ಬೆಂಗಳೂರು: ಓಎಲ್‌ಎಕ್ಸ್ ಜಾಲತಾಣದಲ್ಲಿ ಜಾಹೀರಾತು ನೀಡುತ್ತಿದ್ದ ಮಾಲೀಕರನ್ನು ಪರಿಚಯಿಸಿಕೊಂಡು, ಟೆಸ್ಟ್ ಡ್ರೈವ್ ನೆಪದಲ್ಲಿ ಅವರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ.
‘ಡಿ.ಜೆ.ಹಳ್ಳಿಯ ಯಾಸೀನ್ ಬೇಗ್ (22) ಹಾಗೂ ಗೋವಿಂದಪುರದ ಇಮ್ರಾನ್ ಖಾನ್ (24) ಬಂಧಿತರು. ಇವರಿಬ್ಬರೂ ಹಲವು ವರ್ಷಗಳಿಂದ ಕೃತ್ಯ ಎಸಗುತ್ತಿದ್ದರು. ಆರೋಪಿಗಳಿಂದ ₹ 15 ಲಕ್ಷ ಮೌಲ್ಯದ 19 ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ದೂರುದಾರ ಮಹಮ್ಮದ್ ನಸೀಫ್ ಎಂಬುವವರು ತಮ್ಮ ದ್ವಿಚಕ್ರ ವಾಹನ ಮಾರಲು ತೀರ್ಮಾನಿಸಿ, ಓಎಲ್‌ಎಕ್ಸ್‌ನಲ್ಲಿ ಜಾಹೀರಾತು ಪೋಸ್ಟ್ ಮಾಡಿದ್ದರು. ಅದನ್ನು ನೋಡಿದ್ದ ಆರೋಪಿಗಳು, ನಸೀಫ್ ಅವರನ್ನು ಸಂಪರ್ಕಿಸಿದ್ದರು.’
‘ನ. 13ರಂದು ದೂರುದಾರರನ್ನು ಭೇಟಿಯಾಗಿದ್ದ ಆರೋಪಿಗಳು, ಟೆಸ್ಟ್ ಡ್ರೈವ್ ಮಾಡುವುದಾಗಿ ಹೇಳಿ ದ್ವಿಚಕ್ರ ವಾಹನದ ಸಮೇತ ಪರಾರಿಯಾಗಿದ್ದರು. ಕೃತ್ಯದ ಬಗ್ಗೆ ನಸೀಫ್ ನೀಡಿದ್ದ ದೂರು ಆಧರಿಸಿ ತನಿಖೆ ಕೈಗೊಂಡಾಗ ಆರೋಪಿಗಳು ಸಿಕ್ಕಿಬಿದ್ದರು’ ಎಂದೂ ತಿಳಿಸಿದರು.
‘ಬಾಣಸವಾಡಿ, ಜೀವನಬಿಮಾ ನಗರ, ಯಶವಂತಪುರ, ಮಹದೇವಪುರ, ಕೊತ್ತನೂರು, ಇಂದಿರಾನಗರ, ಗೋವಿಂದಪುರ, ವಿ.ವಿ.ಪುರ, ಎಚ್‌ಎಸ್‌ಆರ್ ಲೇಔಟ್, ದೊಡ್ಡಬಳ್ಳಾಪುರ, ನಂದಿಗಿರಿ ಠಾಣೆ ವ್ಯಾಪ್ತಿಯಲ್ಲೂ ಆರೋಪಿಗಳು ದ್ವಿಚಕ್ರವಾಹನಗಳನ್ನು ಕದ್ದಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ಹೇಳಿದರು.
ಆ್ಯಪ್ ಆಧಾರಿತ ವಾಹನಗಳ ಕಳ್ಳತನ: ‘ಮೊಬೈಲ್ ಆ್ಯಪ್ ಮೂಲಕ ದ್ವಿಚಕ್ರ ವಾಹನ ಬಾಡಿಗೆ ಪಡೆಯುತ್ತಿದ್ದ ಆರೋಪಿಗಳು, ಅವುಗಳನ್ನೂ ಕದ್ದೊಯ್ಯುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು.
‘ಕದ್ದ ವಾಹನಗಳ ನೋಂದಣಿ ಫಲಕ ಬದಲಾಯಿಸಿ ಮಾರುತ್ತಿದ್ದರು. ಕೆಲ ವಾಹನಗಳ ಬಿಡಿಭಾಗಗಳನ್ನಷ್ಟೇ ಮಾರಾಟ ಮಾಡುತ್ತಿದ್ದರು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.