ನಗರದ ಸೌಂದರ್ಯವಿರುವುದು ಅದರ ಸ್ವಚ್ಛತೆಯಲ್ಲಿ. ಆದರೆ ರಾಜಧಾನಿ ಬೆಂಗಳೂರು ಕಸ ವಿಲೇವಾರಿ, ಒಳಚರಂಡಿಯಂತಹ ಅನೇಕ ಸಮಸ್ಯೆಗಳ ಜೊತೆಗೆ ತೆರೆದ ಜಾಗದಲ್ಲಿನ ಮೂತ್ರ ವಿಸರ್ಜನೆಯಿಂದ ನಾರುತ್ತಿದೆ. ಹೆಚ್ಚಿನ ಪಾದಚಾರಿ ಮಾರ್ಗಗಳು ಅಕ್ಷರಶಃ ಶೌಚಗುಂಡಿಗಳಾಗಿ ಮಾರ್ಪಟ್ಟಿವೆ. ಅದರ ಮೇಲೆ ನಿಂತಿರುವ ಮೂತ್ರ ಹಾಗೂ ಅದರ ಕಲೆಗಳು ಪಾದಚಾರಿ ಮಾರ್ಗವನ್ನೇ ತೊರೆಯುವಂತೆ ಮಾಡುತ್ತಿವೆ. ವಾಸನೆ ಮುಖ್ಯರಸ್ತೆಯವರೆಗೂ ಹರಡುವುದರಿಂದ ನಡೆದಾಡುವುದೇ ಕಷ್ಟವಾಗಿ ಪರಿಣಮಿಸಿದೆ.ಹೆಂಗಸರು, ಮಕ್ಕಳು ನಡೆದಾಡುತ್ತಿದ್ದಾರೆ ಎನ್ನುವ ಪರಿವೆಯೇ ಇಲ್ಲದೆ ಕೆಲವರು ಮೂತ್ರ ವಿಸರ್ಜಿಸುತ್ತಿರುತ್ತಾರೆ. ಇದರಿಂದ ಜನರಿಗೆ ಮುಜುಗರ, ಕಿರಿಕಿರಿ, ಹಿಂಸೆಯಾಗುತ್ತಿದೆ.
ಎಲ್ಲೆಲ್ಲಿ ಸಮಸ್ಯೆ
ಸಸ್ಯಕಾಶಿ ಲಾಲ್‌ಬಾಗ್‌ನ ಪಶ್ಚಿಮ ದ್ವಾರದ ಹೊರಗೋಡೆ, ಕೆ.ಆರ್. ಮಾರುಕಟ್ಟೆ, ಸೌತ್ ಎಂಡ್ ಸರ್ಕಲ್‌ನ ಕೇಂದ್ರ ಗ್ರಂಥಾಲಯದ ಕಾಂಪೌಂಡ್ ಕಟ್ಟಡ, ಜಯನಗರದ ಉದ್ಯಾನವನಗಳ ಗೋಡೆಗಳು, ಮೈಸೂರು ರಸ್ತೆಯಲ್ಲಿರುವ ಸ್ಯಾಟ್‌ಲೈಟ್ ಬಸ್ ನಿಲ್ದಾಣದ ಬಳಿಯ ಉದ್ದನೆಯ ಪಾದಚಾರಿ ಮಾರ್ಗ, ಅತ್ತಿಗುಪ್ಪೆ ರೈಲು ಹಳಿಯ ತಡೆಗೋಡೆಗಳ ಬಳಿ ಸಮಸ್ಯೆ ತೀವ್ರವಾಗಿದೆ.ವಿಪರ್ಯಾಸವೆಂದರೆ ಸಿಸಿ ಕ್ಯಾಮೆರಾಗಳ ಮುಂದೆ, ದಂಡ ವಿಧಿಸಲಾಗುವುದು ಎಂಬ ತಲೆಬರಹದಡಿಯಲ್ಲಿಯೇ ನಿಂತು ಮೂತ್ರ ವಿಸರ್ಜಿಸುವವರು ಅದೆಷ್ಟೋ ಮಂದಿ. ಶೌಚಾಲಯದ ಪಕ್ಕದಲ್ಲಿ, ಶಾಲಾ-ಕಾಲೇಜುಗಳ ಗೋಡೆಗಳಿಗೆ ಮೂತ್ರ ಮಾಡುತ್ತಿರುವುದರಿಂದ ಅದರ ವಾಸನೆ ಸಹಿಸಲಸಾಧ್ಯವಾಗಿದೆ. ಇದು ನಗರದ ಸಾರ್ವಜನಿಕ ಸ್ಥಳಗಳ ಗಂಭೀರ ಸಮಸ್ಯೆಯಾಗಿದೆ.
ಕಾರಣಗಳೇನು
* ಶೌಚಾಲಯಗಳ ಕೊರತೆ: ಎಷ್ಟೋ ಬಾರಿ ಶೌಚಾಲಯಕ್ಕಾಗಿ ಕಿಲೋ ಮೀಟರ್‌ಗಟ್ಟಲೆ ನಡೆಯಬೇಕಾದ ಅನಿವಾರ್ಯತೆ ಇರುತ್ತದೆ. ಕೆಲವು ಏರಿಯಾಗಳಲ್ಲಿ ಶೌಚಾಲಯಗಳೇ ಇರುವುದಿಲ್ಲ. ಇದ್ದರೂ ಸಮರ್ಪಕ ನಿರ್ವಹಣೆ ಇರುವುದಿಲ್ಲ ಅಥವಾ ಬಾಗಿಲು ಮುಚ್ಚಿರುತ್ತದೆ. ಇಂತಹ ಸಮಯದಲ್ಲಿ ಜಲಬಾಧೆಗೆ ಕಟ್ಟಡ ಹಾಗೂ ಕಾಂಪೌಂಡ್ ಗೋಡೆಗಳೇ ಗುರಿ.
* ಕ್ರಮಕ್ಕೆ ಮುಂದಾಗದಿರುವುದು: ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರಿಗೆ ದಂಡ ವಿಧಿಸುವ ಪಾಲಿಕೆ, ತೆರೆದ ಸ್ಥಳಗಳಲ್ಲಿ ಮೂತ್ರ ವಿಸರ್ಜಿಸುವವರ ಮೇಲೆ ಏನೇನು ಕ್ರಮಕ್ಕೆ ಮುಂದಾಗುತ್ತಿಲ್ಲ. ಕ್ರಮ ರೂಪಿಸುವುದು ಮತ್ತು ಜಾರಿಗೊಳಿಸುವುದರ ನಡುವಿನ ವ್ಯತ್ಯಾಸವೇ ಇದಕ್ಕೆ ಕಾರಣ ಎಂಬುದು ನಗರ ವಾಸಿಗಳ ಆರೋಪ.
* ಹಣ ಪಾವತಿ: ಶೌಚಾಲಯಗಳಲ್ಲಿ ಮೂತ್ರ ವಿಸರ್ಜನೆಗೆ ಮೂರು ಅಥವಾ ಐದು ರೂಪಾಯಿ ನೀಡಬೇಕಿರುತ್ತದೆ. ಕೆಲವರಿಗೆ ಹಣ ತೆರಬೇಕಲ್ಲ ಎಂಬುದು ಕಾರಣವಾದರೆ, ಹಲವರಿಗೆ ಚಿಲ್ಲರೆ ಸಮಸ್ಯೆ. ಪರಿಣಾಮ ಎಲ್ಲೋ ಒಂದೆಡೆ ವಿಸರ್ಜಿಸಿ ಹೋದರಾಯಿತು ಎಂಬ ಧೋರಣೆ ತಾಳುತ್ತಾರೆ.
* ಕುಡಿತದ ಅಮಲು: ಕೆಲ ಪಾನಮತ್ತ ವ್ಯಕ್ತಿಗಳು ಕುಡಿದ ಅಮಲಿನಲ್ಲಿ ಎಲ್ಲಿ ಏನು ಮಾಡುತ್ತಿದ್ದೇವೆ ಎಂಬುದರ ಅರಿವಿಲ್ಲದೆ, ಸಿಕ್ಕಸಿಕ್ಕ ಕಡೆಗಳಲ್ಲಿ ಮೂತ್ರ ವಿಸರ್ಜಿಸುತ್ತಿರುತ್ತಾರೆ.
ಪರಿಣಾಮಗಳು
* ಅಪಘಾತಕ್ಕೆ ಕಾರಣ: ಸಮಸ್ಯೆಯ ತೀವ್ರತೆ ಎಷ್ಟಿದೆ ಎಂದರೆ ಕೆಲವೊಮ್ಮೆ ಪಾದಚಾರಿ ಮಾರ್ಗ ಬಿಟ್ಟು ಮುಖ್ಯ ರಸ್ತೆಯಲ್ಲೇ ನಡೆಯಬೇಕಿದೆ. ಇಕ್ಕಟ್ಟಾದ, ವಾಹನ ದಟ್ಟಣೆ ಇರುವ ಸ್ಥಳಗಳಲ್ಲಿ ಇವುಗಳ ಮಧ್ಯೆಯೇ ಓಡಾಡುವಂತಹ ಪರಿಸ್ಥಿತಿ ಎದುರಾಗಿದೆ. ಇದು ಅಪಘಾತಕ್ಕೂ ಕಾರಣವಾಗುತ್ತಿದೆ ಎಂಬುದು ಸಾರ್ವಜನಿಕರ ಅಳಲು.
* ವಿದ್ಯುತ್ ಅವಘಡ: ಅನೈರ್ಮಲ್ಯಕ್ಕೆ ಹಾದಿ ಯಾಗುತ್ತಿರುವ ಈ ಸಮಸ್ಯೆ ಅವಘಡಗಳಿಗೂ ಕಾರಣವಾಗುತ್ತಿದೆ. ವಿದ್ಯುತ್ ಕಂಬ, ಟ್ರಾನ್ಸ್ ಫಾರ್ಮ್‌ಗಳ ಬಳಿಯ ಮೂತ್ರ ವಿಸರ್ಜನೆಯ ವೇಳೆ ವಿದ್ಯುತ್ ಪ್ರವಹಿಸಿ ಗಾಯಗೊಂಡ, ಮೃತಪಟ್ಟ ನಿದರ್ಶನಗಳೂ ಇವೆ.
* ರಸ್ತೆಗಿಳಿಯುವ ಕೊಳಚೆ: ಪಾದಚಾರಿ ಮಾರ್ಗದ ಮೇಲೆ ಮಾಡಿರುವ ಮೂತ್ರ, ತುಂತುರು ಅಥವಾ ಸಣ್ಣ ಪ್ರಮಾಣದ ಮಳೆಯಾದಾಗ ಮಳೆ ನೀರಿನೊಂದಿಗೆ ಸೇರಿ ರಸ್ತೆಯಲ್ಲಿ ಹರಿಯುತ್ತದೆ. ಓಡಾಡುವವರು ಅದನ್ನೇ ತುಳಿದುಕೊಂಡು ತಿರುಗಾಡಬೇಕಿರುತ್ತದೆ.
* ದುರ್ವಾಸನೆ: ಪಾದಾಚಾರಿ ಮಾರ್ಗ ಬಿಟ್ಟು ಮುಖ್ಯರಸ್ತೆಯಲ್ಲೇ ನಡೆದರೂ ಅದರ ದುರ್ವಾಸನೆಗೆ ಮೂಗು ಮುಚ್ಚಿಕೊಂಡು ಓಡಾಡಬೇಕಿದೆ. ಮಾತ್ರವಲ್ಲದೆ ಅಕ್ಕಪಕ್ಕದ ಅಂಗಡಿ, ಬಸ್ ನಿಲ್ದಾಣಗಳಲ್ಲೂ ನಿಲ್ಲಲು ಆಗುವುದಿಲ್ಲ.
ಕಾನೂನು ಜಾರಿಗೊಳಿಸಿದ ಮಾತ್ರಕ್ಕೆ ಸಮಸ್ಯೆ ಪರಿಹಾರವಾಗುವುದಿಲ್ಲ. ಅವುಗಳ ಕಟ್ಟುನಿಟ್ಟಿನ ಪಾಲನೆ ಅಗತ್ಯ. ಕೂಡಲೇ ಪಾಲಿಕೆ ಹಾಗೂ ಅಧಿಕಾರಿಗಳು ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು. ಶೌಚಾಲಯ ದುರಸ್ತಿ, ಹೊಸ ಶೌಚಾಲಯಗಳ ನಿರ್ಮಾಣ ಮಾಡಬೇಕು. ಅಂತೆಯೇ ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂಬುದು ನಗರವಾಸಿಗಳ ಒತ್ತಾಯ.
*ಫುಟ್‌ಪಾತ್ ಬಿಟ್ಟು ರಸ್ತೆಯಲ್ಲೇ ನಡೆಯಬೇಕಿದೆ. ಶಾಲಾ ಮಕ್ಕಳು, ವೃದ್ಧರಿಗೆ ಇದರಿಂದ ಕಿರಿಕಿರಿಯಾಗುತ್ತಿದೆ. ಈ ರೀತಿ ರಸ್ತೆ ಪಕ್ಕದಲ್ಲೇ ಮೂತ್ರ ವಿಸರ್ಜನೆ ಮುಜುಗರವನ್ನುಂಟುಮಾಡುತ್ತದೆ. ಪಾಲಿಕೆ ಕ್ರಮಕ್ಕೆ ಮುಂದಾಗಲಿ.
–ಪೂಜಾ ಬಿ.ಎನ್, ಮೂಡಲಪಾಳ್ಯ
*ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಶೌಚಾಲಯ ಬಳಸದೆ ಕಟ್ಟಡ, ಕಾಂಪೌಂಡ್‌ಗಳಿಗೆ ಈ ರೀತಿ ಹೊಲಸು ಮಾಡುವುದು ತಪ್ಪು. ಕನಿಷ್ಠ ಪ್ರಜ್ಞೆ ಇಲ್ಲದ ವರ್ತನೆ ಸಲ್ಲ. ಸ್ವಯಂಪ್ರೇರಿತ ಜಾಗೃತಿ ಮುಖ್ಯ. ನಮ್ಮ ನಗರದ ಸ್ವಚ್ಛತೆಗೆ ನಾವೇ ಮುಂದಾಗಬೇಕು
–ಅನಿಲ್ ಕುಮಾರ್, ಖಾಸಗಿ ಉದ್ಯೋಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.