ಬೆಂಗಳೂರು: ‘ಎ’ ಮತ್ತು ‘ಬಿ’ ವರ್ಗದ ಮುಜರಾಯಿ ದೇವಸ್ಥಾನಗಳಲ್ಲಿ ಆನ್‌ಲೈನ್ ಸೇವೆ ಬೇಡ ಎಂದು ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ, ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟ ಆಗ್ರಹಿಸಿದೆ.
ಧಾರ್ಮಿಕ ದತ್ತಿ ಆಯುಕ್ತರಿಗೆ ಮನವಿ ಸಲ್ಲಿಸಿರುವ ಒಕ್ಕೂಟವು, ಆನ್‌ಲೈನ್ ಸೇವೆಯಿಂದ ಅರ್ಚಕರಿಗೆ ಭಾರಿ ತೊಂದರೆಯಾಗಿದೆ ಎಂದು ತಿಳಿಸಿದೆ.
‘ಹಿಂದಿನ ದಿನ ಸಂಜೆ ಆನ್‌ಲೈನ್‌ನಲ್ಲಿ ಕಾಯ್ದಿರಿಸಿ ಮರುದಿನ ಬೆಳಿಗ್ಗೆ ದೇವಸ್ಥಾನಕ್ಕೆ ಬಂದಿರುತ್ತಾರೆ. ಅವರಿಗೆ ಸೇವೆ ನೀಡಲು ಕಷ್ಟವಾಗುತ್ತದೆ. ಕೆಲವರು ಅಭಿಷೇಕ, ಪೂಜೆಗಳನ್ನು ಬುಕ್ ಮಾಡದೇ ಕೇವಲ ಪ್ರಸಾದ ಮಾತ್ರ ಕಾಯ್ದಿರಿಸುತ್ತಾರೆ. ಒಂದು ಕೆ.ಜಿ. ಪುಳಿಯೋಗರೆ, 1 ಕೆ.ಜಿ. ಪೊಂಗಲ್ ಎಂದು ಹಿಂದಿನ ದಿನ ಆನ್‌ಲೈನ್‌ನಲ್ಲಿ ತಿಳಿಸಿದರೆ, ರಾತ್ರಿ ಸಾಮಗ್ರಿ ತಂದು ಬೆಳಿಗ್ಗೆ ಅಷ್ಟು ಬೇಗ ಮಾಡಿಕೊಡುವುದು ಹೇಗೆ? ಅಲ್ಲದೇ ಇದು ದೇವಸ್ಥಾನದ ಪಾವಿತ್ರ್ಯಕ್ಕೂ ಧಕ್ಕೆ ಉಂಟು ಮಾಡುತ್ತಿದೆ’ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಕುಕ್ಕೆ ಸುಬ್ರಹ್ಮಣ್ಯ, ಚಾಮುಂಡೇಶ್ವರಿ ಬೆಟ್ಟ, ನಂಜನಗೂಡು, ಮೇಲುಕೋಟೆ ಮುಂತಾದ ಪ್ರಸಿದ್ಧ ದೇವಸ್ಥಾನಗಳಲ್ಲಿ ಉಗ್ರಾಣದ ವ್ಯವಸ್ಥೆ ಇರುತ್ತದೆ. ಅಲ್ಲಿ ತೊಂದರೆಯಾಗದೇ ಇರಬಹುದು. ಏನೂ ವ್ಯವಸ್ಥೆ ಇಲ್ಲದ ಅನೇಕ ದೇವಸ್ಥಾನಗಳಲ್ಲಿ ಆನ್‌ಲೈನ್ ವ್ಯವಸ್ಥೆ ತೊಂದರೆ ನೀಡುತ್ತಿದೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಎನ್. ದೀಕ್ಷಿತ್ ದೂರಿದರು.
ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆಯ ಆ್ಯಪ್ ಅನ್ನು ನಿರ್ವಹಿಸಲು ಖಾಸಗಿಯವರಿಗೆ ನೀಡಲಾಗಿದೆ. ಯಾರಾದರೂ ಆನ್‌ಲೈನ್‌ನಲ್ಲಿ ಸೇವೆ ಕಾಯ್ದಿರಿಸಿದರೆ ಇಲಾಖೆಗಾಗಲಿ, ದೇವಸ್ಥಾನಕ್ಕಾಗಲಿ ಅದರ ಹಣ ಜಮಾ ಆಗುವುದಿಲ್ಲ. ಅದು ಖಾಸಗಿಯವರ ಖಾತೆಗೆ ಜಮಾ ಆಗುತ್ತದೆ. ಅವರು ಯಾವಾಗಲೋ ಇಲಾಖೆಗೆ ನೀಡುತ್ತಾರೆ. ಅಲ್ಲಿಂದ ದೇವಸ್ಥಾನಗಳಿಗೆ ಬರಲು ಇನ್ನಷ್ಟು ವಿಳಂಬವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.