ADVERTISEMENT

ವೃದ್ಧ ಉದ್ಯಮಿ ಜೊತೆ ಸಲುಗೆ: ಸಿಸಿಬಿ ಸೋಗಿನಲ್ಲಿ ₹14.90 ಲಕ್ಷ ಸುಲಿಗೆ

ಹನಿಟ್ರ್ಯಾಪ್: ಇಬ್ಬರು ಯುವತಿಯರು ಸೇರಿ ನಾಲ್ವರ ವಿರುದ್ಧ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2022, 21:18 IST
Last Updated 12 ಆಗಸ್ಟ್ 2022, 21:18 IST
   

ಬೆಂಗಳೂರು: ನಗರದ ಉದ್ಯಮಿಯೊಬ್ಬರನ್ನು ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸಿ ಸಿಸಿಬಿ ಪೊಲೀಸರ ಸೋಗಿನಲ್ಲಿ ₹ 14.90 ಲಕ್ಷ ಸುಲಿಗೆ ಮಾಡಲಾಗಿದ್ದು, ಈ ಸಂಬಂಧ ಹಲಸೂರು ಗೇಟ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಎಚ್ಎಸ್‌ಆರ್ ಲೇಔಟ್ ನಿವಾಸಿಯಾಗಿರುವ 72 ವರ್ಷದ ಉದ್ಯಮಿ, ಹೊಸೂರು ರಸ್ತೆಯ ಸಿಂಗಸಂದ್ರದಲ್ಲಿ ಕಂಪನಿಯೊಂದನ್ನು ನಡೆಸುತ್ತಿದ್ದಾರೆ. ವಿಮೆ ಮಾಡಿಸುವ ಸೋಗಿನಲ್ಲಿ ಪರಿಚಯವಾಗಿದ್ದ ಯುವತಿಯರು ಹಾಗೂ ಇತರರು, ಹನಿಟ್ರ್ಯಾಪ್ ಮಾಡಿ ಹಣ ದೋಚಿರುವುದಾಗಿ ದೂರು ನೀಡಿದ್ದಾರೆ. ಇಬ್ಬರು ಯುವತಿಯರು ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ವಿಮೆ ಕಂಪನಿ ಪ್ರತಿನಿಧಿಗಳೆಂದು ಹೇಳಿದ್ದ ಯುವತಿಯರು, ಉದ್ಯಮಿ ಜೊತೆ ಸಲುಗೆ ಬೆಳೆಸಿದ್ದರು. ವಾಟ್ಸ್‌ಆ್ಯಪ್ ಚಾಟಿಂಗ್ ಹಾಗೂ ವಿಡಿಯೊ ಕರೆ ಸಹ ಮಾಡುತ್ತಿದ್ದರು. ಆಗಾಗ ಭೇಟಿಯಾಗುತ್ತಿದ್ದರು. ಖಾಸಗಿ ಕ್ಷಣಗಳನ್ನು ವಿಡಿಯೊ ಹಾಗೂ ಫೋಟೊ ತೆಗೆದಿಟ್ಟುಕೊಂಡಿದ್ದರು’ ಎಂದು ತಿಳಿಸಿವೆ.

ADVERTISEMENT

ಎಫ್‌ಐಆರ್ ಬೆದರಿಕೆ: ‘ಆಗಸ್ಟ್ 3ರಂದು ಉದ್ಯಮಿಗೆ ಕರೆ ಮಾಡಿದ್ದ ಯುವತಿ, ಭೇಟಿಯಾಗಬೇಕೆಂದು ಹೇಳಿ ಹೊಸೂರು ರಸ್ತೆಗೆ ಕರೆಸಿಕೊಂಡಿದ್ದಳು. ಸ್ಥಳಕ್ಕೆ ಬಂದ ಉದ್ಯಮಿಯ ಕಾರು ಅಡ್ಡಗಟ್ಟಿದ್ದ ಇಬ್ಬರು, ‘ನಾವು ಸಿಸಿಬಿ ಪೊಲೀಸರು. ನಿಮ್ಮ ವಿರುದ್ಧ ಎಫ್ಐಆರ್ ದಾಖಲಾಗಿದೆ’ ಎಂದಿದ್ದರು. ಯುವತಿಯರ ಜೊತೆಗಿನ ವಾಟ್ಸ್‌ಆ್ಯಪ್ ಚಾಟಿಂಗ್ ಹಾಗೂ ವಿಡಿಯೊ ತೋರಿಸಿ ಬೆದರಿಸಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಕಾರಿನ ಕೀ ಹಾಗೂ ಮೊಬೈಲ್ ಕಸಿದುಕೊಂಡಿದ್ದ ಆರೋಪಿಗಳು, ಬಂಧಿಸುವ ಬೆದರಿಕೆಯೊಡ್ಡಿದ್ದರು. ಬಂಧಿಸಬಾರದೆಂದರೆ ಹಣ ನೀಡುವಂತೆ ಬೇಡಿಕೆ ಇರಿಸಿದ್ದರು. ಹೆದರಿದ್ದ ಉದ್ಯಮಿ ₹50 ಸಾವಿರ ನೀಡಿದ್ದರು. ಅದು ಸಾಲುವುದಿಲ್ಲ ಎಂದಿದ್ದ ಆರೋಪಿಗಳು, ಉದ್ಯಮಿಯನ್ನು ಕಾರಿನಲ್ಲಿ ಅಪಹರಿಸಿ ಹಲವೆಡೆ ಸುತ್ತಾಡಿಸಿದ್ದರು. ಕೂಡ್ಲುಗೇಟ್ ಬಳಿಯ ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್‌ಗೆ ಉದ್ಯಮಿಯನ್ನು ಕರೆದೊಯ್ದು ಅವರ ಖಾತೆಯಿಂದ ₹3.40 ಲಕ್ಷ ಡ್ರಾ ಮಾಡಿಸಿಕೊಂಡಿದ್ದರು.’

‘ಉದ್ಯಮಿಯನ್ನು ನಿತ್ಯವೂ ಪೀಡಿಸಲಾರಂಭಿಸಿದ್ದ ಆರೋಪಿಗಳು, ಹಂತ ಹಂತವಾಗಿ ₹14.90 ಲಕ್ಷ ಸುಲಿಗೆ ಮಾಡಿದ್ದರು. ಕಿರುಕುಳ ಹೆಚ್ಚಾಗುತ್ತಿದ್ದಂತೆ ಬೇಸತ್ತ ಉದ್ಯಮಿ, ಠಾಣೆಗೆ ದೂರು ನೀಡಿದ್ದಾರೆ’ ಎಂದೂ ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.