳುವುದಾಗಿಯೂ ಎಚ್ಚರಿಸಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತಿ ಸಹಾಯಕ ಎಂಜಿನಿಯರ್‌ಗೂ ಅವರ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಮುಚ್ಚಲು ಗುರಿ ನೀಡಲಾಗಿದೆ.
ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಮುಖ್ಯ ಎಂಜಿನಿಯರ್
ಗಳು ಇದರ ನೇತೃತ್ವ ವಹಿಸಲಿದ್ದಾರೆ. ಜಂಟಿ ಆಯುಕ್ತರು ಮೇಲ್ವಿಚಾರಣೆ ನಡೆಸಲಿದ್ದಾರೆ.
ನ.5ರೊಳಗೆ ಕಾಮಗಾರಿ ಮುಗಿಸಲು ಸೂಚಿಸಲಾಗಿದೆ. ಇನ್ನಷ್ಟು ಉಳಿದರೆ ನ.10ರೊಳಗೆ ಎಲ್ಲ ಗುಂಡಿಗಳು ಮುಚ್ಚಬೇಕು. ಅದಾಗದಿದ್ದರೆ ಶಿಸ್ತುಕ್ರಮ ಎದುರಿಸಬೇಕಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ಸುತ್ತೋಲೆ ರವಾನಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಅತಿಹೆಚ್ಚು ಮಳೆಯಿಂದ ರಸ್ತೆ ಗುಂಡಿಗಳ ಸಂಖ್ಯೆ ಹೆಚ್ಚಾಗಿದೆ. ಇವುಗಳನ್ನು ಮುಚ್ಚಲು ಮಳೆ ಅಡ್ಡಿಯಾಗಿತ್ತು. ಕಳೆದ ಒಂದು ವಾರದಲ್ಲಿ ಮಳೆ ಇಲ್ಲದ್ದರಿಂದ ಗುಂಡಿ ಮುಚ್ಚುವ ಕಾರ್ಯ ಸಾಕಷ್ಟು ವೇಗವಾಗಿ ನಡೆದಿದೆ. ಸುಮಾರು 19 ಸಾವಿರ ಗುಂಡಿಗಳನ್ನು ಮುಚ್ಚಲಾಗಿದೆ ಎಂದು ಬಿಬಿಎಂಪಿ ಯೋಜನೆ ವಿಭಾಗದ ವಿಶೇಷ ಆಯುಕ್ತ ರವೀಂದ್ರ ತಿಳಿಸಿದರು.
ನ.1ರೊಳಗೆ ರಸ್ತೆಗಳ ಗುಂಡಿಗಳನ್ನು ಮುಚ್ಚಲು ಯೋಜನೆ ರೂಪಿಸಲಾಗಿತ್ತು. ಆದರೆ, ಡಾಂಬರು ಘಟಕಗಳಲ್ಲಿ ಕಾರ್ಯನಿರ್ವಹಿಸುವವರು ದೀಪಾವಳಿ ಹಬ್ಬದಿಂದಾಗಿ ಕೆಲಸಕ್ಕೆ ಬಂದಿರಲಿಲ್ಲ. ಹೀಗಾಗಿ, ಗುರಿ ಮುಟ್ಟಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.
ಪೂರ್ವದಲ್ಲಿ ಅತಿಹೆಚ್ಚು: ಬಿಬಿಎಂಪಿಯ ಪೂರ್ವ ವಲಯದಲ್ಲಿ ಈ ವರ್ಷ ಒಟ್ಟು 5,776 ಗುಂಡಿಗಳನ್ನು ಗುರುತಿಸ
ಲಾಗಿದೆ. ಈವರೆಗೆ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಿದ್ದರೂ ಇನ್ನೂ 1,646 ಗುಂಡಿಗಳು ಬಾಯಿ ತೆರೆದುಕೊಂಡೇ ಇವೆ. ಬಾಕಿ ಇರುವ ಗುಂಡಿಯಲ್ಲೂ ವಲಯಗಳಲ್ಲಿ ‘ಪೂರ್ವ’ವೇ ಮುಂದು. ಇನ್ನು, ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಗುಂಡಿ ಮುಚ್ಚುವ ಪೈಥಾನ್ ಯಂತ್ರ ಕೆಲಸವೇ ಮಾಡುತ್ತಿಲ್ಲ. ಅದರ ಗುತ್ತಿಗೆಯನ್ನು ರದ್ದುಮಾಡಿಸಲು ಸರ್ಕಾರಕ್ಕೆ ಪತ್ರವನ್ನೂ ಬಿಬಿಎಂಪಿ ಬರೆದಿದೆ. ಹೀಗಾಗಿ, ಪೈಥಾನ್ 5,605 ಗುಂಡಿಗಳನ್ನು ಮುಚ್ಚಬೇಕಿತ್ತು. 1,934 ಮುಚ್ಚಿದ್ದು, 3,671 ಗುಂಡಿಗಳು ಬಾಕಿ ಇವೆ.
ಬಿಬಿಎಂಪಿ ವ್ಯಾಪ್ತಿಯಲ್ಲಿರುವ ರಸ್ತೆ ಗುಂಡಿಗಳ ವಿವರ
ವಲಯ;ಗುರುತಿಸಲಾದ ಗುಂಡಿಗಳು;ದುರಸ್ತಿ;ಬಾಕಿ
ಬೊಮ್ಮನಹಳ್ಳಿ;1,409;1,090;319
ದಾಸರಹಳ್ಳಿ;1,918;601;1,317
ಪೂರ್ವ;5,776;4,130;1,646
ಮಹದೇವಪುರ;2,004;1,409;595
ಆರ್.ಆರ್. ನಗರ;3,196;2,351;845
ದಕ್ಷಿಣ;1,915;1,514;401
ಪಶ್ಚಿಮ;4,501;4,079;422
ಯಲಹಂಕ;1,015;592;423
ರಸ್ತೆ ಮೂಲಸೌಕರ್ಯ;3,233;1,556;1,677
ಸಿಇ ಯೋಜನೆ (ಪೈಥಾನ್);5,605;1,934;3,671
ಒಟ್ಟು;30,572;19,256;11,316
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.