ಬೆಂಗಳೂರು: ಕದ್ದಿರುವ ಕಾರಿನ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಒಎಲ್‍ಎಕ್ಸ್ ಜಾಲತಾಣದ ಮೂಲಕ ಉದ್ಯಮಿಗೆ ಮಾರಾಟ ಮಾಡಿ ವಂಚಿಸಿರುವ ಘಟನೆ ನಡೆದಿದ್ದು, ಈ ಸಂಬಂಧ ವರ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಿಪ್ಪಸಂದ್ರ ನಿವಾಸಿ ಹರೀಶ್ ವಂಚನೆಗೊಳಗಾದ ಉದ್ಯಮಿ. ವಂಚನೆ ಮಾಡಿರುವ ಸುರೇಶ್, ರಾಮ್, ವಿಶ್ವಾಸ್ ವಿರುದ್ಧ ದೂರು ನೀಡಿದ್ದಾರೆ.
ಮಾರ್ಚ್‌ನಲ್ಲಿ ಕಾರು ಮಾರಾಟ ಮಾಡುತ್ತಿರುವುದಾಗಿ ಆರೋಪಿಗಳು ಒಎಲ್‍ಎಕ್ಸ್ ಜಾಲತಾಣದಲ್ಲಿ ಜಾಹೀರಾತು ನೀಡಿದ್ದರು. ಕಾರು ಖರೀದಿಗೆ ಮುಂದಾಗಿದ್ದ ಹರೀಶ್, ವಿಶ್ವಾಸ್‌ನನ್ನು ಸಂಪರ್ಕಿಸಿ, ಮೂವರನ್ನು ಭೇಟಿಯಾಗಿ ₹4.25 ಲಕ್ಷಕ್ಕೆ ಕಾರು ಖರೀದಿಸಲು ಮಾತುಕತೆ ನಡೆಸಿದ್ದರು. ಬಳಿಕ ₹10 ಸಾವಿರ ಮುಂಗಡ ಹಣ ನೀಡಿ, ಮರುದಿನ ₹1.45 ಲಕ್ಷ ನಗದು ಹಾಗೂ ಉಳಿದ ಹಣವನ್ನು ಚೆಕ್ ರೂಪದಲ್ಲಿ ನೀಡಿ ಕಾರು ಖರೀದಿಸಿದರು.
‘ಆರೋಪಿಗಳು ವ್ಯಾಟ್ಸ್ ಆಪ್‍ನಲ್ಲಿ ಕಾರಿನ ದಾಖಲೆ ಕಳುಹಿಸಿದ್ದರು. ಕೆಲ ದಿನಗಳ ಬಳಿಕ ಮೂಲ ದಾಖಲೆ ಕೇಳಲು ಸಂಪರ್ಕಿಸಿದಾಗ ಅವರು ಸಂಪರ್ಕಕ್ಕೆ ಸಿಗಲಿಲ್ಲ. ಆರ್.ಸಿ.ಬುಕ್‍ನಲ್ಲಿದ್ದ ವಿಳಾಸಕ್ಕೆ ಹೋಗಿ ವಿಚಾರಿಸಿದಾಗ, ಕಾರಿನ ಮಾಲೀಕ ಬೇರೆಯವರು ಎಂದು ಗೊತ್ತಾಯಿತು. ವಂಚಿಸಿರುವುದು ತಿಳಿದ ಕೂಡಲೇ ದೂರು ನೀಡಿದ್ದಾರೆ’ ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.