ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಜನ ಜಾಗೃತಿ ಮೂಡಿಸಿದ 'ಎದ್ದೇಳು ಕರ್ನಾಟಕ' ಸಂಘಟನೆ ಇದೇ 26ರಂದು ನಗರದ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಭಾಂಗಣದಲ್ಲಿ ರಾಜ್ಯಮಟ್ಟದ ಅಭಿನಂದನಾ ಸಮಾವೇಶ ಆಯೋಜಿಸಿದೆ.
ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಜೆ.ಎಂ.ವೀರಸಂಗಯ್ಯ, ‘ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ದ್ವೇಷ ರಾಜಕಾರಣವನ್ನು ಕೊನೆಗಾಣಿಸಲು ‘ಎದ್ದೇಳು ಕರ್ನಾಟಕ’ದ 112 ಪ್ರಗತಿಪರ ಸಂಘಟನೆಗಳ ಐಕ್ಯ ವೇದಿಕೆ ರಾಜ್ಯದಾದ್ಯಂತ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದೆ. 103 ವಿಧಾನಸಭೆ ಕ್ಷೇತ್ರಗಳನ್ನು ಸೂಕ್ಷ್ಮ ಎಂದು ಗುರುತಿಸಿ ಜಾತ್ಯತೀತ ಮತಗಳು ಕ್ರೋಢಿಕರಣವಾಗಲು ಶ್ರಮಿಸಿದೆ’ ಎಂದು ಹೇಳಿದರು.
‘10 ಲಕ್ಷಕ್ಕೂ ಹೆಚ್ಚಿನ ವಿವಿಧ ಬಗೆಯ ಸಾಹಿತ್ಯವನ್ನು ಮುದ್ರಿಸಿ ಹಂಚಲಾಯಿತು. ಸಾಮಾಜಿಕ ಮಾಧ್ಯಮಗಳಲ್ಲಿ 7 ಹಾಡುಗಳ ಆಲ್ಬಂ, 80ಕ್ಕೂ ಹೆಚ್ಚು ವಿಡಿಯೋಗಳನ್ನು ಪ್ರಸರಣ ಮಾಡಲಾಯಿತು. 250ಕ್ಕೂ ಹೆಚ್ಚು ಕಾರ್ಯಾಗಾರಗಳನ್ನು ನಡೆಸಲಾಯಿತು. ಈ ಅಭಿಯಾನದಲ್ಲಿ ಸಾಹಿತಿಗಳು, ಚಿಂತಕರು, ಕಲಾವಿದರು ಪಾಲ್ಗೊಂಡಿದ್ದರು. ಅವರಿಗೆಲ್ಲ ಅಭಿನಂದಿಸಲು ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಾಹಿತಿ ದೇವನೂರ ಮಹಾದೇವ, ವಿಜಯಾ, ಪುರುಷೋತ್ತಮ ಬಿಳಿಮಲೆ, ರೆಹಮತ್ ತರೀಕೆರೆ, ದು.ಸರಸ್ವತಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.