ಬೆಂಗಳೂರು: ‘ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ ಯುಜಿಸಿಯಿಂದ ನ್ಯಾಕ್ ಎ+ ಶ್ರೇಣಿ ದೊರೆತಿದೆ’ ಎಂದು ಕುಲಪತಿ ಶರಣಪ್ಪ ವಿ. ಹಲಸೆ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನ್ಯಾಕ್ ನಿಗದಿಪಡಿಸಿದ ಮಾನದಂಡಗಳಾದ ಪಠ್ಯಕ್ರಮ, ಬೋಧನೆ ಹಾಗೂ ಕಲಿಕೆ, ಮೌಲ್ಯಮಾಪನ, ಸಂಶೋಧನೆ, ಮೂಲಸೌಕರ್ಯ, ಕಲಿಕಾ ಸಂಪನ್ಮೂಲ, ವಿದ್ಯಾರ್ಥಿಗಳ ಪ್ರಗತಿ, ಆಡಳಿತ ಮತ್ತು ನಿರ್ವಹಣೆ, ಸಾಂಸ್ಥಿಕ ಮೌಲ್ಯಗಳಲ್ಲಿ ವಿಶ್ವವಿದ್ಯಾಲಯವು ಗರಿಷ್ಠ 4 ಅಂಕಗಳಲ್ಲಿ 3.31 ಅಂಕಗಳನ್ನು ಪಡೆದುಕೊಂಡಿದೆ’ ಎಂದು ಮಾಹಿತಿ ನೀಡಿದರು.
2023–24ನೇ ಶೈಕ್ಷಣಿಕ ಸಾಲಿಗೆ ಮೂರು ಹೊಸ ಪದವಿ ಕೋರ್ಸ್‌ಗಳಾದ ಮತ್ತು 10 ಆನ್‌ಲೈನ್ ಕೋರ್ಸ್‌ಗಳನ್ನು ಆರಂಭಿಸಿದೆ. ಬಿಎಸ್‌ಡಬ್ಲ್ಯೂ, ಎಂಎಸ್‌ಡಬ್ಲ್ಯೂ, ಎಂಸಿಎ, ಎಂ.ಎಸ್ಸಿ ಪದವಿಗಳಿಗೆ ವಿದ್ಯಾರ್ಥಿಗಳಿಂದ ಹೆಚ್ಚಿನ ಬೇಡಿಕೆ ಇದೆ. ವಿವಿಯಲ್ಲಿ ಸದ್ಯ ಒಟ್ಟು 64 ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ ಕೋರ್ಸ್‌ಗಳನ್ನು ನೀಡುತ್ತಿದೆ’ ಎಂದು ತಿಳಿಸಿದರು.
‘ರಾಜ್ಯದಲ್ಲಿ ಮುಕ್ತ ವಿವಿಯು 34 ಪ್ರಾದೇಶಿಕ ಕೇಂದ್ರಗಳನ್ನು ಹೊಂದಿದೆ. ಪ್ರತಿ ಜಿಲ್ಲೆಯಲ್ಲಿ ಪರೀಕ್ಷಾ ಕೇಂದ್ರ ಹಾಗೂ ತಾಲ್ಲೂಕಿನಲ್ಲಿ ಅಧ್ಯಯನ ಕೇಂದ್ರ ಸ್ಥಾಪನೆ, ಎಲ್ಲ ಶೈಕ್ಷಣಿಕ ಕ್ರಮಗಳ ಕಲಿಕಾ ಅಧ್ಯಯನ ಸಾಮಗ್ರಿ ಡಿಜಟಲೀಕರಣ ಜತೆಗೆ ಕೆಎಸ್‌ಒಯು ಸ್ಟೊಡೆಂಟ್ ಆ್ಯಪ್ ಮೂಲಕ ಶಿಕ್ಷಣ ನೀಡಲಾಗುತ್ತಿದೆ. ಡಿಜಿಟಲ್ ಮೌಲ್ಯಮಾಪನ ಮತ್ತು ಶೀಘ್ರ ಫಲಿತಾಂಶ, ಎಲ್ಲ ಸರ್ಕಾರಿ ವಿವಿಗಳು ಮತ್ತು ಪ್ರಥಮ ದರ್ಜೆ ಕಾಲೇಜುಗಳಲ್ಲಿ ಮುಕ್ತ ವಿವಿಯ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಲು ಪ್ರಯತ್ನಿಸಲಾಗುತ್ತಿದೆ’ ಎಂದರು.
‘ಬಿಎ, ಬಿ.ಕಾಂ, ಎಂ.ಕಾಂ, ಎಂಬಿಎ, ಎಂಎ–ಕನ್ನಡ, ಎಂಎ–ಇಂಗ್ಲಿಷ್, ಎಂಎ–ಹಿಂದಿ, ಎಂಎ– ಸಂಸ್ಕೃತ, ಎಂಎ–ಅರ್ಥಶಾಸ್ತ್ರ, ಎಂಎಸ್‌ಸಿ–ಗಣಿತ ಆನ್‌ಲೈನ್ ಕೋರ್ಸ್‌ಗಳನ್ನು ಆರಂಭಿಸಲಾಗಿದೆ. ಇದರಲ್ಲಿ ಪಾಠ, ಪರೀಕ್ಷೆ ಎಲ್ಲವೂ ಆನ್‌ಲೈನ್‌ನಲ್ಲೇ ನಡೆಯುತ್ತದೆ. ಹಾಗಾಗಿ, ಪ್ರತಿಯೊಬ್ಬರು ಈ ಕೋರ್ಸ್‌ಗೆ ಸೇರಬಹುದು’ ಎಂದು ಹೇಳಿದರು.
ಪ್ರಸ್ತುತ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಯ ಪ್ರವೇಶಾತಿ ಪ್ರಕಟಣೆ 2023 ಜೂನ್ 30ರಿಂದ ಪ್ರಾರಂಭವಾಗಿದ್ದು, ಪ್ರವೇಶ ಪ್ರಕ್ರಿಯೆಗಳನ್ನು ಪಡೆದುಕೊಳ್ಳಲು ಆಗಸ್ಟ್ 31 ಕೊನೆಯ ದಿನವಾಗಿದೆ’ ಎಂದರು.
ಲಭ್ಯವಿರುವ ಕೋರ್ಸ್‌ಗಳು, ಸೌಲಭ್ಯಗಳ ಬಗ್ಗೆ ಜನರಿಗೆ ತಿಳಿಸಲು ವಿವಿಯ ಪ್ರಚಾರ ರಥಕ್ಕೆ ಚಾಲನೆ ನೀಡಲಾಗಿದ್ದು, ರಾಜ್ಯದಾದ್ಯಂತ ಸಂಚರಿಸಲಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.