ADVERTISEMENT

ಹೆಸರಘಟ್ಟ: ರಸ್ತೆಯೇ ಸಂತೆ ಕಟ್ಟೆ, ಸಂಚಾರಕ್ಕೆ ಅಡಚಣೆ

ಹೆಸರಘಟ್ಟ: ರೈತ ಸಂತೆಗೆ ವ್ಯಾಪಾರಿಗಳ ಸ್ಥಳಾಂತರಿಸಲು ಅಧಿಕಾರಿಗಳ ನಿರ್ಲಕ್ಷ್ಯ

​ಪ್ರಜಾವಾಣಿ ವಾರ್ತೆ
Published 7 ಜನವರಿ 2024, 0:30 IST
Last Updated 7 ಜನವರಿ 2024, 0:30 IST
<div class="paragraphs"><p>ರಸ್ತೆ ಬದಿಯಲ್ಲಿಯೇ ತರಕಾರಿ ಮಾರಾಟ ಮಾಡುತ್ತಿರುವ ವ್ಯಾಪಾರಿಗಳು</p></div>

ರಸ್ತೆ ಬದಿಯಲ್ಲಿಯೇ ತರಕಾರಿ ಮಾರಾಟ ಮಾಡುತ್ತಿರುವ ವ್ಯಾಪಾರಿಗಳು

   

ಹೆಸರಘಟ್ಟ: ರೈತ ಸಂತೆ ಕಟ್ಟೆಗೆ ವ್ಯಾಪಾರಿಗಳನ್ನು ಸ್ಥಳಾಂತರಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದು, ಹೆಸರಘಟ್ಟ ಬಸ್‌ ನಿಲ್ದಾಣ ಮತ್ತು ರಸ್ತೆ ಮಾರುಕಟ್ಟೆಯಂತಾಗಿದೆ. ಒಂದು ಕಡೆ, ಪ್ರಯಾಣಿಕರು ರಸ್ತೆಯಲ್ಲೇ ನಿಂತು ಬಸ್‌ಗೆ ಕಾಯಬೇಕಾದ ಪರಿಸ್ಥಿತಿ ಎದುರಾಗಿದ್ದರೆ, ಮತ್ತೊಂದು ಕಡೆ ಸಂಚಾರ ದಟ್ಟಣೆ ವಿಪರೀತವಾಗಿದೆ.

ಯಲಹಂಕ, ಬೆಂಗಳೂರಿನಿಂದ ಹೆಸರಘಟ್ಟ ಮಾರ್ಗವಾಗಿ ತೋಟಗೆರೆ, ಗೋಪಾಲಪುರ, ರೈಲ್ವೆಗೊಲ್ಲಹಳ್ಳಿ, ಮೂಲಕ ನೆಲಮಂಗಲ ಕಡೆಗೆ ಮತ್ತು ಕುಕ್ಕನಹಳ್ಳಿ, ಚಿಕ್ಕ ಮಧುರೆ ಕಡೆಗೆ ಸಂಚರಿಸುವ ಬಸ್ ನಿಲ್ದಾಣದಲ್ಲಿ ಮುಖ್ಯರಸ್ತೆಯ ಅಕ್ಕಪಕ್ಕದಲ್ಲಿ ಬೀದಿ ಬದಿ ವ್ಯಾಪಾರಿಗಳು ನಿತ್ಯ ತರಕಾರಿ, ಹೂ, ಹಣ್ಣಿನ ವ್ಯಾಪಾರ ಮಾಡುತ್ತಾರೆ. ರಸ್ತೆಯಲ್ಲಿಯೇ ದ್ವಿಚಕ್ರ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿದೆ. ಇದರಿಂದ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಬಸ್‌, ಲಾರಿಯಂಥ ಭಾರಿ ವಾಹನಗಳು ಬಂದರೆ ಪರಿಸ್ಥಿತಿ ಯಾತನಮಯವಾಗುತ್ತಿದೆ.
ಬಸ್ಸಿಗಾಗಿ ಕಾಯುವ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ವ್ಯಾಪಾರಿಗಳಿಗಾಗಿ ಹೆಸರಘಟ್ಟ ಗ್ರಾಮದ ಬಿಳಿಜಾಜಿ ರಸ್ತೆಯಲ್ಲಿ 12 ವರ್ಷಗಳ ಹಿಂದೆಯೇ ರೈತ ಸಂತೆಕಟ್ಟೆಗಳನ್ನು ನಿರ್ಮಿಸಲಾಗಿತ್ತು. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಂತೆ ಪ್ರಾಂಗಣವು ಪಾಳು ಬಿದ್ದಿದೆ. ಬೀದಿ ಬದಿ ವ್ಯಾಪಾರಿಗಳನ್ನು ಇಲ್ಲಿಗೆ ಸ್ಥಳಾಂತರಿಸಿ ಪರ್ಯಾಯ ವ್ಯವಸ್ಥೆ ಮಾಡದೇ ಇರುವುದು ಟ್ರಾಫಿಕ್ ಸಮಸ್ಯೆಗೆ ಕಾರಣವಾಗಿದೆ.

‘ಹಬ್ಬಗಳ ಸಮಯದಲ್ಲಿ ಒಂದು ಕಿಲೋ ಮೀಟರ್‌ವರೆಗೂ ವಾಹನದಟ್ಟಣೆ ಇರುತ್ತದೆ. ಸಂಬಂಧಪಟ್ಟ ಅಧಿಕಾರಿಗಳಾಗಲಿ, ಇಲಾಖೆಯವರಾಗಲಿ ತಲೆಕೆಡಿಸಿಕೊಳ್ಳುತ್ತಿಲ್ಲ’ ಎಂದು ಸ್ಥಳೀಯರಾದ ಮಲ್ಲಣ್ಣ ಬೇಸರ ವ್ಯಕ್ತಪಡಿಸಿದರು.

‘ತಾಸುಗಟ್ಟಲೆ ಬಸ್‌ಗಾಗಿ ರಸ್ತೆಯಲ್ಲೇ ಕಾದು ನಿಲ್ಲಬೇಕಾದ ಪರಿಸ್ಥಿತಿ ಇದೆ. ಪ್ರಯಾಣಿಕರಿಗೆ ಬಸ್ ತಂಗುದಾಣದ ಅವಶ್ಯಕತೆ ಇದೆ. ಆದರೆ ಯಾರೂ ಇತ್ತ ಕಡೆ ಗಮನ ಹರಿಸುತ್ತಿಲ್ಲ’ ಎಂದು ಕಾಲೇಜು ವಿದ್ಯಾರ್ಥಿಗಳಾದ ಅಂಜನ್ ಮತ್ತು ಸಂಜಯ್ ಹೇಳಿದರು.

ಹೆಸರುಘಟ್ಟದ ಸುತ್ತಮುತ್ತಲಿನ ರೈತರು ತೋಟಗಾರಿಕೆಯನ್ನೇ ಅವಲಂಬಿಸಿರುವುದರಿಂದ ಬೆಳೆದ ಬೆಳೆಯನ್ನು ಸೂಕ್ತ ಬೆಲೆಗೆ ಗ್ರಾಹಕರಿಗೆ ಮಾರಾಟ ಮಾಡಲು ರೈತ ಸಂತೆ ಮಾರುಕಟ್ಟೆಯ ಅವಶ್ಯಕತೆ ಇದೆ. ಆದ್ದರಿಂದ ಪಾಳು ಬಿದ್ದಿರುವ ರೈತ ಸಂತೆ ಪ್ರಾಂಗಣಕ್ಕೆ ಮರುಜೀವ ನೀಡಿ ಸೂಕ್ತ ನಿರ್ವಹಣೆ ಮಾಡಿದರೆ ರೈತರಿಗೆ, ವ್ಯಾಪಾರಿಗಳಿಗೆ, ಗ್ರಾಹಕರಿಗೆ ಅನುಕೂಲವಾಗುತ್ತದೆ ಎಂಬುದು ರೈತರ ಅಭಿಪ್ರಾಯವಾಗಿದೆ.

ರಸ್ತೆಯಲ್ಲಿ ದ್ವಿಚಕ್ರ ವಾಹನ ನಿಲುಗಡೆ ಮಧ್ಯೆಯೇ ಬಸ್ ಹತ್ತಲು ಪರದಾಡುತ್ತಿರುವ ಪ್ರಯಾಣಿಕರು
ತಂಗುದಾಣವಿಲ್ಲದೇ ತಾಸುಗಟ್ಟಲೇ ನಿಲ್ಲುತ್ತಿರುವ ಪ್ರಯಾಣಿಕರು
ಪಾಳು ಬಿದ್ದಿರುವ ರೈತ ಸಂತೆ ಪ್ರಾಂಗಣ

ರೈತ ಸಂತೆ ಪ್ರಾಂಗಣ ಕೆನರಾ ಬ್ಯಾಂಕ್ ಮತ್ತು ರಂಗಮಂದಿರದ ಮುಂಭಾಗ ಬೀದಿಬದಿ ವ್ಯಾಪಾರಿಗಳಿಗೆ ಅವಕಾಶ ಮಾಡಿಕೊಡಬೇಕು. ಶೇ

-ಖರ್ ಹೆಸರಘಟ್ಟ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ.

ಪ್ರತಿದಿನ ಸಂಜೆ ನಾಲ್ಕರ ನಂತರ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ. ರೈತ ಸಂತೆ ಮಾರುಕಟ್ಟೆಗೆ ವ್ಯಾಪಾರಿಗಳನ್ನು ಸ್ಥಳಾಂತರಿಸಬೇಕು.

-ಪುನೀತ್ ಸ್ಥಳೀಯ

ಹೆಸರುಘಟ್ಟ ಬಸ್ ನಿಲ್ದಾಣದಲ್ಲಿ ಟ್ರಾಫಿಕ್ ಸಮಸ್ಯೆಯು ತಲೆ ನೋವಾಗಿ ಪರಿಣಮಿಸುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ.

-ವಸಂತ್ ಸ್ಥಳೀಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.