ಬೆಂಗಳೂರು: ‘ಒಳ ಮೀಸಲಾತಿ ಎಂಬುದು ಸಾಮಾಜಿಕ ನ್ಯಾಯ. ಈ ವಿಷಯದಲ್ಲಿ ಹಸಿದವನ ತಟ್ಟೆಗೆ ಹೊಟ್ಟೆ ತುಂಬಿದವರು ಕೈಹಾಕುವುದು ದ್ರೋಹದ ಕೆಲಸ’ ಎಂದು ಸಾಹಿತಿ ಎಸ್.ಜಿ.ಸಿದ್ಧರಾಮಯ್ಯ ಹೇಳಿದರು.
ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿಯಲ್ಲಿ ಶುಕ್ರವಾರ ಭಾಗವಹಿಸಿ ಅವರು ಮಾತನಾಡಿದರು.
‘ಮೀಸಲಾತಿ ವಿರೋಧಿಸುವುದು ಸಾಮಾಜಿಕ ನ್ಯಾಯ ಆಗಲಾರದು. ಆದ್ದರಿಂದ ವಂಚಿತ ಸಮುದಾಯಗಳು ಸಂಘಟನಾತ್ಮಕವಾಗಿ ಹೋರಾಟ ಮಾಡುವ ಅಗತ್ಯವಿದೆ. ಹಸಿದವರ ಪರವಾಗಿ ನಿಲ್ಲುವುದು ನಮ್ಮ ಜವಾಬ್ದಾರಿ. ಆದ್ದರಿಂದ ಈ ಹೋರಾಟಕ್ಕೆ ಬೆಂಬಲ ಸೂಚಿಸಿದ್ದೇವೆ’ ಎಂದು ಹೇಳಿದರು.
‘ಬಲಿಷ್ಠ ಸಮಾಜಗಳು ಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವುದು ಒಂದು ರೀತಿಯ ವಿದ್ರೋಹದ ಕೆಲಸ. ಇಂತವರ ಕೂಗಿಗೆ ಸರ್ಕಾರವೂ ಕಿವಿಕೊಡುವ ಕೆಲಸ ಮಾಡುತ್ತಿದೆ. ಇದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದ ನಡೆ. ಬಲಿಷ್ಠ ಜಾತಿಗಳ ಹೋರಾಟವನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು. ಜಾತಿ ಜನಗಣತಿ ಆಧರಿಸಿ ಸಾಮಾಜಿಕ ನ್ಯಾಯವನ್ನು ವೈಜ್ಞಾನಿಕವಾಗಿ ನೀಡುವ ಅಗತ್ಯವಿದೆ’ ಎಂದರು.
ಸಾಹಿತಿ ಮೂಡ್ನಾಕಾಡು ಚಿನ್ನಸ್ವಾಮಿ ಮಾತನಾಡಿ, ‘ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿನ 101 ಜಾತಿಗಳಲ್ಲಿ ಕೆಲವರಿಗೆ ಅನ್ಯಾಯವಾಗಿದೆ ಎಂಬ ಕೂಗು ಹಿಂದಿನಿಂದಲೂ ಇದೆ. ಅವರಿಗೆ ಒಳ ಮೀಸಲಾತಿ ನೀಡದಿದ್ದರೆ ಮೀಸಲಾತಿಯ ಉದ್ದೇಶವೇ ಇಡೇರುವುದಿಲ್ಲ’ ಎಂದು ಹೇಳಿದರು.
ದಲಿತ ಸಮುದಾಯದ ಎರಡು ಜಾತಿಗಳು(ಎಡಗೈ ಮತ್ತು ಬಲಗೈ) ಒಗ್ಗಟ್ಟಿನಿಂದ ಒಳ ಮೀಸಲಾತಿ ಹೋರಾಟಕ್ಕೆ ಬೆಂಬಲವಾಗಿ ನಿಂತಿರುವುದು ಮಹತ್ವದ ವಿಷಯ. ಒಗ್ಗಟ್ಟಿನಿಂದಲೇ ಈ ಹೋರಾಟ ಮುನ್ನಡೆಸಬೇಕು ಎಂದು ತಿಳಿಸಿದರು.
ಲೇಖಕ ಬಂಜಗೆರೆ ಜಯಪ್ರಕಾಶ್ ಮಾತನಾಡಿ, ‘ಮೀಸಲಾತಿ ವಿಷಯದಲ್ಲಿ ಪರಸ್ಪರ ಜಗಳವಾಡುವ ಸ್ಥಿತಿಯನ್ನು ಸರ್ಕಾರ ತಂದೊಡ್ಡಿದೆ. ದಲಿತರ ಬಗ್ಗೆ ಕಾಳಜಿ ಇದ್ದಿದ್ದರೆ ಸರ್ಕಾರ ಸಂಪುಟ ಉಪಸಮಿತಿ ರಚಿಸಿ ವಿಳಂಬ ಮಾಡುತ್ತಿರಲಿಲ್ಲ. ಅಧಿವೇಶನದಲ್ಲಿ ಮಂಡಿಸಿ ಬಹಿರಂಗ ಚರ್ಚೆಗೆ ಅವಕಾಶ ನೀಡುತ್ತಿತ್ತು. ಅನಗತ್ಯವಾಗಿ ವಿಳಂಬ ಮಾಡುವುದು ಸರ್ಕಾರದ ಉದ್ದೇಶ’ ಎಂದರು.
12ನೇ ದಿನದ ಧರಣೆಯಲ್ಲಿ ಸಾಹಿತಿಗಳಾದ ವಸುಂಧರಾ ಭೂಪತಿ, ರುದ್ರಪ್ಪ ಹನಗವಾಡಿ, ಸುಬ್ಬು ಹೊಲೆಯಾರ್, ಸಿ.ಜಿ.ಲಕ್ಷ್ಮಿಪತಿ, ಶ್ರೀಪಾದ ಭಟ್, ಚಿತ್ರ ಕಲಾವಿದ ಚಂದ್ರಶೇಖರ್, ರವಿಕುಮಾರ್ ಬಾಗಿ, ಹುಲಿಕುಂಟೆ ಮೂರ್ತಿ, ವಿ.ಎಲ್.ನರಸಿಂಹಮೂರ್ತಿ ಭಾಗವಹಿಸಿ ಬೆಂಬಲ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.