ಬೆಂಗಳೂರು: ಓಎಲ್‌ಎಕ್ಸ್ ಜಾಲತಾಣದಲ್ಲಿ ವಾಹನ ಮಾರಾಟಕ್ಕಿಟ್ಟ ಮಾಲೀಕರನ್ನು ಪರಿಚಯಿಸಿಕೊಂಡು, ಟೆಸ್ಟ್ ಡ್ರೈವ್ ಮಾಡುವ ಸೋಗಿನಲ್ಲಿ ನಕಲಿ ಕೀ ಮಾಡಿಸಿಕೊಂಡು ವಾಹನ ಕದಿಯುತ್ತಿದ್ದ ಆರೋಪಿಯನ್ನು ಕಲಾಸಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ಚನ್ನಸಂದ್ರ ನಿವಾಸಿ ಬಿ.ಎಂ. ಭರತ್ (24) ಬಂಧಿತ. ಆತನಿಂದ ಕಾರು ಹಾಗೂ ಮೂರು ಬೈಕ್ ಜಪ್ತಿ ಮಾಡಲಾಗಿದೆ.
'ಓಎಲ್‌ಎಕ್ಸ್‌ನಲ್ಲಿ ವಾಹನ ಮಾರಾಟದ ಜಾಹೀರಾತು ನೋಡುತ್ತಿದ್ದ ಆರೋಪಿ, ಅವುಗಳ ಮಾಲೀಕರನ್ನು ಸಂಪರ್ಕಿಸುತ್ತಿದ್ದ. ಬೀದಿಬದಿ ವ್ಯಾಪಾರಿಗಳ ಬಳಿ ಹೋಗುತ್ತಿದ್ದ ಆತ, ತನ್ನ ಬಳಿ ಕರೆನ್ಸಿ ಇಲ್ಲವೆಂದು ವ್ಯಾಪಾರಿಗಳ ಮೊಬೈಲ್‌ನಿಂದ ಮಾಲೀಕರಿಗೆ ಕರೆ ಮಾಡುತ್ತಿದ್ದ' ಎಂದು ಪೊಲೀಸರು ಹೇಳಿದರು.
'ಟೆಸ್ಟ್ ಡ್ರೈವ್ ನೋಡಲು ಹೋಗುತ್ತಿದ್ದ ಆರೋಪಿ, ವಾಹನ ಪಡೆದು ಒಬ್ಬಂಟಿಯಾಗಿ ಚಾಲನೆ ಮಾಡುತ್ತಿದ್ದ. ಅದೇ ವೇಳೆಯೇ ನಕಲಿ ಕೀ ಮಾಡಿಸಿಕೊಂಡು ಬರುತ್ತಿದ್ದ. ನಂತರ, ಕೀಯನ್ನು ಮಾಲೀಕರಿಗೆ ಕೊಡುತ್ತಿದ್ದ'.
'ಮರುದಿನವೇ ತನ್ನ ಬಳಿ ಇದ್ದ ಕೀ ಬಳಸಿ ವಾಹನವನ್ನು ಆರೋಪಿ ಕಳವು ಮಾಡುತ್ತಿದ್ದ. ಇತ್ತೀಚೆಗೆ ₹14.96 ಲಕ್ಷ ಮೌಲ್ಯದ ಕಾರು ಕದ್ದಿದ್ದ. ಆ ದೂರಿನ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ' ಎಂದೂ ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.