ಬೆಂಗಳೂರು: ಎಟಿಎಂ ಕಾರ್ಡ್ ನಿಷ್ಕ್ರಿಯವಾಗುವುದಾಗಿ ಹೇಳಿ ನಗರದ ವೃದ್ಧೆಯೊಬ್ಬರಿಂದ ಬ್ಯಾಂಕ್ ಖಾತೆ ವಿವರ ಪಡೆದಿದ್ದ ಸೈಬರ್ ಖದೀಮರು, ವೃದ್ಧೆ ಹೆಸರಿನಲ್ಲಿ ಆನ್‌ಲೈನ್ ಬ್ಯಾಂಕಿಂಗ್ ಖಾತೆ ತೆರೆದು ₹ 8.76 ಲಕ್ಷ ಡ್ರಾ ಮಾಡಿಕೊಂಡು ವಂಚಿಸಿದ್ದಾರೆ.
‘ಅಂಜನಾನಗರ ನಿವಾಸಿಯಾಗಿರುವ 63 ವರ್ಷದ ವೃದ್ಧೆ ವಂಚನೆ ಬಗ್ಗೆ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪಶ್ಚಿಮ ವಿಭಾಗ ಸೈಬರ್ ಕ್ರೈಂ ಪೊಲೀಸ್ ಮೂಲಗಳು ಹೇಳಿವೆ.
‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ವೃದ್ಧೆ ಖಾತೆ ಹೊಂದಿದ್ದಾರೆ. ಬ್ಯಾಂಕ್ ಪ್ರತಿನಿಧಿ ಸೋಗಿನಲ್ಲಿ ವೃದ್ಧೆಗೆ ಜುಲೈ 8ರಂದು ಕರೆ ಮಾಡಿದ್ದ ಆರೋಪಿ, ‘ನಿಮ್ಮ ಎಟಿಎಂ ಕಾರ್ಡ್ ಸದ್ಯದಲ್ಲೇ ನಿಷ್ಕ್ರಿಯವಾಗಲಿದೆ. ತ್ವರಿತವಾಗಿ ಆನ್‌ಲೈನ್ ಬ್ಯಾಂಕಿಂಗ್ ಖಾತೆ ತೆರೆದು ಎಟಿಎಂ ಕಾರ್ಡ್ ನವೀಕರಣ ಮಾಡಬೇಕಿದೆ. ಅದಕ್ಕಾಗಿ, ಬ್ಯಾಂಕ್ ಖಾತೆ ವಿವರ ನೀಡಿ’ ಎಂದಿದ್ದ. ಅದನ್ನು ನಂಬಿದ್ದ ವೃದ್ಧೆ, ಖಾತೆ ಮಾಹಿತಿ ಹಾಗೂ ಒಟಿಪಿ (ಒನ್ ಟೈಂ ಪಾಸ್‌ವರ್ಡ್) ಹಂಚಿಕೊಂಡಿದ್ದರು.’
‘ವೃದ್ಧೆ ಹೆಸರಿನಲ್ಲಿ ಆನ್‌ಲೈನ್ ಬ್ಯಾಂಕಿಂಗ್ ಖಾತೆ ಸೃಷ್ಟಿಸಿದ್ದ ಆರೋಪಿಗಳು, ಠೇವಣಿ ಹಣವನ್ನು ಖಾತೆಗೆ ವರ್ಗಾಯಿಸಿಕೊಂಡಿದ್ದರು. ನಂತರ, ಅದರಲ್ಲಿದ್ದ ₹ 8.76 ಲಕ್ಷವನ್ನು ಹಂತ ಹಂತವಾಗಿ ಬೇರೆ ಖಾತೆಗಳಿಗೆ ಜಮೆ ಮಾಡಿಕೊಂಡಿದ್ದಾರೆ. ಖಾತೆ ವಿವರ ಆಧರಿಸಿ ತನಿಖೆ ಮುಂದುವರಿಸಲಾಗಿದೆ’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.