ಬೆಂಗಳೂರು: ‘ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಅಧಿಕಾರಿಗಳ ಸಂಖ್ಯೆ ಕ್ಷೀಣಿಸುತ್ತಿದೆ’ ಎಂದು ಮಳವಳ್ಳಿ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಹೇಳಿದರು.
ಬೆಂಗಳೂರು ವಿಶ್ವವಿದ್ಯಾಲಯದ ಬಿ. ಬಸವಲಿಂಗಪ್ಪ ಅಭಿವೃದ್ಧಿ ಅಧ್ಯಯನ ಸಂಸ್ಥೆಯು (ಬಿ. ಬಿಡ್ಸ್) ಬಿ. ಬಸವಲಿಂಗಪ್ಪ ಅವರ ಪರಿನಿರ್ವಾಣ ದಿನ, ಡಾ.ಬಿ.ಆರ್. ಅಂಬೇಡ್ಕರ್ ಅವರು ಮನುಸ್ಮೃತಿ ಸುಟ್ಟ ದಿನದ ಸ್ಮರಣಾರ್ಥವಾಗಿ ಶುಕ್ರವಾರ ಆಯೋಜಿಸಿದ್ದ ‘ಕನ್ನಡ ಸಾಹಿತ್ಯ ಮತ್ತು ಬೂಸಾ ಸಾಂಸ್ಕೃತಿಕ ದಂಗೆ’ ದುಂಡು ಮೇಜಿನ ಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳು ಕೇಂದ್ರ ಲೋಕಸೇವಾ ಆಯೋಗ ಹಾಗೂ ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಗಳನ್ನು ತೆಗೆದುಕೊಂಡು, ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗಿ ಸರ್ಕಾರದ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಬೇಕು. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯಗಳು ಕಾರ್ಯಪ್ರವೃತ್ತರಾಗಬೇಕು. ರಾಜಕೀಯವಾಗಿ ಸಮುದಾಯಗಳ ಒಗ್ಗಟ್ಟನ್ನು ಛಿದ್ರಗೊಳಿಸುವ ಶಕ್ತಿಗಳು ಹೆಚ್ಚಾಗಿರುವ ಸಂದರ್ಭದಲ್ಲಿ ಬಸವಲಿಂಗಪ್ಪ ಅವರ ಕನಸುಗಳಿಗೆ ಜೀವ ತುಂಬಬೇಕಾಗಿದೆ. ತಳ ಸಮುದಾಯಗಳು ಒಗ್ಗಟ್ಟಾಗಿ ಹೋರಾಟ ಮಾಡಬೇಕು’ ಎಂದು ಕರೆ ನೀಡಿದರು.
ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಜಯಕರ ಎಂ.ಎಸ್ ಅವರು, ಬಸವಲಿಂಗಪ್ಪ ಅವರ ಸ್ಮಾರಕ ಸಭಾಂಗಣ, ಪುತ್ಥಳಿ, ವಸ್ತುಸಂಗ್ರಹಾಲಯ ನಿರ್ಮಾಣ, ವಿಸ್ತರಣೆ ಮತ್ತು ಸಂಶೋಧನಾ ಕಾರ್ಯಕ್ರಮಗಳು ಸೇರಿದಂತೆ ಕೌಶಲಾಧಾರಿತ ಸ್ವಯಂ ಉದ್ಯೋಗ ತರಬೇತಿ ನೀಡಲು ₹ 25 ಕೋಟಿ ಅನುದಾನ ನೀಡುವಂತೆ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಮನುಸ್ಮೃತಿ ಕೃತಿಯ ಪುಟಗಳನ್ನು ವಿದ್ಯಾರ್ಥಿನಿಯರು ಬೆಂಕಿಗೆ ಹಾಕಿದರು.
ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಜಯಕರ ಎಂ.ಎಸ್. ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಕುಲಸಚಿವ ಶೇಖ ಲತೀಫ್, ಮಾಜಿ ಸಚಿವ ಬಿ. ಸೋಮಶೇಖರ್, ದಲಿತ ಮುಖಂಡರಾದ ಬಿ. ಗೋಪಾಲ್, ಎಂ. ವೆಂಕಟಸ್ವಾಮಿ, ಪತ್ರಕರ್ತ ಶಿವಾಜಿ ಗಣೇಶನ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.