ADVERTISEMENT

ಆನ್‌ಲೈನ್‌ ಟಿಕೆಟ್‌ : ‘ಅವತಾರ್‌’ ದಾಖಲೆ

ಒಂದೇ ದಿನ ಬುಕ್ಕಿಂಗ್‌ ಮಾಡಿದ 85 ಸಾವಿರಕ್ಕೂ ಅಧಿಕ ಪ್ರಯಾಣಿಕರು

ಬಾಲಕೃಷ್ಣ ಪಿ.ಎಚ್‌
Published 5 ನವೆಂಬರ್ 2024, 0:06 IST
Last Updated 5 ನವೆಂಬರ್ 2024, 0:06 IST
<div class="paragraphs"><p>ಕೆಎಸ್‌ಆರ್‌ಟಿಸಿ ಐರಾವತ ಬಸ್</p></div>

ಕೆಎಸ್‌ಆರ್‌ಟಿಸಿ ಐರಾವತ ಬಸ್

   

(ಪ್ರಜಾವಾಣಿ ಚಿತ್ರ)

ಬೆಂಗಳೂರು: ಕೆಎಸ್‌ಆರ್‌ಟಿಸಿಯ ‘ಅವತಾರ್‌’ ಆನ್‌ಲೈನ್‌ ಟಿಕೆಟ್‌ ಬುಕ್ಕಿಂಗ್‌ನಲ್ಲಿ ಭಾನುವಾರ ಒಂದೇ ದಿನ 85 ಸಾವಿರ ಪ್ರಯಾಣಿಕರು ಟಿಕೆಟ್‌ ಕಾಯ್ದಿರಿಸಿರುವುದು ದಾಖಲೆಯಾಗಿದೆ.

ADVERTISEMENT

‘ಅವತಾರ್‌’ನಲ್ಲಿ ದಿನಕ್ಕೆ ಟಿಕೆಟ್‌ ಕಾಯ್ದಿರಿಸುವವರ ಪ್ರಮಾಣ 25 ಸಾವಿರದಿಂದ 30 ಸಾವಿರವರೆಗೆ ಇರುತ್ತಿತ್ತು. ದೀಪಾವಳಿಯ ಹಿಂದಿನ ದಿನ ಅಂದರೆ ಅ.30ರಂದು ಒಂದೇ ದಿನ ಈ ಪ್ರಮಾಣ ದುಪ್ಪಟ್ಟಾಗಿತ್ತು. ಅಂದು 67 ಸಾವಿರ ಪ್ರಯಾಣಿಕರು ಟಿಕೆಟ್‌ ಕಾಯ್ದಿರಿಸಿದ್ದರು. ಬೆಂಗಳೂರಿನಿಂದ ಹೋಗುವ ಪ್ರಯಾಣಿಕರ ಪಾಲೇ ಅಧಿಕವಾಗಿತ್ತು. ಭಾನುವಾರ ಈ ದಾಖಲೆಯಯನ್ನೂ ಅವತಾರ್ ಮುರಿದಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಅವತಾರ್‌: ಮುಂಗಡ ಟಿಕೆಟ್‌ ಕಾಯ್ದಿರಿಸಲು ಬಸ್‌ನಿಲ್ದಾಣಗಳಲ್ಲಿ ಜನರು ಸರದಿಯಲ್ಲಿ ನಿಲ್ಲುವುದನ್ನು ತಪ್ಪಿಸುವುದಕ್ಕಾಗಿ ಕೆಎಸ್‌ಆರ್‌ಟಿಸಿ 2006ರಲ್ಲಿ ‘ಅವತಾರ್‌’ವನ್ನು ಪರಿಚಯಿಸಿತ್ತು. ನಿಧಾನಕ್ಕೆ ಆನ್‌ಲೈನ್‌ನಲ್ಲಿ ಕಾಯ್ದಿರಿಸುವವರ ಸಂಖ್ಯೆ ಹೆಚ್ಚಾಗಿತ್ತು. ಜನರು ತಾವಿದ್ದಲ್ಲಿಂದಲೇ ಮೊಬೈಲ್‌ಗಳಲ್ಲಿ ಟಿಕೆಟ್‌ ಕಾಯ್ದಿರಿಸಲು ಆರಂಭಿಸಿದ್ದರು. 

ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿ ಮುಂಗಡ ಕಾಯ್ದಿರಿಸುವುದನ್ನು ಇನ್ನಷ್ಟು ಸುಲಭಗೊಳಿಸಲು ಈ ವರ್ಷ ಜೂನ್‌ನಲ್ಲಿ  ‘ಅವತಾರ್‌–4.0’ ಪರಿಚಯಿಸಿದ್ದರು. ಈ ಪ್ಲಾಟ್‌ಫಾರ್ಮ್ ಅನ್ನು ಅಮ್ನೆಕ್ಸ್ ಇನ್ಫೋಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ಮ್ಯಾಂಟಿಸ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನ ಟೆಕ್-ಕನ್ಸೋರ್ಟಿಯಂ ಅಭಿವೃದ್ಧಿಪಡಿಸಿ ನಿರ್ವಹಿಸುತ್ತಿದೆ.

ಸಣ್ಣ ಘಟನೆಯೂ ಇಲ್ಲ: ನಿತ್ಯ ಪ್ರಯಾಣಿಸುವ ಬಸ್‌ಗಳ ಜೊತೆಗೆ ಹಬ್ಬದ ಸಮಯದಲ್ಲಿ ಹೆಚ್ಚುವರಿಯಾಗಿ 2000 ಬಸ್‌ಗಳನ್ನು ರಸ್ತೆಗೆ ಇಳಿಸಲಾಗಿತ್ತು. ಯಾವುದೇ ಸಣ್ಣ ಘಟನೆಯೂ ಇಲ್ಲದಂತೆ ಯಶಸ್ವಿಯಾಗಿ ಬಸ್‌ಗಳು ಕಾರ್ಯಾಚರಿಸಿವೆ. ಬೆಂಗಳೂರು, ದಾವಣಗೆರೆ, ಮೈಸೂರು, ಹುಬ್ಬಳ್ಳಿ, ತಿರುಪತಿ, ಶಿವಮೊಗ್ಗ, ಕಲಬುರಗಿ, ಬೆಳಗಾವಿ, ಕುಕ್ಕೆ ಸುಬ್ರಹ್ಮಣ್ಯ, ಹೊಸಪೇಟೆ, ಮಂಗಳೂರು, ಬಳ್ಳಾರಿ, ವಿಜಯಪುರ, ಹಾಸನ, ಚಿತ್ರದುಗ, ಧರ್ಮಸ್ಥಳ, ಹೈದರಾಬಾದ್, ಚಿಕ್ಕಮಗಳೂರು, ಕೊಯಮತ್ತೂರುಗಳಲ್ಲಿ ಮುಂಗಡ ಕಾಯ್ದಿರಿಸಿಕೊಂಡವರ ಸಂಖ್ಯೆ  ಅಧಿಕವಾಗಿತ್ತು ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಎಲ್ಲರೂ ದೀಪಾವಳಿ ಹಬ್ಬಗಳನ್ನು ಸಡಗರದಿಂದ ಆಚರಿಸುತ್ತಿದ್ದರೆ ನಮ್ಮ ನೌಕರರು ಹಬ್ಬಕ್ಕೂ ರಜೆ ಮಾಡದೇ ಪ್ರಯಾಣಿಕರನ್ನು ತಮ್ಮ ಗಮ್ಯಕ್ಕೆ ತಲುಪಿಸುವ ಕೆಲಸ ಮಾಡಿದ್ದಾರೆ. ಚಾಲಕರು, ನಿರ್ವಾಹಕರು ಸೇರಿದಂತೆ ನಮ್ಮ ಸಿಬ್ಬಂದಿಯ ಕರ್ತವ್ಯ ಪ್ರಜ್ಞೆಯಿಂದಾಗಿ ಈ ಸಾಧನೆ ಸಾಧ್ಯವಾಗಿದೆ ಎಂದು ವಿವರಿಸಿದರು.

ಐರಾವತ ಕ್ಲಬ್‌ ಕ್ಲಾಸ್‌ 2.0 ಸಹಿತ ಅನೇಕ ಹೊಸ ಬಸ್‌ಗಳನ್ನು ಪರಿಚಯಿಸಲಾಗಿದೆ. ಹಾಗಾಗಿ ಜನರು ದೀರ್ಘ ಪ್ರಯಾಣಕ್ಕೆ ಕೆಎಸ್‌ಆರ್‌ಟಿಯ ಬಸ್‌ಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
ರಾಮಲಿಂಗಾರೆಡ್ಡಿ ಸಾರಿಗೆ ಸಚಿವ
ಪ್ರಯಾಣಿಕರು ಬಯಸುವ ಸೌಲಭ್ಯಗಳನ್ನು ಕೆಎಸ್‌ಆರ್‌ಟಿಸಿ ಒದಗಿಸುತ್ತಾ ಬಂದಿದೆ. ಅದಕ್ಕೆ ಸರಿಯಾಗಿ ಜನರೂ ಸಂಸ್ಥೆಯ ಮೇಲೆ ನಂಬಿಕೆ ಇಟ್ಟಿದ್ದಾರೆ.
ವಿ. ಅನ್ಬುಕುಮಾರ್‌ ವ್ಯವಸ್ಥಾಪಕ ನಿರ್ದೇಶಕ ಕೆಎಸ್‌ಆರ್‌ಟಿಸಿ
ಅಂಕಿ ಅಂಶ
67033 ಅಕ್ಟೋಬರ್‌ 30ರಂದು ಟಿಕೆಟ್‌ ಕಾಯ್ದಿರಿಸಿದ ಪ್ರಯಾಣಿಕರ ಸಂಖ್ಯೆ ₹ 4.63 ಕೋಟಿ ಅದರಿಂದ ಬಂದ ವರಮಾನ 85462 ನ.3ರಂದು ಟಿಕೆಟ್‌ ಕಾಯ್ದಿರಿಸಿದ ಪ್ರಯಾಣಿಕರ ಸಂಖ್ಯೆ ₹ 5.58 ಕೋಟಿ ಅಂದು ಕೆಎಸ್‌ಆರ್‌ಟಿಸಿಗೆ ಬಂದ ವರಮಾನ ಶೇ 46.6 ಶಕ್ತಿ ಯೋಜನೆಯಡಿ ಪ್ರಯಾಣಿಸಿದ ಮಹಿಳೆಯರ ಪ್ರಮಾಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.