ಬೆಂಗಳೂರು: ಮೊಬೈಲ್ ಆ್ಯಪ್ ಆಧರಿತ ಕ್ಯಾಬ್ ಸೇವೆ ಒದಗಿಸುತ್ತಿರುವ ಓಲಾ ಕಂಪನಿ, ಕಾರುಗಳನ್ನು ಬಾಡಿಗೆಗೆ ನೀಡುವ ‘ಸೆಲ್ಫ್ ಡ್ರೈವ್’ ಹೆಸರಿನ ಹೊಸ ಸೇವೆಗೆ ಗುರುವಾರ ಪ್ರಾಯೋಗಿಕವಾಗಿ ಚಾಲನೆ ನೀಡಿದೆ.
ಇಷ್ಟು ದಿನ ಚಾಲಕರು ಇರುತ್ತಿದ್ದ ಕ್ಯಾಬ್‌ನಲ್ಲಿ ಹೋಗುತ್ತಿದ್ದ ಪ್ರಯಾಣಿಕರು, ಇನ್ನು ಮುಂದೆ ತಾವೇ ಕಾರು ಚಲಾಯಿಸಿಕೊಂಡು ಹೋಗಲು ಅವಕಾಶ ಸಿಕ್ಕಂತಾಗಿದೆ. ಓಲಾ ಆ್ಯಪ್ ಅಪ್‌ಡೇಟ್ ಮಾಡಿಕೊಳ್ಳುವ ಮೂಲಕ ಪ್ರಯಾಣಿಕರು ಈ ಸೇವೆ ಬಳಸಬಹುದಾಗಿದೆ.
ಗರುಡಾ ಮಾಲ್ ಸೇರಿ ಹಲವು ಸ್ಥಳಗಳಲ್ಲಿ ಕಾರು ನಿಲ್ಲಿಸಲಾಗಿದೆ. ಆ್ಯಪ್‌ನಲ್ಲಿ ಬುಕಿಂಗ್ ಮಾಡುವ ಮೂಲಕ ಗ್ರಾಹಕರು ಆ ಕಾರುಗಳನ್ನು ತೆಗೆದುಕೊಂಡು ಹೋಗಬಹುದು. ಕೊನೆಯಲ್ಲಿ ನಿಗದಿತ ಜಾಗಕ್ಕೆ ಕಾರು ತಂದು ನಿಲ್ಲಿಸಬಹುದು. ಸದ್ಯ ಕೆಲವೆಡೆ ಮಾತ್ರ ಪಾರ್ಕಿಂಗ್ ಸೌಲಭ್ಯವಿದೆ. ಮತ್ತಷ್ಟು ಕಡೆಗಳಲ್ಲಿ ವ್ಯವಸ್ಥೆ ಕಲ್ಪಿಸಲು ಕಂಪನಿ ಪ್ರಯತ್ನಿಸುತ್ತಿದೆ.
ಮಾರುತಿ ಸ್ವಿಫ್ಟ್ ಸೇರಿ ಹಲವು ಐಷಾರಾಮಿ ಕಾರುಗಳು ಬಾಡಿಗೆಗೆ ಲಭ್ಯ ಇವೆ. ಈ ಸೇವೆ ಪ್ರಾಯೋಗಿಕವಾಗಿದ್ದು, ಸದ್ಯ ಪ್ರತಿ ಕಿ.ಮೀಗೆ ₹ 8 ನಿಗದಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ದರದಲ್ಲಿ ವ್ಯತ್ಯಾಸ ಆಗುವ ಸಾಧ್ಯತೆಯೂ ಇದೆ.
‘ಸೆಲ್ಫ್ ಡ್ರೈವ್ ಸೇವೆಗೆ ಚಾಲನೆ ನೀಡಲು ಖುಷಿ ಆಗುತ್ತಿದೆ. ಆ್ಯಪ್ ಬಳಸುತ್ತಿರುವ ಶೇ 25ರಷ್ಟು ಜನರಿಗೆ ಸದ್ಯ ಈ ಸೇವೆ ಸಿಗಲಿದೆ’ ಎಂದು ಓಲಾ ಕಂಪನಿಯ ಮಾರುಕಟ್ಟೆ ಅಧಿಕಾರಿ ಅರುಣ್ ಶ್ರೀನಿವಾಸ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.