ಬೆಂಗಳೂರು: ‘ಯಾವ ಮಕ್ಕಳೂ ಶಿಕ್ಷಣದಿಂದ ವಂಚಿತರಾಗಬಾರದು. ಪ್ರತಿ ಮಗುವಿಗೂ ಕಡ್ಡಾಯವಾಗಿ ಶಿಕ್ಷಣ ದೊರೆಯಲೇಬೇಕು’ ಎಂದು ಜನಪ್ರತಿನಿಧಿಗಳು ಯಾವಾಗಲೂ ಹೇಳುತ್ತಲೇ ಇರುತ್ತಾರೆ. ಆದರೆ, ಬಿಬಿಎಂಪಿ ಶಾಲೆಗಳಿಗೆ ಅಗತ್ಯವಾಗಿರುವ ಮೂಲಸೌಕರ್ಯ ಒದಗಿಸಲು ಮಾತ್ರ ಇವರು ಮುಂದಾಗುತ್ತಿಲ್ಲ.
ಅಮೃತ ನಗರೋತ್ಥಾನ ಯೋಜನೆಯಲ್ಲಿ ₹6 ಸಾವಿರ ಕೋಟಿ ಅನುಮೋದನೆಯಾಗಿದೆ. ರಸ್ತೆ, ಚರಂಡಿ, ಫ್ಲೈಓವರ್, ಕಸ ಎಂದೆಲ್ಲ ನೂರಾರು ಕೋಟಿ ಬಿಡುಗಡೆ ಮಾಡಿಸಿಕೊಂಡಿರುವ ಶಾಸಕರು, ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಆಸಕ್ತಿ ತೋರಿಲ್ಲ. ಹೀಗಾಗಿಯೇ, ಶಾಲೆಗಳ ಅಭಿವೃದ್ಧಿ ಹಾಗೂ ಹೊಸ ಕಟ್ಟಡ ನಿರ್ಮಾಣಕ್ಕೆ ಸಿಕ್ಕಿರುವುದು ₹180 ಕೋಟಿ.
ಒಂದನೇ ತರಗತಿಯಿಂದ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿಗಳಲ್ಲಿ ಸುಮಾರು 25 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 2021–22ನೇ ಸಾಲಿಗಿಂತ 2022–2023ನೇ ಸಾಲಿನಲ್ಲಿ ಸುಮಾರು 6 ಸಾವಿರ ವಿದ್ಯಾರ್ಥಿಗಳು ಹೆಚ್ಚಾಗಿದ್ದಾರೆ. ಆದರೆ, ಪೀಠೋಪಕರಣ ಇಲ್ಲ, ಪ್ರಯೋಗಾಲಯಗಳಿಲ್ಲ. ಕಟ್ಟಡ ಸೋರುತ್ತಿದೆ, ಶೌಚಾಲಯ ಇಲ್ಲ. ಇದನ್ನು ತುರ್ತಾಗಿ ಒದಗಿಸಲು ಮುಖ್ಯಮಂತ್ರಿ ಸೇರಿದಂತೆ ಯಾವ ಶಾಸಕರೂ ಹೆಚ್ಚು ಒತ್ತು ನೀಡಿಲ್ಲ ಎಂಬ ಆರೋಪ ವ್ಯಕ್ತವಾಗಿದೆ.
ಕೋವಿಡ್‌ಗಿಂತ ಮುಂಚಿನ ಸಮಯಕ್ಕೆ ಹೋಲಿಸಿದರೆ ಬಿಬಿಎಂಪಿ ಶಾಲೆ–ಕಾಲೇಜುಗಳಲ್ಲಿ ಈಗ ಸುಮಾರು 10 ಸಾವಿರ ವಿದ್ಯಾರ್ಥಿಗಳು ಹೆಚ್ಚಾಗಿದ್ದಾರೆ. ಆದರೆ, ಸೌಲಭ್ಯಗಳನ್ನು ನೀಡಲು ಇಲ್ಲಿ ಹಣವಿಲ್ಲ.ಪರಿಣತ ಬೋಧನಾ ಸಿಬ್ಬಂದಿಗೆ ವೇತನ ನೀಡುವ ಆರ್ಥಿಕ ಶಕ್ತಿ ಕೂಡ ಬಿಬಿಎಂಪಿ ಶಿಕ್ಷಣ ಇಲಾಖೆಗೆ ಇಲ್ಲ.
₹103 ಕೋಟಿ: ಅಮೃತ ನಗರೋತ್ಥಾನ ಯೋಜನೆಯಲ್ಲಿ 75 ಶಾಲೆಗಳಲ್ಲಿ ಸಿವಿಲ್ ಕಾಮಗಾರಿಗಳಿಗೆ ₹88 ಕೋಟಿ ಅನುಮೋದನೆ ನೀಡಲಾಗಿದೆ. ಪೀಠೋಪಕರಣ ಹಾಗೂ ಇತರೆ ವ್ಯವಸ್ಥೆಗೆ ₹15 ಕೋಟಿ ದೊರೆತಿದೆ. ಆದರೆ ಈ ಶಾಲೆಗಳು ಹೈಟೆಕ್ ಶಾಲೆಗಳಿಗೆ ಸ್ಪರ್ಧೆ ನೀಡಬೇಕಾದರೆ ಈ ಮೊತ್ತ ಏನೇನೂ ಸಾಲದು ಎನ್ನುವುದು ಶಿಕ್ಷಣ ತಜ್ಞರ ಅಭಿಪ್ರಾಯ.
₹77 ಕೋಟಿ: ಬಿಬಿಎಂಪಿ ಹೊಸ ಪ್ರದೇಶಗಳಲ್ಲಿ 11 ಹೊಸ ಶಾಲೆ ಗಳನ್ನು ಪ್ರಾರಂಭಿಸಲೂ ಅಮೃತ ನಗರೋತ್ಥಾನ ದಲ್ಲಿ ಅನುಮೋದನೆ ನೀಡಲಾಗಿದೆ. 10 ಶಾಲೆಗಳನ್ನು ತಲಾ ₹7 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಶೆಟ್ಟಿಹಳ್ಳಿಯಲ್ಲಿ ಹೊಸ ಶಾಲೆ ನಿರ್ಮಾಣಕ್ಕೆ ₹9 ಕೋಟಿ ಮೀಸಲಾಗಿದೆ. ಒಟ್ಟಾರೆ ₹72 ಕೋಟಿ ಸಿವಿಲ್ ಕಾಮಗಾರಿ ಹಾಗೂ ₹5 ಕೋಟಿ ಪೀಠೋಪಕರಣ, ಇತರೆ ವೆಚ್ಚಗಳಿಗೆ ಮೀಸಲಾಗಿದೆ.
‘ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು, ಎಲ್ಲರೂ ಕಲಿಯಬೇಕು’ ಎಂದೆಲ್ಲ ಭಾಷಣ ಮಾಡುವವರು, ಶಾಲೆಗಳಲ್ಲಿ ಅಂತಹ ವಾತಾವರಣವನ್ನು ಕಲ್ಪಿಸಬೇಕಾಗಿದೆ. ಶಾಲೆ ಪ್ರವೇಶದಲ್ಲೇ ಕೊಳಕು ನಾರುತ್ತಿರುತ್ತದೆ. ಅದನ್ನು ಶುಚಿಗೊಳಿಸಲೂ ಸಿಬ್ಬಂದಿ ಇರುವುದಿಲ್ಲ. ಪೀಠೋಪಕರಣ ಮುರಿದಿವೆ. ಪ್ರಯೋಗಾಲಯಗಳಿಲ್ಲದೆ ವಿದ್ಯಾರ್ಥಿಗಳಿಗೆ ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೆಲವು ಶಾಲೆಗಳಲ್ಲಿ ಶೌಚಾಲಯವೇ ಇಲ್ಲ. ಕಟ್ಟಡಗಳು ಸೋರುತ್ತಿವೆ. ಗೋಡೆಗಳು ಪಾಚಿ ಕಟ್ಟಿವೆ. ಇದಕ್ಕೆಲ್ಲ ಜನಪ್ರತಿನಿಧಿಗಳು ಹಣ ಒದಗಿಸಬೇಕು. ರಸ್ತೆ, ಡಾಂಬರು, ಮೇಲ್ಸೇತುವೆಯಷ್ಟೇ ಅಲ್ಲ ಅಭಿವೃದ್ಧಿ ಅಲ್ಲ’ ಎಂದು ಶಿಕ್ಷಣ ತಜ್ಞರೊಬ್ಬರು ಅಭಿಪ್ರಾಯಪಟ್ಟರು.
ನಮ್ಮನ್ನು ಮರೆತಂತಿದೆ...
‘ನಾವು ವೋಟ್ ಹಾಕುವುದಿಲ್ಲ ಎಂದು ನಮ್ಮನ್ನು ಶಾಸಕರು ಮರೆತಂತೆ ಕಾಣುತ್ತದೆ. ಆದರೆ, ಇನ್ನು ಮೂರ್ನಾಲ್ಕು ವರ್ಷಗಳಲ್ಲಿ ನಮಗೆ ಮತದಾನದ ಹಕ್ಕು ಬರುತ್ತದೆ. ಆಗ ನೋಡಿಕೊಳ್ಳುತ್ತೇವೆ. ಹೈಸ್ಕೂಲ್‌ನಲ್ಲಿ ನಮಗೆ ಪ್ರಯೋಗಾಲಯ ಇಲ್ಲ. ನಮ್ಮ ಸ್ನೇಹಿತರು ಕಾಲೇಜಿನಲ್ಲಿದ್ದಾರೆ. ಅವರಿಗೂ ಸೌಲಭ್ಯಗಳಿಲ್ಲ. ಆರ್ಥಿಕವಾಗಿ ಹಿಂದುಳಿದವರಿಗೆ ಎಲ್ಲ ರೀತಿಯ ಸೌಲಭ್ಯ, ಶಿಕ್ಷಣ ನೀಡುತ್ತೇವೆ ಎನ್ನುತ್ತಾರೆ. ಇದೇನಾ ಇವರು ನೀಡುವ ಸೌಲಭ್ಯ’ ಎಂಬುದು ಪ್ರೌಢಶಾಲೆಯಲ್ಲಿ ಕಲಿಯುತ್ತಿರುವ ಸೌಮ್ಯಾ, ಮಂಗಳ, ರಮೇಶ್ ಅವರ ಪ್ರಶ್ನೆ.
ಎಲ್ಲೆಲ್ಲಿ ಹೊಸ ಶಾಲೆಗಳು?
ಶೆಟ್ಟಿಹಳ್ಳಿ, ಅರಕೆರೆ, ವಿಜ್ಞಾನಪುರ, ರಘುವನಹಳ್ಳಿ, ಲಗ್ಗೆರೆ, ಕೆಂಗೇರಿ, ಉಲ್ಲಾಳ, ಥಣಿಸಂದ್ರ, ಅಗ್ರಹಾರ, ಕಟ್ಟಿಗೇನಹಳ್ಳಿ, ಬಾಗಲೂರು ಕ್ರಾಸ್.
ಕೌಶಲ ಅಗತ್ಯ
ಮಕ್ಕಳಿಗೆ ಶಿಕ್ಷಣ ನೀಡುವಾಗ ಅವರಿಗೆ ಅಗತ್ಯವಾದ ಮೂಲಸೌಕರ್ಯಗಳಿರಬೇಕು. ಕೂರದಂತಹ ಜಾಗದಲ್ಲಿ ಬೋಧಿಸಿದರೆ ಅವರಿಗೆ ಏನು ಅರ್ಥವಾಗುತ್ತದೆ? ನಾನು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷನಾಗಿದ್ದಾಗ ಅತಿಥಿ ಶಿಕ್ಷಕರಿಂದ ಬೋಧನೆಗೆ ಅವಕಾಶ ಮಾಡಿಕೊಡಲಾಗಿತ್ತು. ಕಂಪ್ಯೂಟರ್ ಇದ್ದರಷ್ಟೆ ಸಾಲದು, ಅದನ್ನು ಮಕ್ಕಳಿಗೆ ಕಲಿಸುವ ಕೌಶಲಯುತ ಶಿಕ್ಷಕರು ಅಗತ್ಯ.
ಬಿ.ವಿ. ಗಣೇಶ್, ಬಿಬಿಎಂಪಿ ಮಾಜಿ ಸದಸ್ಯ
ಎಲ್ಲೆಲ್ಲಿ ಕಾಮಗಾರಿ, ಎಷ್ಟು ವೆಚ್ಚ?
ವಲಯ;ಸಿವಿಲ್ ಕಾಮಗಾರಿ;ಪೀಠೋಪಕರಣ
(₹ ಕೋಟಿಗಳಲ್ಲಿ)
ಪೂರ್ವ;48.70;8.4
ಪಶ್ಚಿಮ;27.5;3.6
ದಕ್ಷಿಣ;3.8;1.9
ಆರ್.ಆರ್. ನಗರ;8;1.1
ಹೊಸ ಶಾಲೆಗಳು
ದಾಸರಹಳ್ಳಿ, ಬೊಮ್ಮನಹಳ್ಳಿ, ಕೆ.ಆರ್.ಪುರ, ಆರ್.ಆರ್.ನಗರ, ಬ್ಯಾಟರಾಯನಪುರ;72;5.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.