ADVERTISEMENT

ಟೆಸ್ಟ್‌ ಡ್ರೈವ್‌ ನೆಪದಲ್ಲಿ ಕಾರಿನೊಂದಿಗೆ ಪರಾರಿ; 3 ತಿಂಗಳ ಪೊಲೀಸ್‌ ಕಾರ್ಯಾಚರಣೆ

ಆರೋಪಿ ಬಂಧನ: ಮೂರು ತಿಂಗಳು ನಿರಂತರ ಕಾರ್ಯಾಚರಣೆ ನಡೆಸಿದ್ದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 15 ಮೇ 2022, 18:25 IST
Last Updated 15 ಮೇ 2022, 18:25 IST
ವೆಂಕಟೇಶ್‌ ನಾಯ್ಕ
ವೆಂಕಟೇಶ್‌ ನಾಯ್ಕ   

ಬೆಂಗಳೂರು: ಪರೀಕ್ಷಾರ್ಥ ಚಲಾಯಿಸಲು (ಟೆಸ್ಟ್‌ ಡ್ರೈವ್‌) ಪಡೆದುಕೊಂಡ ಕಾರಿನೊಂದಿಗೆ ಪರಾರಿಯಾಗಿದ್ದ ಆರೋಪಿಯನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಅಮೃತನಗರದ ಎಂ.ಜಿ.ವೆಂಕಟೇಶ್‌ ನಾಯ್ಕ (36) ಬಂಧಿತ. ಈತನಿಂದ ವಿಟಾರಾ ಬ್ರೆಜಾ ಕಾರು ಹಾಗೂ ಮೊಬೈಲ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.

‘ಆರೋಪಿಯು ಪತ್ನಿಯನ್ನು ಚುನಾವಣೆಗೆ ನಿಲ್ಲಿಸಿದ್ದ. ಆಕೆಯನ್ನು ಗೆಲ್ಲಿಸಲು ಸಾಕಷ್ಟು ಹಣ ವ್ಯಯಿಸಿದ್ದ ಈತ ಹಲವರ ಬಳಿ ಸಾಲ ಮಾಡಿಕೊಂಡಿದ್ದ. ಅದನ್ನು ತೀರಿಸಲು ತನ್ನ ಬಳಿ ಇದ್ದವಿಟಾರಾ ಬ್ರೆಜಾ ಕಂಪನಿಯ ಬೂದು ಬಣ್ಣದ ಕಾರು ಮಾರಿದ್ದ. ಕಾರು ಇಲ್ಲದಿರುವುದನ್ನು ಕಂಡರೆ ನೆರೆ ಹೊರೆಯವರು ಹಾಗೂ ಸ್ನೇಹಿತರು ಅಪಹಾಸ್ಯ ಮಾಡುತ್ತಾರೆ ಎಂದು ಭಾವಿಸಿ ಇದೇ ಬಣ್ಣದ ಕಾರು ಕದಿಯಲು ಯೋಜನೆ ರೂ‍ಪಿಸಿದ್ದ’ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

‘ಆರೋಪಿಯು ಬೂದು ಬಣ್ಣದ ಬ್ರೆಜಾ ಕಾರಿಗಾಗಿ ಒಎಲ್‌ಎಕ್ಸ್‌ನಲ್ಲಿ ಹುಡುಕಾಟ ನಡೆಸಿದ್ದ. ಕೆಂಪಾಪುರದ ರವೀಂದ್ರ ಎಂಬುವರು ಇದೇ ಬಣ್ಣದ ಕಾರನ್ನು ಮಾರಾಟಕ್ಕೆ ಇಟ್ಟಿರುವುದನ್ನು ಗಮನಿಸಿದ್ದ. ಅವರನ್ನು ಸಂಪರ್ಕಿಸಿ ಕಾರು ಕೊಳ್ಳುವುದಾಗಿ ತಿಳಿಸಿದ್ದ. ಜನವರಿ 30ರಂದು ರವೀಂದ್ರ ಅವರಿಗೆ ಕರೆ ಮಾಡಿದ್ದ ಈತ ಕಾರು ನೋಡಲು ಬರುವುದಾಗಿ ಹೇಳಿದ್ದ. ರಾತ್ರಿ 7 ಗಂಟೆ ಸುಮಾರಿಗೆ ಅವರ ಮನೆ ಬಳಿ ಹೋಗಿದ್ದ. ಟೆಸ್ಟ್ ಡ್ರೈವ್‌ ನೋಡುವುದಾಗಿ ಕೀ ಪಡೆದು ಕಾರಿನ ಸಮೇತ ಪರಾರಿಯಾಗಿದ್ದ’ ಎಂದು ವಿವರಿಸಿದ್ದಾರೆ.

‘ಸುಮಾರು ಹೊತ್ತು ಕಾದರೂ ಕಾರಿನೊಂದಿಗೆ ಆತ ಹಿಂತಿರುಗಿರಲಿಲ್ಲ. ಹೀಗಾಗಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈತನ ಪತ್ತೆಗಾಗಿ ಸಿಬ್ಬಂದಿ ಸುಮಾರು ಮೂರು ತಿಂಗಳು ಪರಿಶ್ರಮಪಟ್ಟಿದ್ದರು. ಈ ಅವಧಿಯಲ್ಲಿ ಒಎಲ್‌ಎಕ್ಸ್‌ನ ಸುಮಾರುಎರಡೂವರೆ ಸಾವಿರ ಐಪಿ ಅಡ್ರೆಸ್‌ಗಳನ್ನು ಜಾಲಾಡಿದ್ದರು. ಈ ವೇಳೆ ವೆಂಕಟೇಶ್‌ನ ಐಪಿ ಅಡ್ರೆಸ್‌ ಪತ್ತೆಯಾಗಿತ್ತು. ಅದರ ಆಧಾರದಲ್ಲಿ ಆತನನ್ನು ಇದೇ 10ರಂದು ದಾಸರಹಳ್ಳಿ ಮುಖ್ಯರಸ್ತೆಯಲ್ಲಿ ಬಂಧಿಸಲಾಯಿತು’ ಎಂದು ಹೇಳಿದ್ದಾರೆ.

ಕದ್ದ ಮೊಬೈಲ್‌ನಲ್ಲೇ ಕರೆ

‘ಕಾರು ಕಳವು ಮಾಡಲು ನಿಶ್ಚಯಿಸಿದ್ದ ಆರೋಪಿಯು ಅದಕ್ಕಾಗಿ ಬಾಗಲೂರು ಪೊಲೀಸ್‌ ಠಾಣೆಯ ಸರಹದ್ದಿನಲ್ಲಿ ವಿವೊ ಕಂಪನಿಯ ಮೊಬೈಲ್‌ವೊಂದನ್ನು ಕದ್ದಿದ್ದ. ಅದರಿಂದಲೇ ರವೀಂದ್ರ ಅವರಿಗೆ ಕರೆ ಮಾಡಿದ್ದ. ತನ್ನ ಮೊಬೈಲ್‌ ಸ್ವಿಚ್ಆ‌ಫ್‌ ಆಗಿದೆ. ಹೀಗಾಗಿ ಬೇರೊಬ್ಬರ ಮೊಬೈಲ್‌ನಿಂದ ಕರೆ ಮಾಡುತ್ತಿರುವುದಾಗಿ ಅವರಿಗೆ ತಿಳಿಸಿದ್ದ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.