ಮಲ್ಲೇಶ್ವರದ 17ನೇ ಕ್ರಾಸ್‌ನಲ್ಲಿ ಕೆಲವು ವರ್ಷಗಳ ಹಿಂದೆ ನಡೆದ ಆ ದುರ್ಘಟನೆ ನಗರವಾಸಿಗಳ ಮನದಂಗಳದಲ್ಲಿ ಇನ್ನೂ ಹಸಿರಾಗಿದೆ. ಅನಿಲ್‌ಕುಮಾರ್ ಎಂಬ ರಿಯಲ್ ಎಸ್ಟೇಟ್ ಉದ್ಯಮಿ ಬಿಎಂಡಬ್ಲ್ಯು ಬೈಕ್‌ನಲ್ಲಿ ಹೊರಟಿದ್ದಾಗ ಕತ್ತರಿಸಿ ಬಿದ್ದ ಆಪ್ಟಿಕಲ್ ಫೈಬರ್ ಕೇಬಲ್ (ಒಎಫ್‌ಸಿ), ಬೈಕ್‌ನ ಗಾಲಿಯಲ್ಲಿ ಸಿಕ್ಕಿಕೊಂಡು ಅಪಘಾತ ಸಂಭವಿಸಿತ್ತು. ಹತ್ತು ಅಡಿಗಳಷ್ಟು ಮೇಲಕ್ಕೆ ಚಿಮ್ಮಿ ಬಿದ್ದ ಅನಿಲ್ ಸ್ಥಳದಲ್ಲೇ ಅಸುನೀಗಿದ್ದರು.
ಇನ್ಫೆಂಟ್ರಿ ರಸ್ತೆಯಲ್ಲಿ ಹಾದು ಹೋಗುವಾಗ ನೀವೊಮ್ಮೆ ಸುಮ್ಮನೇ ತಲೆ ಮೇಲೆತ್ತಿ ನೋಡಬೇಕು. ಕಂಬದಿಂದ ಕಂಬಕ್ಕೆ ತೋರಣ ಕಟ್ಟಿದಂತೆ 40–50 ಒಎಫ್‌ಸಿಗಳು ಇನ್ನೇನು ಬಿದ್ದೇ ಬಿಡುವುವೇನೋ ಎನ್ನುವಂತೆ ಜೋತಾಡುತ್ತಿರುವ ನೋಟ ಭಯ ಹುಟ್ಟಿಸುತ್ತದೆ. ‘ಮೊನ್ನೆಯಷ್ಟೇ ಕೇಬಲ್‌ವೊಂದು ಕಳಚಿ ಬಿತ್ತು ಸರ್. ಅದೃಷ್ಟಕ್ಕೆ ಯಾವುದೇ ಅನಾಹುತ ಆಗಲಿಲ್ಲ. ಅಲ್ಲಿ ನೋಡಿ, ಆ ಕೇಬಲ್‌ಅನ್ನು ಸುತ್ತಿ ಕಂಬಕ್ಕೆ ಕಟ್ಟಿರುವೆ’ ಎಂದು ತೋರಿಸುತ್ತಾರೆ ರಸ್ತೆ ಪಕ್ಕದ ಅಂಗಡಿಯಲ್ಲಿ ಕೆಲಸ ಮಾಡುವ ಖಾದರ್.
ಒಎಫ್‌ಸಿ ಇಲ್ಲದ ನಗರವನ್ನು ಈಗ ಕಲ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ನಮ್ಮ ಜೇಬಿನಲ್ಲಿರುವ ಮೊಬೈಲ್ ಫೋನ್‌ನಿಂದ ದೈತ್ಯ ಐಟಿ ಕಂಪನಿಗಳವರೆಗೆ ಎಲ್ಲವುಗಳಿಗೂ ಇವುಗಳ ಸೇವೆ ಬೇಕೇಬೇಕು. ಆದರೆ, ಭೂಮಿಯ ಆಳದಲ್ಲಿ ಇರಬೇಕಾದ ಒಎಫ್‌ಸಿ ಅಲ್ಲಲ್ಲಿ ಮೇಲೆದ್ದು, ಹಲವೆಡೆ ತಲೆಮೇಲೆ ಜೋತುಬಿದ್ದು ನಗರದ ಅಂದವನ್ನು ಕೆಡಿಸುತ್ತಿದೆ. ಅಪಾಯವನ್ನೂ ತಂದೊಡ್ಡುತ್ತಿದೆ.
ಗುಂಡಿಯಲ್ಲಿ ಬಿಟ್ಟ ಎರೇಹುಳುಗಳು ಒಂದಕ್ಕೆ ಹತ್ತರಷ್ಟಾಗಿ ಬೆಳೆಯುವಂತೆ ಕಳೆದ 20–25 ವರ್ಷಗಳಲ್ಲಿ ಒಎಫ್‌ಸಿ ಉದ್ದ ನಗರದ ನೆಲದಡಿಯಲ್ಲಿ ಅಂದಾಜಿಗೂ ಸಿಗದಷ್ಟು ಪ್ರಮಾಣದಲ್ಲಿ ಅಕ್ರಮವಾಗಿ ಬೆಳೆದಿದೆ. ಬಿಬಿಎಂಪಿಯಿಂದ ನಿರ್ಬಂಧ–ನಿಯಂತ್ರಣ ಇಲ್ಲದಿದ್ದ ಕಾಲದಲ್ಲಿ ಸಾವಿರಾರು ಕಿ.ಮೀ. ಉದ್ದದ ಅನಧಿಕೃತ ಒಎಫ್‌ಸಿ ಜಾಲ ಹರಡಿಕೊಂಡಿದೆ.
‘ಒಎಫ್‌ಸಿ ಅಳವಡಿಕೆಗೆ ಸಂಬಂಧಿಸಿದಂತೆ ಸರಿಯಾದ ನಿರ್ವಹಣಾ ವ್ಯವಸ್ಥೆ ರೂಪಿಸದ ಕಾರಣ ಸಾವಿರಾರು ಕೋಟಿ ರೂಪಾಯಿ ವರಮಾನ ಸೋರಿಕೆಯಾಗಿದೆ’ ಎಂದು ಬಿಬಿಎಂಪಿ ಒಎಫ್‌ಸಿ ಪರಿಶೀಲನಾ ಸಮಿತಿಯ ವರದಿಯಲ್ಲಿ ತಿಳಿಸಲಾಗಿದೆ.
ಸುರುಳಿ ಬಿಚ್ಚಿಕೊಂಡಿದ್ದು ಹೀಗೆ: ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಒಎಫ್‌ಸಿ ಅಳವಡಿಕೆಗೆ ಅನುಮತಿ ನೀಡಿದ ಬಳಿಕ, 1999–2004ರ ಅವಧಿಯಲ್ಲಿ, ನಗರದ ಎಲ್ಲ ರಸ್ತೆಗಳನ್ನು ಲೆಕ್ಕತಪ್ಪಿ ಅಗೆಯಲಾಯಿತು. ಸೇವಾ ಸಂಸ್ಥೆಗಳು ಸುಮಾರು 6 ಸಾವಿರ ಕಿ.ಮೀ. ಉದ್ದದ ರಸ್ತೆಗಳಲ್ಲಿ ಒಎಫ್‌ಸಿ ಅಳವಡಿಸಿಕೊಂಡವು.
ನಗರದಲ್ಲೀಗ 144 ಫೈಬರ್ ಹೊಂದಿರುವ ಒಎಫ್‌ಸಿ ಜಾಲವಿದೆ. ಕೆಲವು ಭಾಗಗಳಲ್ಲಿ 258 ಫೈಬರ್ ಹೊಂದಿರುವಂತಹ ಜಾಲವೂ ಹರಡಿಕೊಂಡಿದೆ. ಒಂದೊಂದು ಒಎಫ್‌ಸಿ ಡಕ್ಟ್‌ನಲ್ಲಿ ಮೂರ್ನಾಲ್ಕು ಕೇಬಲ್‌ಗಳು ಹಾದು ಹೋಗಿವೆ. ಅಂತರ್ಜಾಲ ಸೌಲಭ್ಯ ಹೊಂದಿದ ಕಚೇರಿಗಳು, ಲಕ್ಷಾಂತರ ಮನೆಗಳು, ಸಾಫ್ಟ್‌ವೇರ್ ಕಂಪನಿಗಳು, ಕಾಲ್ ಸೆಂಟರ್‌ಗಳು, ಟೆಕ್ ಪಾರ್ಕ್‌ಗಳು, ಮಾಲ್‌ಗಳು ಹಾಗೂ ವಾಣಿಜ್ಯ ಸಂಸ್ಥೆಗಳೆಲ್ಲ ತಮ್ಮ ಕಾರ್ಯ ಚಟುವಟಿಕೆಗೆ ಒಎಫ್‌ಸಿಯನ್ನೇ ಸಂಪೂರ್ಣವಾಗಿ ಅವಲಂಬಿಸಿವೆ.
ಪ್ರತಿಯೊಂದು ರಸ್ತೆಯ ಒಂದು ಬದಿಯಲ್ಲಿ ಒಳಚರಂಡಿ ಹಾಗೂ ಇನ್ನೊಂದು ಬದಿಯಲ್ಲಿ ನೀರಿನ ಕೊಳವೆ ಇರುವುದು ರೂಢಿ. ಒಳಚರಂಡಿ ಇರುವ ಭಾಗದಲ್ಲಿ ಚರಂಡಿಯಿಂದ ಒಂದು ಮೀಟರ್‌ನಷ್ಟು ಅಂತರ ಕಾಯ್ದುಕೊಂಡು ಒಎಫ್‌ಸಿ ಡಕ್ಟ್ ಅಳವಡಿಸಬೇಕು. ನೀರಿನ ಕೊಳವೆ ಇರುವ ಭಾಗದಲ್ಲಿ ಯಾವುದೇ ಕಾರಣಕ್ಕೂ ಡಕ್ಟ್ ಹಾಕುವಂತಿಲ್ಲ. ಡಕ್ಟ್ ಅಳವಡಿಸುವ ಸೇವಾ ಸಂಸ್ಥೆಗಳು ಸಂಬಂಧಿಸಿದ ವಾರ್ಡ್ ಎಂಜಿನಿಯರ್ ಅವರಿಂದ ರಸ್ತೆ ಇತಿಹಾಸ ಪಡೆದುಕೊಂಡು ಯಾವ ಕಡೆ ಒಳಚರಂಡಿ ಇದೆ ನೋಡಿಕೊಂಡು, ರಸ್ತೆ ಅಗೆಯಲು ಅನುಮತಿ ಪಡೆಯಬೇಕು. ರಸ್ತೆಯ ಮೇಲ್ಭಾಗದಿಂದ ಕನಿಷ್ಠ ಎರಡು ಅಡಿ ಹಾಗೂ ಗರಿಷ್ಠ ನಾಲ್ಕು ಅಡಿಗಳಷ್ಟು ಆಳದ ಗುಂಡಿ ಕೊರೆದು, ಡಕ್ಟ್ ಅಳವಡಿಸಬೇಕು ಎನ್ನುತ್ತದೆ ನಿಯಮ. ಆದರೆ, ನಿಯಮವನ್ನು ಗಾಳಿಗೆ ತೂರಿದ ಸೇವಾ ಸಂಸ್ಥೆಗಳು ಮನಬಂದಂತೆ ಒಎಫ್‌ಸಿ ಅಳವಡಿಸಿಕೊಂಡಿವೆ.
ಒಎಫ್‌ಸಿ ಸೇವಾದಾರರಲ್ಲಿ ಎರಡು ವಿಧ. ದೂರಸಂಪರ್ಕ ಸೇವೆಗಳನ್ನು ಒದಗಿಸುವ ಸೇವಾದಾರರದು ಒಂದು ವಿಧವಾದರೆ, ಟಿ.ವಿ ಸೇವೆಗಳೊಂದಿಗೆ ಅಂತರ್ಜಾಲ ಸೇವೆಯನ್ನೂ (ಐಎಸ್‌ಪಿ) ಒದಗಿಸುವವರದು ಇನ್ನೊಂದು ವಿಧ. ಐಎಸ್‌ಪಿ ಸೇವೆ ಒದಗಿಸುವವರು ಒಎಫ್‌ಸಿಯನ್ನು ಮರದಿಂದ ಮರಕ್ಕೆ, ಕಂಬದಿಂದ ಕಂಬಕ್ಕೆ ತೂಗುಹಾಕಿ ರಸ್ತೆ–ರಸ್ತೆಗೆ ತೋರಣ ಕಟ್ಟಿದ್ದಾರೆ.
ಒಎಫ್‌ಸಿ ಮಾಯಾಜಾಲದ ಹಿನ್ನೆಲೆಯನ್ನು ಕೆದಕುತ್ತಾ ಹೋದರೆ ಸಾರ್ವಜನಿಕ ಭೂಮಿಯ ದುರ್ಬಳಕೆಗೆ ಸಂಬಂಧಿಸಿದಂತೆ ಹಲವು ಮಾಹಿತಿಗಳು ಹೊರಬೀಳುತ್ತವೆ. ಯಾವುದೇ ರಸ್ತೆಗಳ ಅಡಿಯಲ್ಲಿ ಒಮ್ಮೆ ಒಎಫ್‌ಸಿ ಅಳವಡಿಸಿದ ಮೇಲೆ ಆ ಸ್ಥಳವನ್ನು ಕೊಳವೆಬಾವಿ ಕೊರೆಯಲು, ಚರಂಡಿ ನಿರ್ಮಿಸಲು ಅಥವಾ ಅನ್ಯ ಉದ್ದೇಶಕ್ಕಾಗಿ ಬಳಕೆ ಮಾಡಲು ಸಾಧ್ಯವಿಲ್ಲ.
2011ಕ್ಕಿಂತ ಪೂರ್ವದಲ್ಲಿ ಪ್ರತಿ ಮೀಟರ್ ಕೇಬಲ್ ಅಳವಡಿಕೆಗೆ ₹ 95 ಶುಲ್ಕ ನಿಗದಿ ಮಾಡಲಾಗಿತ್ತು. ಬಿಬಿಎಂಪಿಗೆ ಆಗುತ್ತಿರುವ ನಷ್ಟ ಹಾಗೂ ಸೇವಾ ಸಂಸ್ಥೆಗಳು ಮಾಡಿಕೊಳ್ಳುತ್ತಿರುವ ಲಾಭದ ಲೆಕ್ಕಾಚಾರ ಮಾಡಿ, 2011ರ ಮಾರ್ಚ್‌ನಲ್ಲಿ ಪ್ರತಿ ಮೀಟರ್ ಒಎಫ್‌ಸಿ ಹಾಗೂ ಕೊಳವೆ ಮಾರ್ಗದ ಅಳವಡಿಕೆಗೆ ಶುಲ್ಕ ನಿಗದಿ ಮಾಡುವ ನಿರ್ಣಯ ಕೈಗೊಳ್ಳಲಾಗಿತ್ತು.
ಒಎಫ್‌ಸಿ ಅಳವಡಿಕೆಗೆ ಸಂಬಂಧಿಸಿದಂತೆ ತಕರಾರು ಬಂದಾಗ 17 ಸೇವಾ ಸಂಸ್ಥೆಗಳು 2012ರ ಜನವರಿಯಲ್ಲಿ ಹೈಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿ 6,140 ಕಿ.ಮೀ. ಉದ್ದದ ಕೇಬಲ್ ಅಳವಡಿಸಲಾಗಿದೆ ಎಂಬ ಮಾಹಿತಿ ನೀಡಿದ್ದವು. ಆದರೆ, ವಾಸ್ತವವಾಗಿ 65 ಸಾವಿರ ಕಿ.ಮೀ. ಉದ್ದದ ಕೇಬಲ್ ಅಳವಡಿಸಲಾಗಿತ್ತು ಎನ್ನುತ್ತದೆ ಒಎಫ್‌ಸಿ ಪರಿಶೀಲನಾ ಸಮಿತಿಯ ವರದಿ.
10 ಕಿ.ಮೀ. ಉದ್ದದ ಒಎಫ್‌ಸಿ ಡಕ್ಟ್‌ಗೆ ಅನುಮತಿ ಪಡೆದುಕೊಂಡು ಹತ್ತು ಪಟ್ಟು ಅಧಿಕ ಡಕ್ಟ್ ಅಳವಡಿಸಿದ ಈ ಸಂಸ್ಥೆಗಳು ಬಿಬಿಎಂಪಿ ಕಣ್ಣಿಗೆ ಮಣ್ಣೆರಚಿವೆ. ಒಂದು ಸಂಸ್ಥೆ ಡಕ್ಟ್ ಅಳವಡಿಕೆಗೆ ಅನುಮತಿ ಪಡೆದರೆ, ಇತರ 3–4 ಸಂಸ್ಥೆಗಳು ಅಕ್ರಮವಾಗಿ ಅದರಲ್ಲಿ ಕೇಬಲ್ ಹಾಕಿವೆ. ಈ ಅಕ್ರಮವನ್ನು ಪರಿಶೀಲಿಸುವ ತಾಂತ್ರಿಕ ನೈಪುಣ್ಯ ಬಿಬಿಎಂಪಿ ಸಿಬ್ಬಂದಿಗಿಲ್ಲ.
ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್, ಬೆಸ್ಕಾಂ ಮತ್ತು ಕೆಪಿಟಿಸಿಎಲ್ ಸಂಸ್ಥೆಗಳು ಒಎಫ್‌ಸಿ ಅಳವಡಿಕೆಗೆ ಅನುಮತಿ ಕೇಳಿದ ಕೂಡಲೇ ಹೆಚ್ಚಿನ ನಿರ್ಬಂಧವಿಲ್ಲದೆ ಪಾಲಿಕೆಯಿಂದ ಅನುಮತಿ ಸಿಗುವುದು ವಾಡಿಕೆ. ಆ ಅನುಮತಿ ಪತ್ರವನ್ನು ಅಧಿಕಾರಿಗಳ ಸಹಾಯದಿಂದ ಪಡೆದ ಖಾಸಗಿ ಸೇವಾ ಸಂಸ್ಥೆಗಳು ತಮ್ಮ ಡಕ್ಟ್‌ಗಳನ್ನೂ ಅಳವಡಿಸಿದ ಹಗರಣಗಳು ಸಹ ಬಯಲಿಗೆ ಬಂದಿವೆ.
ಯಲಚೇನಹಳ್ಳಿ ವಾರ್ಡ್‌ನಲ್ಲಿ ಆಪ್ಟಿಕಲ್ ಫೈಬರ್ ಕೇಬಲ್ (ಒಎಫ್‌ಸಿ) ಜಾಲ ಜೋಡಿಸಲು 2015ರಿಂದ ಈವರೆಗೂ ಪಾಲಿಕೆ ಅನುಮತಿಯನ್ನೇ ನೀಡಿಲ್ಲ ಎನ್ನುತ್ತದೆ ಆರ್‌ಟಿಐ ಮೂಲಕ ಬಿಬಿಎಂಪಿಯಿಂದಲೇ ಪಡೆದ ಮಾಹಿತಿ. ಆದರೆ, ಈ ವಾರ್ಡ್‌ನ ಆಶ್ರಮ ರಸ್ತೆ, ಜೆ.ಸಿ.ಕೈಗಾರಿಕಾ ಪ್ರದೇಶ ಹಾಗೂ ಕಾಶಿನಗರ ಸುತ್ತಮುತ್ತಲಿನ ರಸ್ತೆಗಳನ್ನು ಕತ್ತರಿಸಿ, ಯಂತ್ರಗಳಿಂದ ಕೊಳವೆ ಮಾರ್ಗ ಕೊರೆದು ಕೇಬಲ್‌ಗಳನ್ನು ತೂರಿಸಲಾಗಿದೆ. ಬೆಳ್ಳಂದೂರಿನ ಬೀದಿಗಳ ಅಂದಗೆಡಿಸಿ ಪಾದಚಾರಿಗಳಿಗೆ ಅಡ್ಡಗಾಲಾಗಿದ್ದ ಅಕ್ರಮ ಒಎಫ್‌ಸಿ ವಿರುದ್ಧ ಸ್ಥಳೀಯರು ಇತ್ತೀಚೆಗೆ ದೂರು ನೀಡಿದ್ದರು. ಪೊಲೀಸರ ಪಹರೆಯಲ್ಲಿ ಕೇಬಲ್‌ಗಳನ್ನು ಕಿತ್ತುಹಾಕಲಾಗಿತ್ತು.
ಒಎಫ್‌ಸಿ ಮಾರ್ಗದ ಶುಲ್ಕದಿಂದ ತಪ್ಪಿಸಿಕೊಳ್ಳಲು ಹಲವು ಸಂಸ್ಥೆಗಳು ಒಳಚರಂಡಿಯಲ್ಲೇ ಕೇಬಲ್ ಎಳೆದಿವೆ. ಅಂತಹ ಕೇಬಲ್‌ನ ಉದ್ದ 1,700 ಕಿ.ಮೀ.ಯಷ್ಟು ಇದೆ. ಐಟಿ ಸಂಸ್ಥೆಗಳೇ ಹೆಚ್ಚಾಗಿರುವ ಮಹದೇವಪುರ, ಯಲಹಂಕ, ಬೊಮ್ಮನಹಳ್ಳಿ ಹಾಗೂ ಪೂರ್ವ ವಲಯದಲ್ಲಿ ಈ ಅಕ್ರಮದ ಪ್ರಮಾಣ ಹೆಚ್ಚಾಗಿದೆ.
ಒಎಫ್‌ಸಿ ಅಳವಡಿಕೆಗಾಗಿ ಸೇವಾ ಸಂಸ್ಥೆಗಳು ಪ್ರತಿವರ್ಷ ಸರಾಸರಿ 15 ಸಾವಿರ ಗುಂಡಿಗಳನ್ನು ತೋಡುತ್ತವೆ. ಅವುಗಳನ್ನು ಮತ್ತೆ ವೈಜ್ಞಾನಿಕವಾಗಿ ಮುಚ್ಚಿ, ರಸ್ತೆ ದುರಸ್ತಿ ಮಾಡಲು ಬಿಬಿಎಂಪಿ ₹ 300 ಕೋಟಿ ಖರ್ಚು ಮಾಡಬೇಕಾಗುತ್ತದೆ.
ಒಎಫ್‌ಸಿಯಲ್ಲಿ ಹೆಚ್ಚಿದ ಅಕ್ರಮಗಳನ್ನು ತಡೆಗಟ್ಟಲು ಬಿಬಿಎಂಪಿ 2011ರಲ್ಲಿ ಒಎಫ್‌ಸಿ ಘಟಕ ರಚಿಸಿತು. ಮುಖ್ಯ ಎಂಜಿನಿಯರ್ ಅದರ ಮುಖ್ಯಸ್ಥರಾಗಿದ್ದು, ಎಲ್ಲ ವಲಯಗಳಲ್ಲೂ ಅಧಿಕಾರಿಗಳನ್ನು ಹೊಂದಿದೆ. ಒಎಫ್‌ಸಿ ಅಳವಡಿಕೆಗೆ ಈ ಘಟಕದಿಂದ ಅನುಮತಿ ಪಡೆಯಬೇಕು ಮತ್ತು ಕೇಬಲ್ ಅಳವಡಿಕೆ ನಂತರ ರಸ್ತೆಯನ್ನು ಸೇವಾ ಸಂಸ್ಥೆಗಳೇ ಸ್ವಂತ ಖರ್ಚಿನಲ್ಲಿ ದುರಸ್ತಿ ಮಾಡಬೇಕು ಎಂಬ ನಿಯಮವಿದೆ. ಆದರೆ, ಕೇಬಲ್ ಅಳವಡಿಕೆ ಮುಗಿದ ಮೇಲೆ ಸೇವಾಸಂಸ್ಥೆಗಳು ರಸ್ತೆ ದುರಸ್ತಿ ಮಾಡದ ಉದಾಹರಣೆಗಳು ಪ್ರತೀ ವಾರ್ಡ್‌ನಲ್ಲೂ ಸಿಗುತ್ತವೆ. ಟಿ.ವಿ ಸಂಪರ್ಕ ಕಲ್ಪಿಸುವ ಹೆಸರಿನಲ್ಲಿ ಅಂತರ್ಜಾಲ ಸೇವೆ ಒದಗಿಸುತ್ತಿರುವ 14 ಸಂಸ್ಥೆಗಳು ನಗರದಲ್ಲಿವೆ. ಅವುಗಳು 10 ಸಾವಿರ ಕಿ.ಮೀ. ಉದ್ದದ ಓವರ್ ಹೆಡ್ ಕೇಬಲ್ ಅಳವಡಿಸಿವೆ. ಮರದಿಂದ ಮರಕ್ಕೆ ಕೇಬಲ್ ಎಳೆಯುವ ಈ ಸಂಸ್ಥೆಗಳು ಬಿಬಿಎಂಪಿಗೆ ಶುಲ್ಕವನ್ನೂ ನೀಡಿಲ್ಲ.
‘ಅಕ್ರಮವಾಗಿ ಅಳವಡಿಸಿದ ಒಎಫ್‌ಸಿ ಜಾಲವನ್ನು ಸಕ್ರಮಗೊಳಿಸಲು ಹಾಗೂ ಡಕ್ಟ್‌ಗಳಿಗೆ ವಾರ್ಷಿಕ ನೆಲಬಾಡಿಗೆಯನ್ನು ವಿಧಿಸಲು ಕೆಎಂಸಿ ಕಾಯ್ದೆಗೆ ಅಗತ್ಯ ತಿದ್ದುಪಡಿ ಮಾಡಿಕೊಳ್ಳಬೇಕು’ ಎಂದು ಹೈಕೋರ್ಟ್ ನಿರ್ದೇಶನ ನೀಡಿತ್ತು. ಕೆಎಂಸಿ ಕಾಯ್ದೆಗೆ2013ರ ಮಾರ್ಚ್ 14ರಂದು ತಿದ್ದುಪಡಿ ತರಲಾಗಿದೆ. ಆದರೆ, ಅಕ್ರಮಗಳು ಮಾತ್ರ ಯಥಾಪ್ರಕಾರ ನಡೆದೇ ಇವೆ.
ಕಠಿಣ ನಿಯಮ ಕಾಗದದಲ್ಲಿ ಮಾತ್ರ
ಒಎಫ್‌ಸಿ ಅಳವಡಿಕೆ ಸಂದರ್ಭದಲ್ಲಿ ಸೇವಾ ಸಂಸ್ಥೆಗಳು ಪಾಲಿಸಬೇಕಾದ ನಿಯಮಗಳ ದೊಡ್ಡ ಪಟ್ಟಿಯೇ ಇದೆ.
ಹೊಸದಾಗಿ ಟಾರು ಹಾಕಿದ ರಸ್ತೆಗಳಲ್ಲಿ ಕನಿಷ್ಠ ಒಂದು ವರ್ಷದ ಅವಧಿವರೆಗೆ ಒಎಫ್‌ಸಿ ಹಾಕಲು ಅವಕಾಶ ಇಲ್ಲ. ಮಿಕ್ಕ ರಸ್ತೆಗಳಲ್ಲಿ ಅನುಮತಿ ಪಡೆದ ಅವಧಿಯಲ್ಲೇ ಕಾಮಗಾರಿಯನ್ನು ಸಂಪೂರ್ಣ ಮುಗಿಸಿ, ರಸ್ತೆಯನ್ನು ದುರಸ್ತಿಗೊಳಿಸಿ ಪುನಃ ಮೊದಲಿನ ಸ್ಥಿತಿಗೆ ತರಬೇಕು. ರಸ್ತೆ ದುರಸ್ತಿ ಮಾಡುವಾಗ ಭಾರತೀಯ ರಸ್ತೆ ಕಾಂಗ್ರೆಸ್‌ನ ನಿಯಮಗಳನ್ನು ಚಾಚೂತಪ್ಪದೆ ಪಾಲಿಸಬೇಕು. ಎರಡು ವರ್ಷಗಳವರೆಗೆ ಗುಂಡಿ ಬೀಳದಂತೆ ನಿರ್ವಹಣೆ ಮಾಡಬೇಕು.
ಕಾಮಗಾರಿ ಆರಂಭಿಸುವ ಮುನ್ನ ಟೆಲಿಕಾಂ ಸೇವಾ ಸಂಸ್ಥೆಗಳು ಸಂಬಂಧಿಸಿದ ವಾರ್ಡ್ ಎಂಜಿನಿಯರ್‌ಗಳಿಗೆ ಲಿಖಿತ ಮಾಹಿತಿ ನೀಡಬೇಕು. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರೈಸಲು ಆಗದಿದ್ದರೆ ಅವಧಿ ಮುಗಿಯುವುದಕ್ಕೆ 15 ದಿನಗಳಷ್ಟು ಮೊದಲು ಬಿಬಿಎಂಪಿಗೆ ಅರ್ಜಿ ಸಲ್ಲಿಸಿ ಪುನಃ ಅನುಮತಿ ಪಡೆದುಕೊಳ್ಳಬೇಕು.
ಆಯಾ ದಿನ ಅಗೆದ ಗುಂಡಿಗಳನ್ನು ಅದೇದಿನ ಮುಚ್ಚಬೇಕು. ರಸ್ತೆ ಅಗೆತದ ಕಾಲಕ್ಕೆ ಸಂಗ್ರಹವಾಗುವ ಮಣ್ಣು–ಕಲ್ಲು ಮತ್ತಿತರ ಸಾಮಗ್ರಿಯನ್ನು ತಕ್ಷಣ ವಿಲೇವಾರಿ ಮಾಡಬೇಕು. ಇಲ್ಲದಿದ್ದರೆ ಪ್ರತಿದಿನ ₹ 10 ಸಾವಿರ ದಂಡ ತೆರಬೇಕು. ರಸ್ತೆ ಅಗೆತದ ಕಾಲಕ್ಕೆ ಚರಂಡಿ, ಕಟ್ಟಡ ಇಲ್ಲವೆ ಬಿಬಿಎಂಪಿಗೆ ಸೇರಿದ ಬೇರೆ ಯಾವುದಾದರೂ ಆಸ್ತಿಗೆ ಹಾನಿಯಾದರೆ ಆ ಹಾನಿಯನ್ನು ತುಂಬಿಕೊಡಬೇಕು. ಅನುಮತಿ ಪಡೆದ ಮಾರ್ಗದಲ್ಲಿ ಮಾತ್ರ ಒಎಫ್‌ಸಿ ಅಳವಡಿಸಬೇಕು.
ಕಾಮಗಾರಿ ನಡೆದಾಗ ಆಯಾ ಸ್ಥಳೀಯ ವಾರ್ಡ್ ಎಂಜಿನಿಯರ್ ಅವರು ನಿಯಮಗಳನ್ನೆಲ್ಲ ಚಾಚೂತಪ್ಪದೆ ಪಾಲನೆ ಮಾಡಲಾಗುತ್ತಿದೆ ಎಂಬುದನ್ನು ಖುದ್ದು ಸ್ಥಳ ಪರಿಶೀಲಿಸಿ ಖಚಿತ ಮಾಡಿಕೊಳ್ಳಬೇಕು – ಆದರೆ, ಈ ನಿಯಮಗಳನ್ನೆಲ್ಲ ಗಾಳಿಗೆ ತೂರಲಾಗಿದೆ ಎನ್ನುವುದು ನಗರದ ರಸ್ತೆಗಳಲ್ಲಿ ಓಡಾಡಿದರೆ ಗೊತ್ತಾಗುತ್ತದೆ.
ಕೇಬಲ್‌ನ ನೇರ ಹುಗಿತ
ಡಕ್ಟ್ ಹಾಕದೆ ನೇರವಾಗಿ ರಸ್ತೆ ಕೊರೆದು ಕೇಬಲ್ ಅಳವಡಿಸುವ ವಿಧಾನ (ಡೈರೆಕ್ಟ್ ಬರೀಡ್ ಕೇಬಲ್–ಡಿಬಿಸಿ) ಸಹ ನಗರದಲ್ಲಿ ಬಳಕೆಯಲ್ಲಿದೆ. ಕಬ್ಬಿಣ ಮತ್ತು ಕಲ್ಲುಗಳನ್ನು ಕ್ಷಣಾರ್ಧದಲ್ಲಿ ಕತ್ತರಿಸುತ್ತಾ ಹೋಗುವಂತಹ ಯಂತ್ರಗಳ ಬಳಕೆ ಮಾಡಿ, ರಸ್ತೆಯ ಮೇಲ್ಭಾಗದಿಂದ ಸುಮಾರು ನಾಲ್ಕು ಇಂಚು ಆಳದ, ಎರಡು ಇಂಚು ಅಗಲದ ರಂಧ್ರಗಳನ್ನು ಕೊರೆದು, ಅದರಲ್ಲಿ ಒಎಫ್‌ಸಿ ಅಳವಡಿಸಲಾಗುತ್ತದೆ.
ಮೇಲ್ಭಾಗದಲ್ಲಿ ಅಲ್ಯುಮಿನಿಯಂ ಪ್ಲೇಟ್ ಇಟ್ಟು, ಅದರ ಮೇಲೆ ರಬ್ಬರ್ ಪಟ್ಟಿ ಹಾಕಲಾಗುತ್ತದೆ. ಆ ರಬ್ಬರ್ ಪಟ್ಟಿಗೆ ಪಾಲಿಮರ್ ರಾಸಾಯನಿಕ ಸುರಿದಾಗ, ಅದು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಹೀಗಾಗಿ ಡಿಬಿಸಿ ವಿಧಾನದ ಕೇಬಲ್ ಅಳವಡಿಕೆಯನ್ನು ಡಾಂಬರು ರಸ್ತೆಯಲ್ಲಿ ಗುರುತಿಸುವುದು ಕಷ್ಟ. ನಗರದಲ್ಲಿ ಸುಮಾರು 3 ಸಾವಿರ ಕಿ.ಮೀ.ಯಷ್ಟು ಉದ್ದದ ಕೇಬಲ್‌ಅನ್ನು ಡಿಬಿಸಿ ವಿಧಾನದಲ್ಲಿ ಅಳವಡಿಸಲಾಗಿದೆ ಎಂದು ಒಎಫ್‌ಸಿ ಪರಿಶೀಲನಾ ಸಮಿತಿ ವರದಿಯಲ್ಲೂ ವಿವರಿಸಲಾಗಿದೆ.
ಹೇಗಿದೆ ಒಎಫ್‌ಸಿ ಕಾರ್ಯವೈಖರಿ?
ಅಂತರ್ಜಾಲ ಸಮೂಹ ಸನ್ನಿಯ ಈ ಕಾಲದಲ್ಲಿ ಮೊಬೈಲ್ ಟವರ್‌ಗಳು ಹಾಗೂ ಬ್ರಾಡ್ ಬ್ಯಾಂಡ್ ಸೇವೆಗಳು ಸಂಪೂರ್ಣವಾಗಿ ಒಎಫ್‌ಸಿಯನ್ನೇ ಅವಲಂಬಿಸಿವೆ. 1994–95ಕ್ಕಿಂತ ಮುಂಚೆ ಅಂತರ್ಜಾಲ ಸೇವೆಗಳಿಗೆ ತಾಮ್ರದ ತಂತಿಗಳನ್ನು ಒಳಗೊಂಡ ಕೇಬಲ್ ಬಳಕೆ ಮಾಡಲಾಗುತ್ತಿತ್ತು. ಧ್ವನಿ ಹಾಗೂ ಚಿತ್ರಗಳ ಸ್ಪಷ್ಟತೆಗಾಗಿ ನಂತರದ ದಿನಗಳಲ್ಲಿ ಒಎಫ್‌ಸಿ ಆವಿಷ್ಕಾರವಾಯಿತು. ಪ್ರತಿಕ್ಷಣವೂ ಕೋಟ್ಯಂತರ ಆಪ್ಟಿಕಲ್ ಸಂಜ್ಞೆಗಳನ್ನು ಪ್ರವಹಿಸುವ ಆ ಒಎಫ್‌ಸಿ ಜಾಲವೇ ಈಗ ನಗರದ ತುಂಬಾ ಹರಡಿಕೊಂಡಿದೆ.
ತಾನು ಸ್ವೀಕರಿಸುವ ವಿದ್ಯುತ್ ತರಂಗಗಳನ್ನು ಆಪ್ಟಿಕಲ್ (ಬೆಳಕಿನ) ಸಂಜ್ಞೆಗಳನ್ನಾಗಿ ಪರಿವರ್ತಿಸಿ ಅಂತಿಮ ತಾಣದವರೆಗೆ ಪ್ರವಹಿಸಿ, ಅಲ್ಲಿ ಪುನಃ ವಿದ್ಯುತ್ ತರಂಗಗಳನ್ನಾಗಿ ಪರಿವರ್ತಿಸುವ ಜಾಲ ಆಪ್ಟಿಕಲ್ ಫೈಬರ್ ಕೇಬಲ್ (ಒಎಫ್‌ಸಿ). ಕೇಬಲ್ ಒಳಗಿರುವ ಸಿಲಿಕಾ ಗಾಜಿನ (ಮೆದುವಾದ ಹಾಗೂ ಬಾಗುವಂತಹ) ತಂತುಗಳೇ ಆಪ್ಟಿಕಲ್ ಸಂಜ್ಞೆಗಳನ್ನು ಸಾಗಿಸುವ ಸಾಧನಗಳು. ಧ್ವನಿ ಹಾಗೂ ಚಿತ್ರಗಳ ಸ್ಪಷ್ಟತೆಗಾಗಿ ಈ ವ್ಯವಸ್ಥೆಯನ್ನು ಆವಿಷ್ಕರಿಸಲಾಗಿದೆ. ಒಎಫ್‌ಸಿ ಜಾಲವು ಮಾಹಿತಿಯನ್ನು ಹರಿಸುವ ‘ತಂತ್ರಜ್ಞಾನದ ಕಾಲುವೆ’ ಆಗಿದೆ!
ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸೇವಾ ಸಂಸ್ಥೆಗಳು
ರಿಲಯನ್ಸ್ ಜಿಯೊ ಇನ್ಫೋಕಾಂ ಲಿಮಿಟೆಡ್, ರಿಲಯನ್ಸ್ ಕಮ್ಯೂನಿಕೇಷನ್ಸ್ ಲಿಮಿಟೆಡ್, ವೊಡಾಫೋನ್ ಎಸ್ಸಾರ್ ಸೌತ್ ಲಿಮಿಟೆಡ್, ಟಾಟಾ ಟೆಲಿ ಸರ್ವಿಸಸ್, ಟಾಟಾ ಕಮ್ಯೂನಿಕೇಷನ್ಸ್ ಲಿಮಿಟೆಡ್, ಭಾರತಿ ಏರ್‌ಟೆಲ್ ಲಿಮಿಟೆಡ್, ಡಿಷ್‌ನೆಟ್ ವೈರ್‌ಲೆಸ್ ಪ್ರೈವೇಟ್ ಲಿಮಿಟೆಡ್, ಐಡಿಯಾ ಸೆಲ್ಯುಲರ್ ಲಿಮಿಟೆಡ್, ಸಿಸ್ಟಿಮಾ ಶ್ಯಾಮ್ ಟೆಲಿ ಸರ್ವಿಸ್ ಲಿಮಿಟೆಡ್, ಭಾರತ್ ಸಂಚಾರ್ ನಿಗಮ್ ಲಿಮಿಟೆಡ್, ಸ್ಪೈಸ್ ಟೆಲಿಕಾಂ ಲಿಮಿಟೆಡ್, ಹಾತ್‌ವೇ, ಬೆಲ್ ಟೆಲಿ ಸರ್ವಿಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಯುನಿನಾರ್ ಯೂನಿಟೆಕ್ ವೈರ್‌ಲೆಸ್ (ಸೌತ್) ಪ್ರೈವೇಟ್ ಲಿಮಿಟೆಡ್, ಸ್ಪೆಕ್ಟ್ರಾ ಐಎಸ್‌ಪಿ ನೆಟ್‌ವರ್ಕ್ಸ್ ಪ್ರೈವೇಟ್ ಲಿಮಿಟೆಡ್.
ಇಂಡಸ್–ಇಂಡ್ ಮೀಡಿಯಾ ಕಮ್ಯೂನಿಕೇಷನ್ಸ್ ಲಿಮಿಟೆಡ್, ಅಮೋಘ್ ಬ್ರಾಡ್‌ಬ್ಯಾಂಡ್ ಸರ್ವಿಸಸ್, ಇನ್‌ಕೇಬಲ್ ನೆಟ್‌ವರ್ಕ್ಸ್, ಎಸಿಟಿ, ಇನ್ ಡಿಜಿಟಲ್ ನೆಟ್‌ವರ್ಕ್ಸ್, ಇನ್ಫೊಟೆಲ್ ಬ್ರಾಡ್‌ಬ್ಯಾಂಡ್ ಸರ್ವಿಸಸ್ ಲಿಮಿಟೆಡ್, ಎಂಪಿಲೆಕ್ಸ್ ನೆಟ್‌ವರ್ಕ್ಸ್, ಡೆನ್ ನೆಟ್‌ವರ್ಕ್ಸ್, ಯೂ ಟೆಲಿಕಾಂ, ಅನುಷ್ ಟೆಲಿ ಸರ್ವಿಸಸ್, ಯೂ ಡಿಜಿಟಲ್ ನೆಟ್‌ವರ್ಕ್ಸ್, ಇ–ಡಿಜಿಟಲ್ ನೆಟ್‌ವರ್ಕ್ಸ್, ಸ್ಟೆರ್‌ಲೈಟ್ ಟೆಕ್ನಾಲಜೀಸ್, ಕೈಜೆನ್ ಡಿಜಿಟಲ್, ಐರಿಸ್ ನೆಟ್‌ವರ್ಕ್ಸ್, ಜೆಡ್–6 ನೆಟ್‌ವರ್ಕ್ಸ್ ಪ್ರೈವೇಟ್ ಲಿಮಿಟೆಡ್, ಝೀ ನೆಟ್‌ವರ್ಕ್ ಲಿಮಿಟೆಡ್.
(ಬಿಬಿಎಂಪಿ ದಾಖಲೆಗಳ ಪ್ರಕಾರ)
* ಕಾನೂನು ಬದ್ಧವಾಗಿ ಒಎಫ್‌ಸಿ ಅಳವಡಿಕೆಗೆ ಪಾಲಿಕೆಗೆ ನಿರ್ದಿಷ್ಟ ಶುಲ್ಕಗಳನ್ನು ಪಾವತಿಸದೆ, ಅನುಮತಿ ಪಡೆಯದೇ ಕಾಮಗಾರಿ ನಡೆಸಲಾಗಿದೆ. ಇದರಿಂದ ಪಾಲಿಕೆ ಬೊಕ್ಕಸ ತುಂಬಬೇಕಿದ್ದ ಲಕ್ಷಾಂತರ ರೂಪಾಯಿ ಗುಳುಂ ಆಗಿದೆ
– ವಿ.ಆರ್.ಮರಾಠೆ, ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಅಧ್ಯಕ್ಷ
ಅಂಕಿ–ಅಂಶ
14.50 ಲಕ್ಷ
ಅಂತರ್ಜಾಲ ಸಂಪರ್ಕ ಪಡೆದ ಮನೆಗಳು
79
ಟೆಕ್‌ಪಾರ್ಕ್‌ಗಳು
3,758
ಸಾಫ್ಟ್‌ವೇರ್ ಕಂಪನಿಗಳು
12 ಸಾವಿರ
ದೂರಸಂಪರ್ಕ ಗೋಪುರಗಳು
131
ಮಾಲ್‌ಗಳು
1.10 ಲಕ್ಷ
ಕೈಗಾರಿಕಾ ಘಟಕಗಳು
2,446
ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಗಳು
ಪ್ರತಿ ಮೀಟರ್ ಒಎಫ್‌ಸಿ ಅಳವಡಿಕೆಗೆ ಪಾಲಿಕೆಗೆ ಪಾವತಿಸಬೇಕಾದ ಶುಲ್ಕ
ಅಳವಡಿಕೆ ಶುಲ್ಕ;₹ 600
ಮೇಲ್ವಿಚಾರಣೆ ಶುಲ್ಕ;₹ 100
ಭದ್ರತಾ ಠೇವಣಿ; ₹ 150
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.