ADVERTISEMENT

ಬೆಂಗಳೂರು: ಅ.21ರಂದು ಅರ್ಚಕರ ಬೃಹತ್‌ ಸಮಾವೇಶ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 19:36 IST
Last Updated 18 ಅಕ್ಟೋಬರ್ 2024, 19:36 IST
<div class="paragraphs"><p>ಅರ್ಚಕರು (ಸಂಗ್ರಹ ಚಿತ್ರ)</p></div>

ಅರ್ಚಕರು (ಸಂಗ್ರಹ ಚಿತ್ರ)

   

ಬೆಂಗಳೂರು: ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ–ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟದ ಸುವರ್ಣ ಮಹೋತ್ಸವದ ಅಂಗವಾಗಿ ಮತ್ತು ಅರ್ಚಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅ.21ರಂದು ಸಂಜೆ 4ಕ್ಕೆ ಬೆಂಗಳೂರು ಪುರಭವನದಲ್ಲಿ ರಾಜ್ಯಮಟ್ಟದ ಬೃಹತ್‌ ಸಮಾವೇಶ ನಡೆಸಲು ಒಕ್ಕೂಟ ನಿರ್ಧರಿಸಿದೆ.

‘ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ನೇತೃತ್ವದಲ್ಲಿ ಸಮಾವೇಶ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟಿಸಲಿದ್ದಾರೆ. ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ’ ಎಂದು ಒಕ್ಕೂಟದ ಪ್ರಧಾನ ಸಲಹೆಗಾರ ರಾಧಾಕೃಷ್ಣ ಕೆ.ಇ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ADVERTISEMENT

‘ರಾಜ್ಯದಲ್ಲಿ 1.86 ಲಕ್ಷ ದೇವಸ್ಥಾನಗಳಿವೆ. ಅದರಲ್ಲಿ 36,615 ದೇವಸ್ಥಾನಗಳು ಮುಜರಾಯಿ ಇಲಾಖೆಯ ಅಡಿಯಲ್ಲಿವೆ. ಹೆಚ್ಚು ಆದಾಯ ಇರುವ ‘ಎ’ ವರ್ಗದ ದೇವಸ್ಥಾನಗಳು 205, ಮಧ್ಯಮ ಆದಾಯ ಇರುವ ‘ಬಿ’ ವರ್ಗದ 193 ದೇವಸ್ಥಾನಗಳು ಹಾಗೂ ಆದಾಯ ಅತಿ ಕಡಿಮೆ ಇರುವ ‘ಸಿ’ ವರ್ಗದ 36,217 ದೇವಸ್ಥಾನಗಳು ಇವೆ’ ಎಂದು ವಿವರ ನೀಡಿದರು.

‘ಎ’ ಮತ್ತು ‘ಬಿ’ ವರ್ಗದ ದೇವಸ್ಥಾನಗಳ ಆದಾಯದ ಶೇ 10ರಷ್ಟನ್ನು ‘ಸಿ’ ವರ್ಗದ ದೇವಸ್ಥಾನಗಳ ಅಭಿವೃದ್ಧಿಗೆ ಬಳಸಬೇಕು. ಉಳಿದ ಮೊತ್ತವನ್ನು ಆಯಾ ದೇವಸ್ಥಾನಗಳ ಅಭಿವೃದ್ಧಿಗೆ ಬಳಸಬೇಕು ಎಂಬ ನಿಯಮ ಇದೆ. ಆದರೆ, ಈವರೆಗೆ ‘ಸಿ’ ವರ್ಗದ ದೇವಸ್ಥಾನಗಳ ಅಭಿವೃದ್ಧಿಗೆ ಬಳಸಬೇಕಾದ ನಿಧಿ ಬಂದಿಲ್ಲ ಎಂದು ಮುಖ್ಯ ಪ್ರಧಾನ ಕಾರ್ಯದರ್ಶಿ ಕೆ.ಎಸ್‌.ಎನ್‌. ದೀಕ್ಷಿತ್‌, ಉಪಾಧ್ಯಕ್ಷ ಆರ್‌. ಲಕ್ಷ್ಮೀಕಾಂತ್‌ ಬೇಸರ ವ್ಯಕ್ತಪಡಿಸಿದರು.

ಮುಜರಾಯಿ ಇಲಾಖೆಯಡಿ ಬರುವ ದೇವಸ್ಥಾನಗಳನ್ನು ಖಾಸಗಿಯವರಿಗೆ ನೀಡಬಾರದು. ಈ ದೇವಸ್ಥಾನಗಳ ಮೂಲ ಸೌಕರ್ಯವನ್ನು, ಇಲ್ಲಿನ ಅರ್ಚಕರು ಸಿಬ್ಬಂದಿಗೆ ಸೌಲಭ್ಯಗಳನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.