ADVERTISEMENT

‘ಏಕಕಾಲಕ್ಕೆ ಚುನಾವಣೆ ಸಾಧುವೇ’

​ಪ್ರಜಾವಾಣಿ ವಾರ್ತೆ
Published 21 ಜುಲೈ 2019, 19:49 IST
Last Updated 21 ಜುಲೈ 2019, 19:49 IST
   

ಒಕ್ಕೂಟ ವ್ಯವಸ್ಥೆ ಹೊಂದಿರುವ ಭಾರತದಲ್ಲಿ ಏಕಕಾಲಕ್ಕೆ ಚುನಾವಣೆ ಸಾಧ್ಯವೇ ? ಸಂಸತ್ತಿನಲ್ಲಿ ಅತ್ಯಧಿಕ ಸ್ಥಾನಗಳನ್ನು ಹೊಂದಿರುವ ಕಾರಣಕ್ಕೆ ಬಿಜೆಪಿ ಸದ್ಯ ಈ ಬಗ್ಗೆ ಉತ್ಸಾಹ ತೋರುತ್ತಿದೆಯೇ ಎಂಬ ಪ್ರಶ್ನೆಗಳು ‘ಒಂದು ರಾಷ್ಟ್ರ, ಒಂದು ಚುನಾವಣೆ’ ಕುರಿತ ವಿಚಾರಸಂಕಿರಣದಲ್ಲಿ ಪ್ರಸ್ತಾಪವಾದವು. ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರವು (ಬಿಐಸಿ) ಭಾನುವಾರ ಏರ್ಪಡಿಸಿದ್ದ ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಪ್ರೊ. ಎಂ.ವಿ. ರಾಜೀವ್‌ ಗೌಡ ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ತಮ್ಮ ವಾದ ಮಂಡಿಸಿದರು.

ರಾಜೀವ್‌ ಗೌಡ:ಯಾವುದೇ ಚುನಾವಣೆಯಾಗಲಿ ವಿಷಯಾಧಾರಿತವಾಗಿ ಜನ ಮತ ಚಲಾಯಿಸುತ್ತಾರೆ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿನ ವಿಷಯಗಳು ಭಿನ್ನವಾಗಿರುತ್ತವೆ. ಆದರೆ, ಏಕಕಾಲಕ್ಕೆ ಚುನಾವಣೆ ಎಂದಾಗ ಜನರು ರಾಷ್ಟ್ರೀಯ ವಿಷಯಗಳನ್ನು ಆಧರಿಸಿಯೇ ಮತ ಚಲಾಯಿಸುತ್ತಾರೆ. ಸ್ಥಳೀಯ ವಿಷಯಗಳು ಗೌಣವಾದಾಗ ಪ್ರಾದೇಶಿಕ ಪಕ್ಷಗಳಿಗೆ ಧಕ್ಕೆ ಆಗುತ್ತದೆ. ರಾಷ್ಟ್ರೀಯ ಪಕ್ಷಗಳೊಂದಿಗೆ ಸ್ಪರ್ಧೆಗಿಳಿಯುವ ಅವುಗಳ ಸಾಮರ್ಥ್ಯ ಕುಸಿಯುತ್ತದೆ. ಏಕಕಾಲಕ್ಕೆ ಚುನಾವಣೆಯಾದಾಗ ನಿಜವಾದ ಜನಾದೇಶ ಸಿಗುವುದಿಲ್ಲ.

ರಾಜೀವ್‌: ಚುನಾವಣಾ ವೆಚ್ಚವನ್ನು ಕಡಿಮೆಗೊಳಿಸಲು ಬೇಕಾದಷ್ಟು ಕ್ರಮಗಳಿವೆ. ಪ್ರಧಾನಿ ಮೋದಿ ಅವರು ಯಾವಾಗಲೂ ಪ್ರಚಾರದ ಗುಂಗಿನಲ್ಲೇ ಇರುತ್ತಾರೆ. ಜತೆಗೆ, ಈ ಸಲ ಬಿಜೆಪಿಗೆ ಬಹುಮತ ಸಿಕ್ಕಿರುವ ಕಾರಣದಿಂದ ಏಕಕಾಲದ ಚುನಾವಣೆಯ ಮಾತನಾಡುತ್ತಿದ್ದಾರೆ. ನೆಹರೂ ಭಾರಿ ಬಹುಮತ ಹೊಂದಿದ್ದರೂ ಈ ರೀತಿ ಮಾಡಲಿಲ್ಲ. ವಿರೋಧ ಪಕ್ಷಗಳ ಅಭಿಪ್ರಾಯಗಳಿಗೆ ಅವರು ಮನ್ನಣೆ ನೀಡುತ್ತಿದ್ದರು.

ADVERTISEMENT

ರಾಜೀವ್‌: ಏಕಕಾಲಕ್ಕೆ ಚುನಾವಣೆಯು ಅಧ್ಯಕ್ಷೀಯ ಪದ್ಧತಿಯಾಗುತ್ತದೆ. ‘ಒಂದು ರಾಷ್ಟ್ರ, ಒಂದು ಚುನಾವಣೆ ಮತ್ತು ಒಂದು ಪಕ್ಷ’ ಪದ್ಧತಿ ತರುವ ಪ್ರಯತ್ನ ನಡೆಯುತ್ತಿವೆ.

ತೇಜಸ್ವಿ ಸೂರ್ಯ: ಇತ್ತೀಚೆಗೆ ಲೋಕಸಭೆಯೊಂದಿಗೆ ಹಲವು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಯೂ ನಡೆಯಿತು. ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಪ್ರಾದೇಶಿಕ ಪಕ್ಷಗಳೇ ಅಧಿಕಾರಕ್ಕೆ ಬಂದಿವೆ. ಒಡಿಶಾದಲ್ಲಿ ಅನಕ್ಷರಸ್ಥರು ಹೆಚ್ಚಿದ್ದಾರೆ. ಆದರೆ, ಒಂದು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದರೆ, ಅದೇ ಜಿಲ್ಲೆಯ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಡಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಏಕಕಾಲಕ್ಕೆ ಚುನಾವಣೆ ನಡೆದರೆ ಹಣ–ಸಮಯ ಉಳಿಯುತ್ತದೆ.

ತೇಜಸ್ವಿ: ಏಕಕಾಲದ ಚುನಾವಣೆ ವಿಷಯ ಚರ್ಚೆಯ ಹಂತದಲ್ಲಿದೆ. ಈ ಕುರಿತು ವಿರೋಧ ಪಕ್ಷಗಳನ್ನು ಚರ್ಚೆಗೆ ಆಹ್ವಾನಿಸಿದರೂ ಬರಲಿಲ್ಲ. ಚರ್ಚೆಯಲ್ಲಿ ಭಾಗವಹಿಸುವುದು ಕೂಡ ಪ್ರಜಾಸತ್ತಾತ್ಮಕ ನಡೆ ಎಂಬುದನ್ನು ವಿರೋಧ ಪಕ್ಷಗಳು ತಿಳಿದುಕೊಳ್ಳಬೇಕು.

ತೇಜಸ್ವಿ: ಕಾನೂನು ಆಯೋಗ ಈ ಬಗ್ಗೆ ಶಿಫಾರಸು ಮಾಡಿದ್ದು 1999ರಲ್ಲಿ. ಆಗಿನಿಂದಲೇ ಚರ್ಚೆ ನಡೆಯುತ್ತಿದೆ. ಪ್ರಧಾನಿ ಮೋದಿ ಈ ಬಗ್ಗೆ ಮತ್ತೆ ಪ್ರಸ್ತಾಪಿಸಿದ್ದಾರೆ ಅಷ್ಟೇ. ಒಂದೇ ಸಮಯಕ್ಕೆ ಚುನಾವಣೆ ನಡೆಯಬೇಕೆಂದರೆ, ಒಂದೇ ಪಕ್ಷಕ್ಕೆ ಮತ ಹಾಕಬೇಕು ಎಂದೇನೂ ಅಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.