ADVERTISEMENT

ಜಾತಿವಾರು ಜನಗಣತಿ ವರದಿ ಸಲ್ಲಿಕೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2023, 23:14 IST
Last Updated 21 ನವೆಂಬರ್ 2023, 23:14 IST
ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಅಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ ನೇತೃತ್ವದ ನಿಯೋಗವು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಅವರಿಗೆ ಸೋಮವಾರ ಮನವಿ ಸಲ್ಲಿಸಿತು
ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಅಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ ನೇತೃತ್ವದ ನಿಯೋಗವು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಅವರಿಗೆ ಸೋಮವಾರ ಮನವಿ ಸಲ್ಲಿಸಿತು   

ಬೆಂಗಳೂರು: ರಾಜ್ಯದ ಎಲ್ಲ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ (ಜಾತಿವಾರು ಜನಗಣತಿ) ವರದಿಯನ್ನು ತ್ವರಿತವಾಗಿ ಸರ್ಕಾರಕ್ಕೆ ಸಲ್ಲಿಸುವಂತೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ನಿಯೋಗ ಒತ್ತಾಯಿಸಿದೆ.

ಒಕ್ಕೂಟದ ಅಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ ನೇತೃತ್ವದ ನಿಯೋಗವು ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಅವರನ್ನು ಭೇಟಿಮಾಡಿ, ಜಾತಿವಾರು ಜನಗಣತಿ ವರದಿಯನ್ನು ಸರ್ಕಾರಕ್ಕೆ ನೀಡುವಂತೆ ಮನವಿ ಸಲ್ಲಿಸಿತು.

 ‘ಎಚ್‌. ಕಾಂತರಾಜ ನೇತೃತ್ವದ ಆಯೋಗವು ಸಮೀಕ್ಷೆಯನ್ನು ಪೂರ್ಣಗೊಳಿಸಿತ್ತು. ಈವರೆಗೂ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿಲ್ಲ. ಈ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದರೆ ಸಾಮಾಜಿಕ ನ್ಯಾಯದ ಹಂಚಿಕೆಯಲ್ಲಿ ಆಗುವ ಲೋಪಗಳನ್ನು ಸರಿಪಡಿಸಲು ಅನುಕೂಲ ಆಗುತ್ತದೆ. ಹಿಂದುಳಿದ ವರ್ಗಗಳ ಪಟ್ಟಿಯ ಪರಿಷ್ಕರಣೆಗೂ ಪೂರಕವಾಗುತ್ತದೆ. ಆದ್ದರಿಂದ ವಿಳಂಬ ಮಾಡದೇ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು’ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ADVERTISEMENT

ಮನವಿ ಸಲ್ಲಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ರಾಮಚಂದ್ರಪ್ಪ, ‘ವರದಿಯನ್ನು ಅಂಗೀಕರಿಸಿ ಎಂದು ಸರ್ಕಾರದ ಎದುರು ನಾವು ಬೇಡಿಕೆ ಇಡುತ್ತಿಲ್ಲ. ಆಯೋಗವು ವರದಿ ಸಲ್ಲಿಸಲಿ. ಬಳಿಕ ಅದನ್ನು ಸಾರ್ವಜನಿಕ ಚರ್ಚೆಗೆ ಬಿಡುಗಡೆ ಮಾಡಲಿ’ ಎಂದರು.

‘ಮನೆಯಲ್ಲಿ ಕುಳಿತು ವರದಿ ಸಿದ್ಧಪಡಿಸಲಾಗಿದೆ ಎಂಬ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಆರೋಪದಲ್ಲಿ ಸತ್ಯಾಂಶವಿಲ್ಲ. ಲಕ್ಷಾಂತರ ಶಿಕ್ಷಕರು ಮನೆ, ಮನೆಗೆ ಹೋಗಿ ಗಣತಿ ಮಾಡಿದ್ದಾರೆ. ಆಗ ಸಿದ್ದರಾಮಯ್ಯ ಸಂಪುಟದಲ್ಲಿ ಶಾಮನೂರು ಸಚಿವರಾಗಿದ್ದರು. ಗಣತಿ ಸರಿಯಾಗಿ ನಡೆಯದಿದ್ದರೆ ಆಗಲೇ ಪ್ರಶ್ನಿಸಬೇಕಿತ್ತು’ ಎಂದು ಹೇಳಿದರು.

ಗಾಣಿಗ ಗುರು ಪೀಠದ ಪೂರ್ಣಾನಂದ ಪುರಿ ಸ್ವಾಮೀಜಿ, ಒಕ್ಕೂಟದ ಸಂಚಾಲಕರಾದ ಮಾವಳ್ಳಿ ಶಂಕರ್, ಎಣ್ಣೆಗೆರೆ ಅರ್. ವೆಂಕಟರಾಮಯ್ಯ, ಸಂಚಾಲನಾ ಸಮಿತಿ ಸದಸ್ಯರಾದ ಎನ್‌.ವಿ. ನರಸಿಂಹಯ್ಯ, ಪ್ರೊ. ಜಾಫೆಟ್‌, ವಿ. ನಾಗರಾಜ್‌, ಬಿ.ಟಿ ಲಲಿತಾ ನಾಯಕ್ ಸೇರಿದಂತೆ ಹಲವರು ನಿಯೋಗದಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.