ADVERTISEMENT

ಹೊಟೇಲ್ ಸಿಬ್ಬಂದಿಗೆ ತರಬೇತಿ ಶುಲ್ಕ ವಸೂಲಿಗೆ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 28 ಮೇ 2023, 16:52 IST
Last Updated 28 ಮೇ 2023, 16:52 IST
ವಿಜಯಪುರ ಪಟ್ಟಣದಲ್ಲಿ ಹೊಟೇಲ್ ಮಾಲೀಕರಿಗೆ ಒಂದು ದಿನದ ತರಬೇತಿ ನೀಡಲು, 1200 ಶುಲ್ಕ ಕಟ್ಟಿಸಿಕೊಂಡಿರುವುದು.
ವಿಜಯಪುರ ಪಟ್ಟಣದಲ್ಲಿ ಹೊಟೇಲ್ ಮಾಲೀಕರಿಗೆ ಒಂದು ದಿನದ ತರಬೇತಿ ನೀಡಲು, 1200 ಶುಲ್ಕ ಕಟ್ಟಿಸಿಕೊಂಡಿರುವುದು.   

ವಿಜಯಪುರ (ದೇವನಹಳ್ಳಿ): ಕೇಂದ್ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ಹೊಟೇಲ್ ಉದ್ಯಮಿಗಳು ಹಾಗೂ ನೌಕರರಿಗೆ ಆಹಾರ ತಯಾರಿಕೆ ಗುಣಮಟ್ಟ ಮತ್ತು ಸುರಕ್ಷತೆ ಕಾಪಾಡುವ ಒಂದು ದಿನದ ತರಬೇತಿಗೆ ದುಬಾರಿ ಶುಲ್ಕ ಪಡೆಯುತ್ತಿದೆ ಎಂದು ಹೋಟೆಲ್‌ ಮಾಲೀಕರ ಸಂಘ ಆರೋಪಿಸಿದೆ. 

ತರಬೇತಿ ನೀಡಲು ₹1200 ರಿಂದ ₹3000  ಶುಲ್ಕ ನಿಗದಿ ಮಾಡಿರುವುದು ಸಾಧುವಲ್ಲ. ಈ ಆದೇಶವನ್ನು ವಾಪಸ್‌ ಪಡೆಯಬೇಕು ಎಂದು ಹೊಟೇಲ್ ಮಾಲೀಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕಡ್ಡಾಯವಾಗಿ ಒಂದು ದಿನ ತರಬೇತಿ ಪಡೆಯಲೇಬೇಕು. ಪಡೆಯದಿದ್ದರೆ ನಿಮ್ಮ ಪರವಾನಗಿ ರದ್ದಾಗುತ್ತದೆ. ಇದು ಕೇಂದ್ರ ಸರ್ಕಾರದ ನಿರ್ದೇಶನ ಎಂದು ಬೆದರಿಸಿ ಶುಲ್ಕ ಪಾವತಿಸಲು ಹೇಳಿದರು. ತರಬೇತಿ ನಂತರ ಹೋಟೆಲ್‌ ಪರವಾನಗಿ ನವೀಕರಣಕ್ಕೆ ಪ್ರತ್ಯೇಕ ಶುಲ್ಕ ಪಾವತಿಸುವಂತೆ ಕೇಳುತ್ತಿದ್ದಾರೆ ಎಂದು ವೆಂಕಟೇಶ್, ಕಿರಣ್, ರಾಜು, ಮೆಹಬೂಬ್ ಚೇತನ್ ಮುಂತಾದವರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಹೊಟೆಲ್‌ ಉದ್ಯಮ ನಡೆಸಲು ಮೊದಲೇ ತರಬೇತಿ ಪಡೆದುಕೊಂಡಿದ್ದೇವೆ. ಆಹಾರ ಇಲಾಖೆ ಹಾಗೂ ಸ್ಥಳೀಯ ಪುರಸಭೆಯಿಂದ ಅನುಮತಿ ಪಡೆದುಕೊಂಡು ನಡೆಸುತ್ತಿದ್ದೇವೆ. ತರಬೇತಿ ಹೊಂದಿಕೊಂಡಿರುವ ಸಿಬ್ಬಂದಿಯನ್ನೇ ನೇಮಕ ಮಾಡಿಕೊಂಡಿದ್ದೇವೆ. ಆದರೆ, ಈಗ ಪುನಃ ಸಿಬ್ಬಂದಿಯೂ ಸೇರಿ ಎಲ್ಲರೂ ತರಬೇತಿ ಪಡೆಯಬೇಕು ಎಂದು ಒತ್ತಾಯ ಪಡಿಸುವುದು ಸರಿಯಲ್ಲ ಎಂದು ಹೊಟೇಲ್ ಮಾಲೀಕ ಶಾಂತ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

‘ತರಬೇತಿ ನೀಡುವುದಾದರೆ ಸರ್ಕಾರವೇ ಇಲಾಖೆಯ ಮೂಲಕ ನೀಡಲಿ. ಅದನ್ನು ಬಿಟ್ಟು ನಮ್ಮಿಂದ ಹಣ ವಸೂಲಿ ಮಾಡಿ, ನಮಗೆ ತರಬೇತಿ ನೀಡುವುದು ಸರಿಯಲ್ಲ’ ಎಂದರು. ಈ ಕುರಿತು ಪ್ರತಿಕ್ರಿಯೆಗೆ ಆಹಾರ ಇಲಾಖೆಯ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಲಭ್ಯರಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.