ADVERTISEMENT

‘ರಾಜ್‌’ ನ್ಯೂಸ್‌ ಸಿಇಒ ವಿರುದ್ಧ ಇನ್ನೊಂದು ಎಫ್‌ಐಆರ್‌

ತಿಂಗಳಿಗೆ ₹20 ಸಾವಿರ ಕೊಡುವಂತೆ ಸ್ಪಾ ಮಾಲೀಕರಿಗೆ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 15:57 IST
Last Updated 7 ಜುಲೈ 2024, 15:57 IST
ವೆಂಕಟೇಶ್ 
ವೆಂಕಟೇಶ್    

ಬೆಂಗಳೂರು: ಸ್ಪಾ ಮಾಲೀಕರನ್ನು ಬೆದರಿಸಿ ಹಣ ಸುಲಿಗೆಗೆ ಪ್ರಯತ್ನಿಸಿದ್ದ ಆರೋಪದಡಿ ‘ರಾಜ್‌’ ನ್ಯೂಸ್ ಸಿಇಒ ವೆಂಕಟೇಶ್‌ ಅವರ ವಿರುದ್ಧ ಇನ್ನೊಂದು ಎಫ್‌ಐಆರ್ ದಾಖಲಾಗಿದೆ.

ಮಹೇಶ್‌ ಶೆಟ್ಟಿ ಎಂಬುವವರು ನೀಡಿದ ದೂರು ಆಧರಿಸಿ ಇಂದಿರಾನಗರ ಠಾಣೆ ಪೊಲೀಸರು ಜುಲೈ 5ರಂದು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಇಂದಿರಾನಗರದ (100 ಅಡಿ ರಸ್ತೆ) 15ನೇ ಮುಖ್ಯರಸ್ತೆಯಲ್ಲಿರುವ ‘ಟ್ರೀ ಸ್ಪಾ ಆ್ಯಂಡ್‌ ಬ್ಯೂಟಿ ಪಾರ್ಲರ್‌’ನ ವ್ಯವಸ್ಥಾಪಕ ಶಿವಕುಮಾರ್ ಎಂಬುವವರು ನೀಡಿದ್ದ ದೂರು ಆಧರಿಸಿ ಜೆ.ಬಿ. ನಗರ ಠಾಣೆಯ ಪೊಲೀಸರು ವೆಂಕಟೇಶ್ ಹಾಗೂ ನಿರೂಪಕಿ ದಿವ್ಯಾ ವಸಂತ  ಅವರ ಸಹೋದರ ಸಂದೇಶ ಅವರನ್ನು ಶುಕ್ರವಾರ ಬಂಧಿಸಿದ್ದರು. ಅದೇ ಮಾದರಿಯಲ್ಲಿ ಸುಲಿಗೆಗೆ ಯತ್ನಿಸಿದ್ದ ಅರೋಪದಡಿ ವೆಂಕಟೇಶ್‌ ಮೇಲೆ ಮತ್ತೊಂದು ಪ್ರಕರಣ ದಾಖಲಾಗಿದೆ.

ADVERTISEMENT

ಜೆ.ಬಿ. ನಗರ ಠಾಣೆ ಪ್ರಕರಣ ಸಂಬಂಧ ದಿವ್ಯಾ ಹಾಗೂ ಆಕಾಶ್ ಅವರ ಪತ್ತೆಗೆ ಶೋಧ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.

ಏನಿದು ಇನ್ನೊಂದು ಪ್ರಕರಣ?: ಮಹೇಶ್‌ ಶೆಟ್ಟಿ ಅವರು ಇಂದಿರಾನಗರದ 80 ಅಡಿ ರಸ್ತೆಯ ಮೈಕಲ್‌ ಪಾಳ್ಯದಲ್ಲಿ ‘ಸಹಾರಾ ಇಂಟರ್‌ನ್ಯಾಷನಲ್‌ ಸ್ಪಾ’ ತೆರೆದಿದ್ದರು. ಬಿಬಿಎಂಪಿಯಿಂದ ಪರವಾನಗಿ ಪಡೆದುಕೊಂಡಿದ್ದರು. ನಂತರ ಮಧುಸೂದನ್‌ ಅವರಿಗೆ ಸ್ಪಾದ ಉಸ್ತುವಾರಿ ವಹಿಸಿಕೊಟ್ಟಿದ್ದರು. ಜೂನ್ 19ರಂದು ಗ್ರಾಹಕರ ಸೋಗಿನಲ್ಲಿ ವ್ಯಕ್ತಿಯೊಬ್ಬರು ಸ್ಪಾಗೆ ಬಂದು, 90 ನಿಮಿಷದ ಥೆರಪಿಗೆ ಹೆಸರು ನೋಂದಾಯಿಸಿ ₹8 ಸಾವಿರ ಪಾವತಿಸಿದ್ದರು. ಸ್ಪಾ ಸಿಬ್ಬಂದಿ ಥೆರಪಿ ಮಾಡಿ ಅವರನ್ನು ಕಳುಹಿಸಿದ್ದರು. ಅದಾದ ಕೆಲವೇ ನಿಮಿಷಗಳಲ್ಲಿ ಸ್ಪಾದ ವ್ಯವಸ್ಥಾಪಕ ಇಮ್ಯಾನುವೆಲ್‌ಗೆ ಆರೋಪಿ ವೆಂಕಟೇಶ್ ಕರೆ ಮಾಡಿ, ರಾಜ್‌ ನ್ಯೂಸ್‌ ಸಿಇಒ ಎಂದು ಪರಿಚಯಿಸಿಕೊಂಡಿದ್ದರು. ಖಾಸಗಿಯಾಗಿ ಮಾತುಕತೆ ನಡೆಸಬೇಕೆಂದು ಹೇಳಿ ಮಹೇಶ್ ಶೆಟ್ಟಿ ಅವರನ್ನು ಯಲಹಂಕ ನ್ಯೂಟೌನ್‌ಗೆ ಕರೆಸಿಕೊಂಡಿದ್ದರು’ ಎಂದು ಪೊಲೀಸರು ಹೇಳಿದರು.

₹ 25 ಲಕ್ಷಕ್ಕೆ ಬೇಡಿಕೆ:

‘ಸ್ಥಳಕ್ಕೆ ಬಂದಿದ್ದ ಆರೋಪಿ ವೆಂಕಟೇಶ್‌ ಅವರು ಮಹೇಶ್ ಶೆಟ್ಟಿ ಅವರನ್ನು ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಮೊಬೈಲ್ ಸ್ವಿಚ್ಡ್‌ ಆಫ್‌ ಮಾಡಿಸಿದ್ದರು. ನಿಮ್ಮ ಸ್ಪಾದಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ಹೇಳಿ, ಮೊಬೈಲ್‌ನಲ್ಲಿದ್ದ ವಿಡಿಯೊವೊಂದನ್ನು ತೋರಿಸಿದ್ದರು. ₹25 ಲಕ್ಷ ನೀಡಿದರೆ ವಿಡಿಯೊ ಡಿಲೀಟ್ ಮಾಡುತ್ತೇನೆಂದು ಹೇಳಿದ್ದರು. ಹಣ ಕೊಡದಿದ್ದರೆ ವಾಹಿನಿಯಲ್ಲಿ ಪ್ರಸಾರ ಮಾಡುವುದಾಗಿ ಬೆದರಿಸಿದ್ದರು. ಅಷ್ಟು ಹಣವಿಲ್ಲ ಎಂದು ತಿಳಿಸಿದಾಗ ₹10 ಲಕ್ಷಕ್ಕೆ ಪಟ್ಟು ಹಿಡಿದಿದ್ದರು. ಅಂತಿಮವಾಗಿ ₹ 1 ಲಕ್ಷಕ್ಕೆ ಮಾತುಕತೆ ಆಗಿತ್ತು. ಸ್ಪಾ ಮಾಲೀಕರು ಹೆದರಿ ನಾಲ್ಕು ಕಂತುಗಳಲ್ಲಿ ₹ 1 ಲಕ್ಷ ಪಾವತಿಸಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಕೆಲವು ದಿನಗಳ ಬಳಿಕ ಮತ್ತೆ ಕರೆ ಮಾಡಿದ್ದ ವೆಂಕಟೇಶ್ ಅವರು ಪ್ರತಿ ತಿಂಗಳು ₹20 ಸಾವಿರ ಹಣವನ್ನು ಗೂಗಲ್ ಪೇ ಮೂಲಕ ನೀಡುವಂತೆ ಬೇಡಿಕೆ ಇಟ್ಟಿದ್ದರು. ಹಣ ನೀಡದಿದ್ದರೆ ಸ್ಪಾದಲ್ಲಿ ರಾಜ್ಯ, ಹೊರ ರಾಜ್ಯದ ಮಹಿಳೆಯರನ್ನು ಇರಿಸಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಸುದ್ದಿ ಪ್ರಸಾರ ಮಾಡುತ್ತೇನೆಂದು ಬೆದರಿಕೆ ಹಾಕಿದ್ದರು’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.