ADVERTISEMENT

ಪ್ರಜಾವಾಣಿ ವಿಶೇಷ | ವರ್ಷಗಟ್ಟಲೆ ನಿಂತಲ್ಲೇ ನಿಂತ ವಾಹನ

ಕಿರಿದಾದ ರಸ್ತೆಗಳಲ್ಲಿ ಬಳಸುವ ವಾಹನಗಳಿಗೇ ಸ್ಥಳದ ಅಭಾವ, ಈ ವಾಹನಗಳಿಂದ ಇನ್ನೂ ಕಿರಿಕಿರಿ

ಆದಿತ್ಯ ಕೆ.ಎ
Published 9 ಆಗಸ್ಟ್ 2022, 23:00 IST
Last Updated 9 ಆಗಸ್ಟ್ 2022, 23:00 IST
ನಗರದ ಹಲಸೂರಿನ ಸೇಂಟ್‌ ಜಾನ್ಸನ್‌ ರಸ್ತೆಯ ಪಾದಚಾರಿ ಮಾರ್ಗ ಆಕ್ರಮಿಸಿಕೊಂಡಿರುವ ಹಳೇ ವಾಹನ (ಎಡಚಿತ್ರ) ರಸ್ತೆ ಆಕ್ರಮಿಸಿಕೊಂಡು ನಿಂತಿರುವ ಹಳೇ ಕಾರು
ನಗರದ ಹಲಸೂರಿನ ಸೇಂಟ್‌ ಜಾನ್ಸನ್‌ ರಸ್ತೆಯ ಪಾದಚಾರಿ ಮಾರ್ಗ ಆಕ್ರಮಿಸಿಕೊಂಡಿರುವ ಹಳೇ ವಾಹನ (ಎಡಚಿತ್ರ) ರಸ್ತೆ ಆಕ್ರಮಿಸಿಕೊಂಡು ನಿಂತಿರುವ ಹಳೇ ಕಾರು   

ಬೆಂಗಳೂರು: ನಗರದ ಸೌಂದರ್ಯಕ್ಕೆ ಹಳೇ ವಾಹನಗಳು ಧಕ್ಕೆ ತರುತ್ತಿವೆ. ಬಡಾವಣೆಗಳ ಕಿರಿದಾದ ರಸ್ತೆಗಳಲ್ಲಿ ಹಳೇ ವಾಹನಗಳು ಹತ್ತಾರು ವರ್ಷಗಳಿಂದ ಒಂದೇ ಸ್ಥಳದಲ್ಲಿ ನಿಂತಿವೆ. ಪಳೆಯುಳಿಕೆಯಂತೆ ಕಾಣಿಸುತ್ತಿವೆ. ಆ ವಾಹನಗಳ ಮಾಲೀಕರು ಯಾರು ಎಂಬುದೇ ತಿಳಿದಿಲ್ಲ. ಬಿಬಿಎಂಪಿಯೂ ಅವುಗಳನ್ನು ಆ ಸ್ಥಳದಿಂದ ಕೊಂಡೊಯ್ದು ಗುಜರಿಗೆ ಹಾಕುವ ಪ್ರಯತ್ನ ಮಾಡಿಲ್ಲ. ಇದರಿಂದ ನಾಗರಿಕರು ಕಿರಿಕಿರಿ ಅನುಭವಿಸುತ್ತಿದ್ದಾರೆ.

ಒಡೆದಿರುವ ವಾಹನದ ಗಾಜುಗಳು, ಮಗುಚಿ ಬಿದ್ದಿರುವ ಆಟೊ, ರಸ್ತೆಯ ಬದಿಯಲ್ಲಿ ಮಾಸಲು ಕವರ್‌ ಮುಚ್ಚಿಕೊಂಡು ಹಲವು ದಿನಗಳಿಂದ ನಿಂತಿರುವ ಬೈಕ್‌ಗಳು... ಇಂತಹ ವಾಹನಗಳಲ್ಲಿ ಎಂಜಿನ್‌, ಸೀಟ್‌ ಯಾವುದೂ ಇಲ್ಲ. ನಿಂತ ಸ್ಥಳದಲ್ಲೇ ವಾಹನಗಳು ನಿಂತು ಸಿಲಿಕಾನ್‌ ಸಿಟಿಯ ಅಂದ ಕೆಡಿಸುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ.

‘ರಾಜಧಾನಿಯಲ್ಲಿ ಪ್ರತಿನಿತ್ಯ ದೊಡ್ಡ ಸಂಖ್ಯೆಯಲ್ಲಿ ಹೊಸ ವಾಹನಗಳು ರಸ್ತೆಗೆ ಇಳಿಯುತ್ತಿದ್ದು, ಸುಗಮ ಸಂಚಾರ ವ್ಯವಸ್ಥೆ ಸಾಧ್ಯವಾಗುತ್ತಿಲ್ಲ. ಇದರ ಜತೆಗೆ ಹಳೇ ವಾಹನಗಳು ಫುಟ್‌ಪಾತ್‌ ಮಾರ್ಗ ಆಕ್ರಮಿಸಿಕೊಂಡು ನಿಂತಿದ್ದು, ಬೆಳಿಗ್ಗೆ ವಾಯುವಿಹಾರಿಗಳಿಗೆ ಹಾಗೂ ಪಾದಚಾರಿಗಳಿಗೆ ಕಿರಿಕಿರಿ ಉಂಟು ಮಾಡುತ್ತಿವೆ. ಕೆಲವು ರಸ್ತೆಗಳಲ್ಲಿ ನಿಲುಗಡೆ ಮಾಡಿರುವ ವಾಹನಗಳ ಮಾಲೀಕರು ಯಾರು ಎಂಬುದು ತಿಳಿದಿಲ್ಲ’ ಎಂದು ಆಸ್ಬರ್ನ್‌ ರಸ್ತೆ ನಿವಾಸಿಗಳ ಕ್ಷೇಮಾಭಿವೃದ್ಧಿ ಒಕ್ಕೂಟದ ಸ್ಥಾಪಕ ಅಧ್ಯಕ್ಷ ಡಿ.ಆರ್‌.ಪ್ರಕಾಶ್ ದೂರಿದರು.

ADVERTISEMENT

ಮತ್ತಿಕೆರೆ, ಜಾಲಹಳ್ಳಿ, ಟಿ.ದಾಸರಹಳ್ಳಿ, ಪೀಣ್ಯ 2ನೇ ಹಂತ, ಸುಂಕದಕಟ್ಟೆ, ವಸಂತ ನಗರ, ಹಲಸೂರು, ಶಿವಾಜಿನಗರ, ಮರಿಯಮ್ಮನಪಾಳ್ಯ, ಕೆಂಗೇರಿ, ಬ್ಯಾಟರಾಯನಪುರ, ಯಲಹಂಕ... ಹೀಗೆ ನಗರದ ವಿವಿಧ ಬಡಾವಣೆಗಳಲ್ಲಿ ಬಳಕೆಗೆ ಬಾರದ ಸಾವಿರಾರು ಸಂಖ್ಯೆಯ ವಾಹನಗಳು ರಸ್ತೆಯ ಬದಿಯಲ್ಲಿ ನಿಂತಿವೆ. ಇವುಗಳ ವಿಲೇವಾರಿ ನಡೆಯುತ್ತಿಲ್ಲ. ಶಿವಾಜಿನಗರ ಕ್ಷೇತ್ರದಲ್ಲಿ ಈ ಸಮಸ್ಯೆ ತೀವ್ರವಾಗಿದೆ ಎಂದು ಅಲ್ಲಿನ ನಿವಾಸಿಗಳು ದೂರಿದ್ದಾರೆ.

‘ಬಳಸಲು ಸಾಧ್ಯವಿಲ್ಲದ ವಾಹನಗಳ ಖರೀದಿಗೆ ಯಾರೂ ಮುಂದೆ ಬರುತ್ತಿಲ್ಲ. ಇದೇ ಕಾರಣಕ್ಕೆ ಮನೆಯ ಮುಂದೆ ಎರಡು ವರ್ಷಗಳಿಂದ ಹಳೆಯ ವಾಹನ ನಿಲುಗಡೆ ಮಾಡಲಾಗಿದೆ. ನಾವೇ ವಿಲೇವಾರಿ ಮಾಡಲು ಜಾಗದ ಸಮಸ್ಯೆಯಿದೆ. ಬೇರೆ ಸ್ಥಳಕ್ಕೆ ಹಾಕಿ ಬಂದರೆ ಆ ಜಾಗದ ಮಾಲೀಕರು ಪೊಲೀಸರಿಗೆ ದೂರು ನೀಡುತ್ತಾರೆ ಎಂಬ ಭಯವಿದೆ’ ಎಂದು ವಸಂತ ನಗರದ ನಿವಾಸಿ ರಾಜೀವ್‌ ಹೇಳಿದರು.

‘ಜಾಗ ಹುಡುಕದ ಬಿಬಿಎಂಪಿ’

ಹೊರವಲಯದಲ್ಲಿ 5ರಿಂದ 6 ಎಕರೆಯಷ್ಟು ಜಾಗ ಹುಡುಕಿ ಅಲ್ಲಿಗೆ ಬಳಕೆಗೆ ಬಾರದ ಹಳೆಯ ವಾಹನ ವಿಲೇವಾರಿ ಮಾಡಬಹುದು ಎಂದು ಹಲವು ಶಾಸಕರು ಬಿಬಿಎಂಪಿಗೆ ಸಲಹೆ ನೀಡಿದ್ದರು. ಆದರೆ, ಅಧಿಕಾರಿಗಳು ಜಾಗ ಹುಡುಕುವ ಪ್ರಯತ್ನ ಮಾಡಿಲ್ಲ ಎಂಬ ಆರೋಪ ಇದೆ.

ಮುಂದಿನ ಅಧಿವೇಶನದಲ್ಲಿ ಪ್ರಶ್ನಿಸಿ ಜಾಗ ಮಂಜೂರಿಗೆ ಪ್ರಯತ್ನಿಸಲಾಗುವುದು ಎಂದು ಶಿವಾಜಿನಗರ ಕ್ಷೇತ್ರದ ಶಾಸಕ ರಿಜ್ವಾನ್ ಅರ್ಷದ್‌ ಭರವಸೆ ನೀಡಿದ್ದಾರೆ.

ಅಕ್ರಮ ಚಟುವಟಿಕೆಗೆ ಬಳಸುವ ಆತಂಕ

ಮಾಲೀಕರಿಲ್ಲದ ಸಾವಿರಾರು ಹಳೇ ವಾಹನಗಳು ರಸ್ತೆಬದಿ ಹಾಗೂ ಪಾದಚಾರಿ ಮಾರ್ಗದಲ್ಲಿ ನಿಂತಿದ್ದು, ಸುರಕ್ಷತೆಯ ಪ್ರಶ್ನೆ ಎದುರಾಗಿದೆ. ದುಷ್ಕರ್ಮಿಗಳು ವಿಧ್ವಂಸಕ ಕೃತ್ಯ ಹಾಗೂ ಅಕ್ರಮ ಚಟುವಟಿಕೆಗೆ ಇಂತಹ ವಾಹನಗಳನ್ನೇ ಬಳಸಿಕೊಳ್ಳುವ ಆತಂಕ ಎದುರಾಗಿದೆ. ನಗರದ ಹೊರವಲಯಕ್ಕೆ ಎಲ್ಲ ವಾಹನಗಳನ್ನು ವಿಲೇವಾರಿ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಅಪರಿಚಿತ ಕಾರಿನಲ್ಲಿ ಮೃತದೇಹ ಪತ್ತೆ

ಈ ಹಿಂದೆ ರಾಜಾಜಿನಗರ ಕೈಗಾರಿಕಾ ಪ್ರದೇಶದ ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಅಪರಿಚಿತ ಕಾರಿನಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿತ್ತು. ಇದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿತ್ತು.

‘4ನೇ ಅಡ್ಡರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಅಂಬಾಸಿಡರ್ ಕಾರಿನಿಂದ ದುರ್ವಾಸನೆ ಬರುತ್ತಿತ್ತು. ಅನುಮಾನಗೊಂಡ ಸ್ಥಳೀಯರು, ಕಾರಿನ ಬಳಿ ಹೋಗಿ ನೋಡಿದಾಗ ಮೃತದೇಹ ಕಂಡಿತ್ತು. ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದರು’ – ಹೀಗೆ ಅಪರಾಧ ಚಟುವಟಿಕೆಗಳಿಗೂ ಈ ಹಳೇ ಕಾರುಗಳು ಬಳಕೆ ಆಗುತ್ತಿವೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.