ADVERTISEMENT

ಆನ್‌ಲೈನ್ ಜೂಜಾಟ: ಬುದ್ದಿ ಹೇಳಿದ್ದಕ್ಕೆ ಮನೆ ತೊರೆದ ಪತ್ನಿ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2023, 15:50 IST
Last Updated 14 ಆಗಸ್ಟ್ 2023, 15:50 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಆನ್‌ಲೈನ್ ಜೂಜಾಟದಲ್ಲಿ ₹ 4.50 ಲಕ್ಷ ಕಳೆದುಕೊಂಡಿದ್ದ ಮಹಿಳೆಯೊಬ್ಬರು ಇಬ್ಬರು ಮಕ್ಕಳು ಸಮೇತ ಮನೆ ತೊರೆದಿದ್ದು, ಮೂವರು ನಾಪತ್ತೆಯಾಗಿರುವ ಬಗ್ಗೆ ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ನಾಗಪುರ ನಿವಾಸಿಯಾಗಿರುವ ಮಹಿಳೆ ಹಾಗೂ ಇಬ್ಬರು ಮಕ್ಕಳು ನಾಪತ್ತೆಯಾಗಿದ್ದಾರೆ. ಮೂವರನ್ನು ಹುಡುಕಿಕೊಡುವಂತೆ ಮಹಿಳೆಯ ಪತಿ ದೂರು ನೀಡಿದ್ದಾರೆ. ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಗೃಹಿಣಿಯಾಗಿದ್ದ ಮಹಿಳೆ, ಮೊಬೈಲ್ ಹೆಚ್ಚಾಗಿ ಬಳಸುತ್ತಿದ್ದರು. ಆನ್‌ಲೈನ್ ಜೂಜು ಆ್ಯಪ್‌ ಇನ್‌ಸ್ಟಾಲ್‌ ಮಾಡಿಕೊಂಡಿದ್ದರು. ನಂತರ, ಹೆಚ್ಚು ಹೊತ್ತು ಆನ್‌ಲೈನ್ ಜೂಜಾಟದಲ್ಲಿ ತೊಡಗುತ್ತಿದ್ದರು. ಹಣ ಸಹ ಕಟ್ಟುತ್ತಿದ್ದರು’ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ಆರಂಭದಲ್ಲಿ ತಮ್ಮ ಬಳಿ ಇದ್ದ ₹ 1.50 ಲಕ್ಷ ಹಣವನ್ನು ಮಹಿಳೆ ಜೂಜಾಟಕ್ಕೆ ಕಟ್ಟಿ ಸೋತಿದ್ದರು. ಪುನಃ ಹಣ ಬರಬಹುದೆಂದು ಮತ್ತೆ ಜೂಜು ಆಡಲು ಮುಂದಾಗಿದ್ದರು. ಚಿನ್ನಾಭರಣವನ್ನು ಗಿರವಿ ಇಟ್ಟು ಅದರಿಂದ ಬಂದ ಹಣವನ್ನು ಪುನಃ ಜೂಜಾಟಕ್ಕೆ ಕಟ್ಟಿದ್ದರು. ಇದೇ ರೀತಿಯಲ್ಲಿ ಹಂತ ಹಂತವಾಗಿ ₹ 4.50 ಲಕ್ಷ ಕಳೆದುಕೊಂಡಿದ್ದರು.’

‘ವಿಷಯ ಗೊತ್ತಾಗುತ್ತಿದ್ದಂತೆ ಪತ್ನಿಯನ್ನು ತರಾಟೆಗೆ ತೆಗೆದುಕೊಂಡಿದ್ದ ದೂರುದಾರ, ‘ಆನ್‌ಲೈನ್ ಜೂಜಾಟ ಆಡಬೇಡ’ ಎಂದು ಬುದ್ದಿವಾದ ಹೇಳಿದ್ದ. ಅಷ್ಟಕ್ಕೆ ಕೋಪಗೊಂಡ ಮಹಿಳೆ, ಮಕ್ಕಳಿಬ್ಬರ ಸಮೇತ ಮನೆ ಬಿಟ್ಟು ಹೋಗಿದ್ದಾಳೆ. ನೊಂದ ಪತಿ, ಠಾಣೆಗೆ ಬಂದು ದೂರು ನೀಡಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.