ADVERTISEMENT

ಎನ್‌ಟಿಐ ಲೇಔಟ್‌ನಲ್ಲಿ ಉದ್ಯಾನಗಳೇ ಮಾಯ!

ಎನ್‌ಟಿಐ ಹೌಸಿಂಗ್ ಸೊಸೈಟಿ: ನಾಗರಿಕ ಸೌಕರ್ಯಗಳಿಗೆ ಜಾಗ ಕಾಯ್ದಿರಿಸದೇ ಶೇ 70ರಷ್ಟು ನಿವೇಶನಗಳ ಬಿಡುಗಡೆ

ವಿಜಯಕುಮಾರ್ ಎಸ್.ಕೆ.
Published 24 ಫೆಬ್ರುವರಿ 2022, 19:52 IST
Last Updated 24 ಫೆಬ್ರುವರಿ 2022, 19:52 IST
ಉದ್ಯಾನಕ್ಕಾಗಿ ಗೊತ್ತುಪಡಿಸಲಾದ ರಸ್ತೆ ಮತ್ತು ರೈಲು ಮಾರ್ಗದ ನಡುವಿನ ಜಾಗ
ಉದ್ಯಾನಕ್ಕಾಗಿ ಗೊತ್ತುಪಡಿಸಲಾದ ರಸ್ತೆ ಮತ್ತು ರೈಲು ಮಾರ್ಗದ ನಡುವಿನ ಜಾಗ   

ಬೆಂಗಳೂರು: ರಾಷ್ಟ್ರೀಯ ಕ್ಷಯರೋಗ ಸಂಸ್ಥೆ (ಎನ್‌ಟಿಐ) ಹೌಸಿಂಗ್ ಸೊಸೈಟಿ ಅಭಿವೃದ್ಧಿಪಡಿಸಿರುವ ರಾಜೀವ್‌ಗಾಂಧಿ ಬಡಾವಣೆ ಹಲವು ಅಕ್ರಮ ಮತ್ತು ಗೊಂದಲಗಳ ಗೂಡಾಗಿ ಮಾರ್ಪಟ್ಟಿದೆ. ನಾಗರಿಕ ಸೌಕರ್ಯಗಳಿಗೆ (ಸಿ.ಎ) ಮೀಸಲಿಡಬೇಕಿದ್ದ ಜಾಗ ಭೂ ಕಬಳಿಕೆದಾರರ ಪಾಲಾಗಿದೆ. ಬಡಾವಣೆಯಲ್ಲಿ ಉದ್ಯಾನಗಳೇ ಮಾಯವಾಗಿವೆ.

ಕೊಡಿಗೇಹಳ್ಳಿ, ಕೋತಿಹೊಸಹಳ್ಳಿ ಮತ್ತು ಬ್ಯಾಟರಾಯನಪುರದ ವಿವಿಧ ಸರ್ವೆ ನಂಬರ್‌ಗಳಲ್ಲಿ 214 ಎಕರೆ ಜಾಗವನ್ನು ಕಂದಾಯ ಇಲಾಖೆ ಸ್ವಾಧೀನ ಮಾಡಿಕೊಂಡಿತು. ಅದನ್ನು ವಸತಿ ಬಡಾವಣೆಯಾಗಿ ಅಭಿವೃದ್ಧಿಪಡಿಸಲು ಎನ್‌ಟಿಐ ಹೌಸಿಂಗ್ ಸೊಸೈಟಿಗೆ ಹಸ್ತಾಂತರ ಮಾಡಿತು. ಬಿಡಿಎ ಕಾಯ್ದೆ ಪ್ರಕಾರ, ಬಡಾವಣೆಯಲ್ಲಿ ಶೇ 45ರಷ್ಟು ಜಾಗವನ್ನು ರಸ್ತೆ, ಉದ್ಯಾನ, ಆಟದ ಮೈದಾನ ಮುಂತಾದ ನಾಗರಿಕ ಸೌಕರ್ಯಗಳಿಗಾಗಿ ಮೀಸಲಿಡಬೇಕು. ಮಂಜೂರಾದ ಬಡಾವಣೆ ನಕ್ಷೆಗೆ ಅನುಗುಣವಾಗಿ ಉದ್ಯಾನಕ್ಕೆ ಮೀಸಲಿಟ್ಟ ಜಾಗಕ್ಕೆ ಬೇಲಿ ಹಾಕಬೇಕು. ಆ ಬಳಿಕವಷ್ಟೇ ಅಭಿವೃದ್ಧಿಪಡಿಸಿದ ನಿವೇಶನಗಳನ್ನು ಬಿಡುಗಡೆ ಮಾಡಿ ಸದಸ್ಯರಿಗೆ ಹಂಚಿಕೆ ಮಾಡಲು ಅನುಮತಿ ನೀಡಲಾಗುವುದು ಎಂಬ ಷರತ್ತನ್ನು ಬಿಡಿಎ ವಿಧಿಸಿತ್ತು.

ಮೊದಲ ಹಂತದಲ್ಲಿ 162 ಎಕರೆ 9 ಗುಂಟೆ ಜಾಗಕ್ಕೆ ಮಾತ್ರ ಯೋಜನಾ ಮಂಜೂರಾತಿಯನ್ನು ಬಿಡಿಎ ನೀಡಿತು. ಒಟ್ಟು 2,102 ನಿವೇಶನಗಳಲ್ಲಿ ಶೇ 60ರಷ್ಟನ್ನು ಅಂದರೆ 1,265 ನಿವೇಶನಗಳನ್ನು 2010ರಲ್ಲಿ ಬಿಡುಗಡೆ ಮಾಡಿತು. 2015ರಲ್ಲಿ ಮತ್ತೆ ಶೇ 10ರಷ್ಟು, ಅಂದರೆ 630 ನಿವೇಶನಗಳನ್ನು ಬಿಡುಗಡೆ ಮಾಡಿತು.

ADVERTISEMENT

ಸೊಸೈಟಿ ನೀಡಿರುವ ಪರಿತ್ಯಾಜನಾ ಪತ್ರದ ಪ್ರಕಾರ, ಶೇ 45ರಷ್ಟು ಜಾಗವನ್ನು ಸಿ.ಎ ನಿವೇಶನಗಳಿಗೆ ಕಾಯ್ದಿರಿಸಲಾಗಿದೆ. ಒಟ್ಟು 97,882 ಚದರ ಮೀಟರ್‌ (10.53 ಲಕ್ಷ ಚದರ ಅಡಿ) ಜಾಗವನ್ನು 29 ಉದ್ಯಾನಗಳಿಗೆ ಕಾಯ್ದಿರಿಸಲಾಗಿದೆ ಎಂದು ಮಂಜೂರಾದ ನಕ್ಷೆ ಮತ್ತು ಕಾಗದ ಪತ್ರಗಳಲ್ಲಿ ತೋರಿಸಲಾಗಿದೆ. ನಕ್ಷೆಯಲ್ಲಿ ತೋರಿಸಿದಷ್ಟು ಉದ್ಯಾನಗಳು ಬಡಾವಣೆಯಲ್ಲಿ ಇಲ್ಲ. ಕೆಲವೆಡೆ ಉದ್ಯಾನಗಳಿವೆಯಾದರೂ ಅವು ನಿಗದಿತ ಅಳತೆಯಷ್ಟಿಲ್ಲ. ಚೈನ್‌ಲಿಂಕ್ ಬೇಲಿಗಳಂತೂ ಇಲ್ಲವೇ ಇಲ್ಲ.

ಉದಾಹರಣೆಗೆ ಪರಿತ್ಯಾಜನಾ ಪತ್ರದಲ್ಲಿ ನೀಡಿರುವ ಪರಿಷ್ಕೃತ ಪಟ್ಟಿ ಪ್ರಕಾರ, ಉದ್ಯಾನ ಸಂಖ್ಯೆ–1ರಲ್ಲಿ 952 ಚದರ ಮೀಟರ್‌ (10,247 ಚದರ ಅಡಿ) ಜಾಗ ಇರಬೇಕು. ಮಂಜೂರಾದ ನಕ್ಷೆಯಲ್ಲೂ ಇದನ್ನು ಉಲ್ಲೇಖಿಸಲಾಗಿದೆ. ಪಶ್ಚಿಮ ಮತ್ತು ಉತ್ತರಕ್ಕೆ ಜಿಕೆವಿಕೆ, ಪೂರ್ವಕ್ಕೆ ರಸ್ತೆ ಮತ್ತು ದಕ್ಷಿಣಕ್ಕೆ ಜಿಕೆವಿಕೆ ಮತ್ತು ಸೊಸೈಟಿ ಜಾಗ ಎಂದು ಹೇಳಲಾಗಿದೆ. ‘ಪ್ರಜಾವಾಣಿ’ ತಂಡ ಸ್ಥಳಕ್ಕೆ ತೆರಳಿ ನಕ್ಷೆಯನ್ವಯ ಉದ್ಯಾನ ಇದೆಯೇ ಎಂದು ಪರಿಶೀಲನೆ ನಡೆಸಿತು. ಅಲ್ಲಿ ರಸ್ತೆಗೆ ಹೊಂದಿಕೊಂಡಂತೆಯೇ ಪಶ್ಚಿಮ ಮತ್ತು ಉತ್ತರಕ್ಕೆ ಜಿಕೆವಿಕೆ ಆವರಣ ಗೋಡೆ ಇದೆ. ಆದರೆ, ಉದ್ಯಾನವಾಗಲಿ, ಉದ್ಯಾನಕ್ಕೆ ಮೀಸಲಿಟ್ಟ ಜಾಗವಾಗಲಿ ಕಾಣಿಸುವುದಿಲ್ಲ.

‌ಅದೇ ರಸ್ತೆಯಲ್ಲಿ ಬಲ ತಿರುವು ಪಡೆದು ಮುಂದೆ ಸಾಗಿದರೆ ರಸ್ತೆಯ ಕೊನೆಯಲ್ಲಿ ಖಾಸಗಿ ಆಸ್ತಿಯ ಪಕ್ಕದಲ್ಲಿ 4,532.57 ಚದರ ಮೀಟರ್‌ (48,790 ಚದರ ಅಡಿ) ಜಾಗದಲ್ಲಿ ಉದ್ಯಾನ ಸಂಖ್ಯೆ–4 ಇದೆ ಎಂದು ನಕ್ಷೆಯಲ್ಲಿ ಉಲ್ಲೇಖಿಸಲಾಗಿದೆ. ಅದನ್ನು ಹುಡುಕಿಕೊಂಡು ಹೋದರೆ, ರಸ್ತೆ ಕೊನೆಯವರೆಗೂ ಎಲ್ಲೂ ಉದ್ಯಾನ ಕಾಣಸಿಗದು. ಎದುರಿಗೆ ಖಾಸಗಿ ಆಸ್ತಿಯ ಕಾಂಪೌಂಡ್ ಸಿಗುತ್ತದೆ. ಉದ್ಯಾನಕ್ಕೆ ಮೀಸಲಿಟ್ಟಿರುವ ಅಷ್ಟು ದೊಡ್ಡ ಅಳತೆಯ ಜಾಗವೂ ಕಾಣಿಸುವುದಿಲ್ಲ.

ಕೊಡಿಗೇಹಳ್ಳಿ ರೈಲು ನಿಲ್ದಾಣಕ್ಕೆ ಹೊಂದಿಕೊಂಡಂತೆ ರಸ್ತೆ ಮತ್ತು ರೈಲು ಮಾರ್ಗದ ಮಧ್ಯದಲ್ಲಿ ಉದ್ಯಾನ ಸಂಖ್ಯೆ 13 (6691.69 ಚದರ ಮೀಟರ್) ಮತ್ತು 14 (3891.33 ಚದರ ಮೀಟರ್‌) ಇದೆ ಎಂದು ನಕ್ಷೆ ಹೇಳುತ್ತದೆ. ರೈಲ್ವೆ ಮಾರ್ಗದ ಪಕ್ಕದಲ್ಲೇ ರಸ್ತೆ ಇದೆ. ರಸ್ತೆ ಮತ್ತು ರೈಲು ಮಾರ್ಗದ ಮಧ್ಯದಲ್ಲಿ ಉದ್ಯಾನ ಇದೆ ಎಂಬುದನ್ನು ಬರಿಗಣ್ಣಿನಿಂದ ಗುರುತಿಸಲು ಯಾರಿಂದಲೂ ಸಾಧ್ಯವಿಲ್ಲ. ಇರುವ ಸಣ್ಣ ಜಾಗ ರೈಲ್ವೆ ಇಲಾಖೆಗೆ ಸೇರಿದ್ದೋ, ರಸ್ತೆ ಜಾಗವೋ ಎಂಬುದೂ ಸ್ಪಷ್ಟವಾಗುವುದಿಲ್ಲ. ಇದು ಉದ್ಯಾನಕ್ಕೆ ಕಾಯ್ದಿರಿಸಿದ ಜಾಗ ಎಂದು ಭಾವಿಸಿಕೊಂಡರೂ ಅಲ್ಲಿ ಚೈನ್‌ಲಿಂಕ್ ಬೇಲಿಯಂತೂ ಇಲ್ಲವೇ ಇಲ್ಲ.

‘ನಾಗರಿಕ ಸೌಕರ್ಯಗಳಿಗೆ ಜಾಗ ಕಾಯ್ದಿರಿಸದಿದ್ದರೂ ಶೇ 70ರಷ್ಟು ನಿವೇಶನಗಳನ್ನು ಬಿಡಿಎ ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ. ಇನ್ನೂಳಿದ ಶೇ 30ರಷ್ಟು ನಿವೇಶನ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಬಿಡಿಎ ನಿಯಮಗಳು ಮತ್ತು ನಕ್ಷೆಗಳು ಕಾಗದಲ್ಲಷ್ಟೇ ಉಳಿದಿವೆ’ ಎಂದು ಸ್ಥಳೀಯರು ದೂರುತ್ತಾರೆ.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಸೊಸೈಟಿಯ ಪದಾಧಿಕಾರಿಗಳು ಲಭ್ಯರಾಗಲಿಲ್ಲ.

‘ಕ್ರಿಮಿನಲ್ ಪ್ರಕರಣ ದಾಖಲಿಸಬೇಕು’

‘ಮಂಜೂರಾದ ನಕ್ಷೆ ಪ್ರಕಾರ ಉದ್ಯಾನಕ್ಕೆ ಜಾಗ ಮೀಸಲಿಡದೆ ನಿವೇಶನ ಹಂಚಿಕೆ ಮಾಡುವ ಮೂಲಕ ಸರ್ಕಾರ ಮತ್ತು ಅಮಾಯಕರಿಗೆ ಎನ್‌ಟಿಐ ಸೊಸೈಟಿ ಪದಾಧಿಕಾರಿಗಳು ವಂಚಿಸಿದ್ದಾರೆ.

ಉದ್ಯಾನ ಜಾಗದಲ್ಲಿ ಶೇ 70ರಷ್ಟನ್ನು ನಿವೇಶನವಾಗಿ ಪರಿವರ್ತಿಸಿ ಮಾರಾಟ ಮಾಡಲಾಗಿದೆ. ಈ ಪ್ರದೇಶದಲ್ಲಿ ಚದರ ಅಡಿಗೆ ₹25 ಸಾವಿರ ದರವಿದ್ದು, ₹1,875 ಕೋಟಿ ಮೌಲ್ಯದ ಜಾಗವನ್ನು ಅಕ್ರಮವಾಗಿ ಮಾರಾಟವಾಗಿದೆ. ಮಾರಾಟ ಮಾಡಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು’ ಎಂದು ಚಕ್ರಪಾಣಿ ಫೌಂಡೇಷನ್ ಅಧ್ಯಕ್ಷ ಕೆ.ಎನ್.ಚಕ್ರಪಾಣಿ ಅವರು ಒತ್ತಾಯಿಸಿದರು.

‘ಈ ಸಂಬಂಧ ಬಿಡಿಎಗೆ ಈಗಾಗಲೇ ದೂರು ನೀಡಿದ್ದೇನೆ. ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಿ ತನಿಖೆ ನಡೆಸಬೇಕು. ಸ್ಥಳ ಪರಿಶೀಲಿಸದೆ ನಿವೇಶನ ಬಿಡುಗಡೆ ಮಾಡಿರುವ ಬಿಡಿಎ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಬೇಕು. ಬಾಕಿ ಶೇ 30ರಷ್ಟು ಅಂದರೆ 630 ನಿವೇಶನಗಳನ್ನು ಬಿಡಿಎ ಬಿಡುಗಡೆ ಮಾಡಬಾರದು’ ಎಂದು ಆಗ್ರಹಿಸಿದರು.

ಮುಖ್ಯ ನ್ಯಾಯಮೂರ್ತಿಗೆ ದೂರು

ರಾಜೀವ್‌ ಗಾಂಧಿ ಬಡಾವಣೆಯಲ್ಲಿ ಉದ್ಯಾನ, ರಸ್ತೆ ಸೇರಿದಂತೆ ವಿವಿಧ ನಾಗರಿಕ ಸೌಕರ್ಯಗಳಿಗೆ ಶೇ 45ರಷ್ಟು ಜಾಗ ಮೀಸಲಿಡದಿರುವ ಬಗ್ಗೆ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗೆ ಎನ್‌ಟಿಐ ಸೊಸೈಟಿ ಸದಸ್ಯ ಟಿ.ಸಿ. ಅಚ್ಚಯ್ಯ ದೂರು ನೀಡಿದ್ದಾರೆ.

‘20 ವರ್ಷಗಳ ಹಿಂದೆಯೇ ಪೂರ್ಣ ಪ್ರಮಾಣದ ಹಣ ನೀಡಿದ್ದರೂ, ಈವರೆಗೆ ನಮಗೆ ನಿವೇಶನ ಸಿಕ್ಕಿಲ್ಲ. 150ಕ್ಕೂ ಹೆಚ್ಚು ಪ್ರಕರಣಗಳು ಸೊಸೈಟಿ ವಿರುದ್ಧ ದಾಖಲಾಗಿವೆ. ಹಂಚಿಕೆ ಮಾಡಿರುವ ನಿವೇಶನಗಳ ಅಳತೆಗಳಲ್ಲೂ ವ್ಯತ್ಯಾಸ ಇದೆ. ಸೊಸೈಟಿ ಭಾರಿ ಪ್ರಮಾಣದ ಅವ್ಯವಹಾರ ನಡೆಸಿದೆ. ಈ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ಆದೇಶಿಸಬೇಕು’ ಎಂದು ಅವರು ದೂರಿನಲ್ಲಿ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.