ADVERTISEMENT

ಆನ್‌ಲೈನ್ ಜಾಬ್ ಟಾಸ್ಕ್ ಹೆಸರಲ್ಲಿ ವಂಚನೆ: 10 ಮಂದಿ ಬಂಧನ

ಎಲ್ಲ ಬಂಧಿತರು ಪದವೀಧರರು, ಒಂದಿಬ್ಬರು ಪ್ರಮುಖ ಕಂಪನಿಗಳ ನೌಕರರು

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2024, 0:47 IST
Last Updated 28 ಸೆಪ್ಟೆಂಬರ್ 2024, 0:47 IST
ಸೈಯದ್ ಯಾಹ್ಯಾ,  ಉಮರ್ ಫಾರೂಕ್, ಮೊಹಮ್ಮದ್ ಮಹೀನ್, ಮೊಹಮ್ಮದ್ ಮುಜಾಮಿಲ್
ಸೈಯದ್ ಯಾಹ್ಯಾ,  ಉಮರ್ ಫಾರೂಕ್, ಮೊಹಮ್ಮದ್ ಮಹೀನ್, ಮೊಹಮ್ಮದ್ ಮುಜಾಮಿಲ್   

ಬೆಂಗಳೂರು: ಆನ್‌ಲೈನ್ ಜಾಬ್ ಟಾಸ್ಕ್ ಹಾಗೂ ಕ್ರಿಪ್ಟೋ ಕರೆನ್ಸಿಯಲ್ಲಿ ಹಣ ಹೂಡಿದರೆ ಹೆಚ್ಚು ಲಾಭಾಂಶ ನೀಡುವ ಆಮಿಷವೊಡ್ಡಿ ಸಾರ್ವಜನಿಕರಿಗೆ ವಂಚಿಸುತ್ತಿದ್ದ 10 ಆರೋಪಿಗಳನ್ನು ಬೆಂಗಳೂರು ಉತ್ತರ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆರ್‌.ಟಿ.ನಗರ ಹಾಗೂ ಸುತ್ತಮುತ್ತಲ ಪ್ರದೇಶದ ನಿವಾಸಿಗಳಾದ ಸೈಯದ್ ಯಾಹ್ಯಾ, ಉಮರ್ ಫಾರೂಕ್, ಮೊಹಮ್ಮದ್ ಮಹೀನ್, ಮೊಹಮ್ಮದ್ ಮುಜಾಮಿಲ್, ತೇಜಸ್, ಚೇತನ್, ವಾಸೀಂ ಅಕ್ರಮ್, ಸೈಯದ್ ಝೈದ್, ಸಾಹಿ ಅಬ್ಧುಲ್ ಅನನ್, ಓಂಪ್ರಕಾಶ್ ಬಂಧಿತರು.

ಆರೋಪಿಗಳಿಂದ 72 ಮೊಬೈಲ್‌ ಫೋನ್, 182 ಡೆಬಿಟ್ ಕಾರ್ಡ್, ಎರಡು ಲ್ಯಾಪ್‌ಟಾಪ್, ವಿವಿಧ ಕಂಪನಿಗಳ 133 ಸಿಮ್ ಕಾರ್ಡ್‌, 127 ಬ್ಯಾಂಕ್ ಪಾಸ್‌ ಪುಸ್ತಕಗಳು, ₹ 1.74 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಕಮಿಷನರ್ ಬಿ.ದಯಾನಂದ ತಿಳಿಸಿದರು.

ADVERTISEMENT

ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಅವರು, ‘ಎಲ್ಲ ಆರೋಪಿಗಳು ಪದವೀಧರರು. ಫಾರೂಕ್ ಆ್ಯಪಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಝೈದ್‌ ಅಮೆಜಾನ್ ಹಾಗೂ ಚೇತನ್ ವಿವೊ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು‘ ಎಂದು ತಿಳಿಸಿದರು.

ಒಟ್ಟಾರೆ ₹ 6 ಕೋಟಿಗೂ ಅಧಿಕ ಮೊತ್ತದ ವಂಚನೆ ನಡೆದಿದೆ. ಸಂಚಿನ ಸೂತ್ರಧಾರರು ಚೀನಾದಲ್ಲಿ ನೆಲಸಿದ್ದಾರೆ. ರಾಜ್ಯದ ಈ ಪ್ರಕರಣವೂ ಸೇರಿದಂತೆ ದೇಶದ 21 ರಾಜ್ಯಗಳಲ್ಲಿ 122 ಎನ್‌ಸಿಆರ್‌ಪಿ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

₹ 6 ಕೋಟಿಗೂ ಅಧಿಕ ಮೊತ್ತದ ವಂಚನೆ- ಒಟ್ಟು 127 ಬ್ಯಾಂಕ್ ಪಾಸ್‌ ಪುಸ್ತಕಗಳ ವಶ- ಚೀನಾಗೂ ಭೇಟಿ ನೀಡಿದ್ದ ಮೂವರು ಆರೋಪಿಗಳು

ವಂಚನೆ ಹೇಗೆ?: ‘ಸಾಮಾಜಿಕ ಜಾಲತಾಣಗಳ ಮೂಲಕ  ಆಸಕ್ತರನ್ನು ಸಂಪರ್ಕಿಸುತ್ತಿದ್ದ ಆರೋಪಿಗಳು, ಮನೆಯಲ್ಲಿಯೇ ಕುಳಿತು ನಾವು ನೀಡುವ ಕೆಲಸ​ಗಳನ್ನು ಆನ್‌ಲೈನ್‌ನಲ್ಲಿ ಪೂರ್ಣಗೊಳಿಸಿದರೆ ಹಣ ನೀಡುವುದಾಗಿ ಆಮಿಷವೊಡ್ಡಿ ನಂಬಿಸುತ್ತಿದ್ದರು. ಬಳಿಕ ಅವರನ್ನು ಟೆಲಿಗ್ರಾಂ ಗ್ರೂಪ್‌ಗೆ ಸೇರಿಸಿ, ಆರಂಭದಲ್ಲಿ ನಾವು ಹೇಳುವ ಕೆಲ ಐಷಾರಾಮಿ ಹೋಟೆಲ್‌ಗಳ ಬಗ್ಗೆ ತಮ್ಮ ಅಭಿಪ್ರಾಯ ನೀಡಬೇಕು. ಇದಕ್ಕೆ ₹ 150-200 ಪಾವತಿಸಿ, ಅಭಿಪ್ರಾಯ ವರದಿ ನೀಡಿದರೆ ಹೆಚ್ಚಿನ ಲಾಭಾಂಶವನ್ನು ನೀಡಲಾಗುವುದು ಎಂದು ಆಮಿಷವೊಡ್ಡುತ್ತಿದ್ದರು. ಅದೇ ರೀತಿ ಆರಂಭದಲ್ಲಿ ಪ್ರತಿ ಅಭಿಪ್ರಾಯಕ್ಕೆ ₹ 400-500 ಹಣವನ್ನು ಆನ್‌ಲೈನ್ ಮೂಲಕ ಪಾವತಿಸುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಈ ರೀತಿ ಹಲವು ಅಭಿಪ್ರಾಯ ವರದಿಗಳನ್ನು ತರಿಸಿಕೊಂಡು ಹಣ ಪಾವತಿಸಿ ನಂಬಿಕೆ ಗಳಿಸಿಕೊಂಡ ಬಳಿಕ ಕ್ರಿಪ್ಟೋ ಕರೆನ್ಸಿ ವ್ಯವಹಾರದಲ್ಲಿ ಹೆಚ್ಚು ಹಣ ಹೂಡಿದರೆ ದೊಡ್ಡ ಮೊತ್ತದ ಲಾಭ ಸಿಗಲಿದೆ ಎಂದು ಆಮಿಷ ಒಡ್ಡುತ್ತಿದ್ದರು. ನಂಬಿ ಹೂಡಿದಲ್ಲಿ ಬಳಿಕ ಸಂಪರ್ಕಕ್ಕೆ ಸಿಗದೆ ವಂಚಿಸುತ್ತಿದ್ದರು. ಇದೇ ರೀತಿ ವ್ಯಕ್ತಿಯೊಬ್ಬರಿಗೆ ₹ 25.37 ಲಕ್ಷ ವಂಚಿಸಿದ್ದು, ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು’ ಎಂದು ತಿಳಿಸಿದರು.

ಪ್ರಕರಣ ದಾಖಲಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಹಣ ಸಂದಾಯವಾಗಿರುವ ಬ್ಯಾಂಕ್ ಖಾತೆಗಳ ವಿವರ ಹಾಗೂ ಆ ಖಾತೆಗಳಿಂದ ಬೆಂಗಳೂರಿನ ವಿವಿಧ ಎಟಿಎಂಗಳಲ್ಲಿ ಹಣ ಡ್ರಾ ಆಗಿರುವುದನ್ನು ಪತ್ತೆಹಚ್ಚಿದ್ದರು. ಏಳು ಆರೋಪಿಗಳನ್ನು ಆರ್.ಟಿ.ನಗರದ ಬಳಿ ಬಂಧಿಸಿ ತನಿಖೆ ನಡೆಸಿದಾಗ, ಆರೋಪಿಗಳಲ್ಲಿ ಮೂವರು ಚೀನಾಗೆ ತೆರಳಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಚೀನಾ ಮೂಲದವರ ಸೂಚನೆಯಂತೆ ವಂಚನೆಯಲ್ಲಿ ತೊಡಗಿದ್ದಾಗಿ ತಿಳಿಸಿದರು. ಸೆ. 15ರಂದು ಚೀನಾದಿಂದ ಬಂದಿಳಿದ ಮೂವರೂ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದರು.

ಆರೋಪಿಗಳು ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತೆರೆದಿದ್ದ ಕಚೇರಿ ಮೇಲೂ ದಾಳಿ ನಡೆಸಿ, ವಿವಿಧ ಬ್ಯಾಂಕ್‌ಗಳ ಪಾಸ್ ಬುಕ್‌, ಸಿಮ್ ಕಾರ್ಡ್‌, ಡೆಬಿಟ್‌ ಕಾರ್ಡ್, ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬ್ಯಾಂಕ್‌ ಖಾತೆಗಳಲ್ಲಿದ್ದ ಒಟ್ಟು ₹7.34 ಲಕ್ಷ ಹಣವನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತೇಜಸ್ ಚೇತನ್ ವಾಸೀಂ ಅಕ್ರಮ್  ಸೈಯದ್ ಝೈದ್
ಸಾಹಿ ಅಬ್ಧುಲ್ ಅನನ್ ಓಂಪ್ರಕಾಶ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.