ADVERTISEMENT

ಯುವತಿ ನಗ್ನ ಫೋಟೊ: ಜೈಲಿನಿಂದ ತಾಯಿಗೆ ಬ್ಲ್ಯಾಕ್‌ಮೇಲ್

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2024, 0:15 IST
Last Updated 16 ಫೆಬ್ರುವರಿ 2024, 0:15 IST
   

ಬೆಂಗಳೂರು: ಯುವತಿಯೊಬ್ಬರ ನಗ್ನ ಫೋಟೊ ಇಟ್ಟುಕೊಂಡು ಅವರ ತಾಯಿಗೆ ಜೈಲಿನಿಂದ ಕರೆ ಮಾಡಿ ಬ್ಲ್ಯಾಕ್‌ಮೇಲ್ ಮಾಡಿದ್ದ ಆರೋಪದಡಿ ರೌಡಿ ಮನೋಜ್ ಅಲಿಯಾಸ್ ಕೆಂಚನ ವಿರುದ್ಧ ಯಲಹಂಕ ನ್ಯೂ ಟೌನ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಪ್ರಕರಣವೊಂದರಲ್ಲಿ ಬಂಧಿತನಾಗಿ ಜೈಲಿನಲ್ಲಿರುವ ಮನೋಜ್, ಅಲ್ಲಿಂದಲೇ ಕರೆ ಮಾಡಿ ಬೆದರಿಕೆಯೊಡ್ಡಿದ್ದ. ಯುವತಿ ತಾಯಿ ನೀಡಿದ್ದ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಲಾಗಿದೆ. ಸಿಸಿಬಿ ಅಧಿಕಾರಿಗಳು ಆರೋಪಿಯನ್ನು ಬಾಡಿ ವಾರಂಟ್ ಮೇಲೆ ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಯುವತಿಯ ಫೋಟೊವನ್ನು ಮಾರ್ಪಿಂಗ್ ಮೂಲಕ ನಗ್ನ ರೀತಿಯಲ್ಲಿ ಸೃಷ್ಟಿಸಿದ್ದ ಮನೋಜ್, ಯುವತಿಯ ತಾಯಿಗೆ ಕಳುಹಿಸಿದ್ದ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ತಾಯಿಗೆ ಕರೆ ಮಾಡಿದ್ದ ಎನ್ನಲಾದ ಮನೋಜ್, ‘ನಿನ್ನ ಮಗಳ ಫೋಟೊವನ್ನು ಅಳಿಯನಿಗೆ ಕಳುಹಿಸುತ್ತೇನೆ. ಈ ರೀತಿ ಮಾಡಬಾರದೆಂದರೆ, ಹಣ ಕೊಡು’ ಎಂದು ಬೇಡಿಕೆ ಇರಿಸಿದ್ದ. ಹೆದರಿದ್ದ ತಾಯಿ, ಮನೋಜ್‌ಗೆ ₹ 40 ಸಾವಿರ ನೀಡಿದ್ದರು’ ಎಂದು ತಿಳಿಸಿವೆ.

ADVERTISEMENT

ಪುನಃ ₹ 5 ಲಕ್ಷಕ್ಕೆ ಬೇಡಿಕೆ: ‘ಸಹಚರ ಕಾರ್ತಿಕ್ ಮೂಲಕ ಪುನಃ ಕರೆ ಮಾಡಿಸಿದ್ದ ಮನೋಜ್, ₹ 5 ಲಕ್ಷ ನೀಡುವಂತೆ ಯುವತಿಯ ತಾಯಿಗೆ ಬೇಡಿಕೆ ಇರಿಸಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ವಾಟ್ಸ್‌ಆ್ಯಪ್ ಹಾಗೂ ಮೆಸೆಂಜರ್‌ ಮೂಲಕ ಮನೋಜ್ ಕರೆ ಮಾಡಿದ್ದ. ಈತನ ಕಿರುಕುಳ ಹೆಚ್ಚಾಗುತ್ತಿದ್ದಂತೆ ಬೇಸತ್ತ ತಾಯಿ ಪೊಲೀಸರಿಗೆ ಮಾಹಿತಿ ನೀಡಿದ್ದರು’ ಎಂದು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.