ADVERTISEMENT

ಆನ್‌ಲೈನ್‌ನಲ್ಲಿ ದೇವರನಾಮ ಉಚಿತ ಕಲಿಕೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2022, 19:58 IST
Last Updated 6 ಜುಲೈ 2022, 19:58 IST

ಬೆಂಗಳೂರು: ಶ್ರೀ ಗುರುಗುಹ ಸಂಸ್ಥೆಯು ಪುರಂದರದಾಸರ ಆರಾಧನೋತ್ಸವದ ಅಂಗವಾಗಿ ದೇವರನಾಮ ಉಚಿತ ಶಿಬಿರವನ್ನು ಆನ್‌ಲೈನ್‌ ಮೂಲಕ ಒಂದು ತಿಂಗಳ ಕಾಲ ಹಮ್ಮಿಕೊಂಡಿದೆ.

ಪ್ರತಿ ಭಾನುವಾರ ವಿವಿಧ ವೇಳಾಪಟ್ಟಿ ಅಡಿ ಸುಲಲಿತ ರಾಗಸಂಯೋಜನೆ ಹೊಂದಿದ ದಾಸಸಾಹಿತ್ಯ, ವಚನಸಾಹಿತ್ಯ ಹಾಗೂ ಹಲವಾರು ಭಕ್ತಿಸಾಹಿತ್ಯ ರಚನೆಗಳ ಗಾಯನ ತರಗತಿಗಳನ್ನು ನಡೆಸಲಿದೆ.

ಆಗಸ್ಟ್‌ 7ರಿಂದ ಕಲಿಕಾ ಕಾರ್ಯಕ್ರಮದ ಅಭಿಯಾನ ಶುರುವಾಗಲಿದೆ. 15 ವರ್ಷ ಮೇಲ್ಪಟ್ಟ, ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡದೇ ಇರುವ ಮಹಿಳೆಯರೂ ಪಾಲ್ಗೊಳ್ಳಬಹುದು. ಆಗಸ್ಟ್‌ 1ರೊಳಗೆ ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸಬೇಕು.

ADVERTISEMENT

ಅಭಿಯಾನಕ್ಕೆ ಸಂಬಂಧಿಸಿದಂತೆ ಪ್ರಶ್ನೆ, ಅನುಮಾನ ಇದ್ದರೆ music.guruguha@gmail.comಗೆ ಇ–ಮೇಲ್ ಮಾಡಬಹುದು. ಬೆಳಿಗ್ಗೆ 11.30ರಿಂದ ಮಧ್ಯಾಹ್ನ 12.30ರವರೆಗೆ 9448241149, 9480915777ಕ್ಕೆ ಕರೆ ಮಾಡಬಹುದು. ವೆಬ್‌ಸೈಟ್: bhakthisankeerthana.com.

ನಾಳೆಯಿಂದ ‘ಫೋಟೊ ಟುಡೇ, ಸೈನ್ ಟುಡೇ’ ಮೇಳ

ಬೆಂಗಳೂರು: ಅಂತರರಾಷ್ಟ್ರೀಯ ಛಾಯಾಚಿತ್ರ ಪ್ರದರ್ಶನ ಮೇಳ ‘ಫೋಟೊ ಟುಡೆ, ಸೈನ್ ಟುಡೆ–2022’ ಇದೇ 8 ಮತ್ತು 10ರಂದು ತ್ರಿಪುರ ವಾಸಿನಿ ಅರಮನೆ ಮೈದಾನದಲ್ಲಿ ನಡೆಯಲಿದೆ.

ಫೋಟೊ ಹಾಗೂ ವಿಡಿಯೊಗ್ರಫಿಗೆ ಸಂಬಂಧಿಸಿದಂತೆ ವಿವಿಧ ಕ್ಯಾಮೆರಾ ತಯಾರಿಕಾ ಕಂಪನಿಗಳು ಹಾಗೂ ಫೋಟೊ ಲ್ಯಾಬ್‌ಗಳು ಸೇರಿದಂತೆ 150ಕ್ಕೂ ಹೆಚ್ಚು ಮಳಿಗೆಗಳು ಪಾಲ್ಗೊಳ್ಳಲಿವೆ ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ಬೆಂಜಮಿನ್ ಭಾಸ್ಕರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರದರ್ಶನ ಮೇಳವನ್ನು ಎಚ್.ಡಿ. ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ. ಫೋಟೊ ಮತ್ತು ವಿಡಿಯೋಗ್ರಫಿಗೆ ಸಂಬಂಧಿಸಿದ 150ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿವೆ. ಫೋಟೊ ಸ್ಟುಡಿಯೋಗೆ ಸಂಬಂಧಿಸಿದ ಉಪಕರಣಗಳು, ಫೋಟೊ ಮತ್ತು ವಿಡಿಯೊ ಕ್ಯಾಮೆರಾಗಳು, ಅಲ್ಬಂ ತಯಾರಿಸುವ, ವಿಡಿಯೊ ಎಡಿಟಿಂಗ್ ಮಾಡುವ, ಸ್ಟುಡಿಯೊ ಲೈಟಿಂಗ್‌ಗೆ ಪೂರಕವಾದ, ಫ್ರೇಮ್ ಸಿದ್ಧಪಡಿಸುವ ಉಪಕರಣಗಳು, ಐಡಿ ಕಾರ್ಡ್‌ಗಳ ಸಿದ್ಧಪಡಿಸುವಿಕೆ ಮಷಿನ್‌ಗಳ ಪ್ರದರ್ಶನ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಕೃಷಿ ವಿ.ವಿ.: ಪ್ರಶಸ್ತಿಗೆ ಅರ್ಜಿ ಆಹ್ವಾನ

ಬೆಂಗಳೂರು: ಬೆಂಗಳೂರು ಕೃಷಿ
ವಿಶ್ವವಿದ್ಯಾಲಯವು ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ವಿವಿಧ ಪ್ರಶಸ್ತಿಗಳಿಗಾಗಿ ಅರ್ಜಿ ಆಹ್ವಾನಿಸಿದೆ. ಆಸಕ್ತ ರೈತರು, ರೈತ ಮಹಿಳೆಯರು ಅರ್ಜಿ ಸಲ್ಲಿಸಬಹುದಾಗಿದೆ.

‍ಪ್ರಶಸ್ತಿಗಳ ವಿವರ ಇಂತಿದೆ:ರಾಜ್ಯ ಮಟ್ಟದ ಪ್ರಶಸ್ತಿಗಳು:

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ರಾಜ್ಯ ಮಟ್ಟದ ಅತ್ಯುತ್ತಮ ರೈತ ಅಥವಾ ರೈತ ಮಹಿಳೆ ಪ್ರಶಸ್ತಿ, ಡಾ. ಎಂ.ಎಚ್. ಮರಿಗೌಡ ರಾಜ್ಯ ಮಟ್ಟದ ಅತ್ಯುತ್ತಮ ತೋಟಗಾರಿಕಾ ರೈತ ಅಥವಾ ರೈತ ಮಹಿಳೆ ಪ್ರಶಸ್ತಿ,ಕೆನರಾ ಬ್ಯಾಂಕ್ ಪ್ರಯೋಜಿತ ಕ್ಯಾನ್ ಬ್ಯಾಂಕ್ ಅತ್ಯುತ್ತಮ ರೈತ ಮತ್ತು ರೈತ ಮಹಿಳೆ ಪ್ರಶಸ್ತಿ ,ಡಾ. ಆರ್. ದ್ವಾರಕೀನಾಥ್ ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿ, ಡಾ. ಆರ್. ದ್ವಾರಕೀನಾಥ್ ಅತ್ಯುತ್ತಮ ರೈತ ಅಥವಾ ರೈತಮಹಿಳೆ ಪ್ರಶಸ್ತಿ.

ಜಿಲ್ಲಾ ಮಟ್ಟದ ಪ್ರಶಸ್ತಿಗಳು: ಜಿಲ್ಲಾ ಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿ, ಜಿಲ್ಲಾ ಮಟ್ಟದ ಅತ್ಯುತ್ತಮ ರೈತ ಮಹಿಳೆ ಪ್ರಶಸ್ತಿ.

ತಾಲ್ಲೂಕು ಮಟ್ಟದ ಪ್ರಶಸ್ತಿಗಳು: ತಾಲ್ಲೂಕು ಮಟ್ಟದ ಅತ್ಯುತ್ತಮ ಯುವ ರೈತ ಪ್ರಶಸ್ತಿ, ತಾಲ್ಲೂಕು ಮಟ್ಟದ ಅತ್ಯುತ್ತಮ ಯುವ ರೈತ ಮಹಿಳೆ ಪ್ರಶಸ್ತಿ.

ನಿಗದಿತ ಅರ್ಜಿ ನಮೂನೆಯು ಜಂಟಿ ಕೃಷಿ ನಿರ್ದೇಶಕರ ಕಚೇರಿ, ವಿಸ್ತರಣಾ ನಿರ್ದೇಶಕರ ಕಚೇರಿ, ಜಿಕೆವಿಕೆ ಬೆಂಗಳೂರು ಮತ್ತು ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ದೊರೆಯುತ್ತದೆ. ವೆಬ್‍ಸೈಟ್‌ನಲ್ಲೂ (www.uasbangalore.edu.in) ಸಹ ಅರ್ಜಿ ನಮೂನೆ ಲಭ್ಯ.ಜುಲೈ 31ರ ಒಳಗೆ ಅರ್ಜಿಗಳನ್ನು ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ಮಾಹಿತಿಗೆ 080-23330153, ವಿಸ್ತರಣೆ: 401.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.