ADVERTISEMENT

ಪಾನಿಪೂರಿ ಗಾಡಿಯಲ್ಲಿ ‘ಅಫೀಮು’ ಮಾರಾಟ!

ಆರೋಪಿಯಿಂದ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ರಸ್ತೆ ಬದಿ ಯಲ್ಲಿ ವ್ಯಾಪಾರ

​ಪ್ರಜಾವಾಣಿ ವಾರ್ತೆ
Published 29 ಜನವರಿ 2019, 19:57 IST
Last Updated 29 ಜನವರಿ 2019, 19:57 IST
ಶ್ಯಾಮಲಾಲ್
ಶ್ಯಾಮಲಾಲ್   

ಬೆಂಗಳೂರು: ಪಾನಿಪೂರಿ ಗಾಡಿಯಲ್ಲೇ ಮಾದಕ ವಸ್ತು ಅಫೀಮನ್ನು ಮಾರುತ್ತಿದ್ದ ರಾಜಸ್ಥಾನದ ಶ್ಯಾಮಲಾಲ್ (40) ಎಂಬಾತ ಬೆಳ್ಳಂದೂರು ಪೊಲೀಸರ ಅತಿಥಿಯಾಗಿದ್ದಾನೆ.

ವರ್ಷದ ಹಿಂದೆ ನಗರಕ್ಕೆ ಬಂದಿದ್ದ ಈತ, ಪರಂಗಿಪಾಳ್ಯದ ಕೆಇಬಿ ಕಚೇರಿ ರಸ್ತೆಯಲ್ಲಿ ನೆಲೆಸಿದ್ದ.

ಎಚ್‌ಎಸ್‌ಆರ್ ಲೇಔಟ್‌ನಲ್ಲಿ ರಸ್ತೆ ಬದಿ ಪಾನಿಪೂರಿ ಮಾರುತ್ತಿದ್ದ ಈತ, ಕೆಲ ವಿದ್ಯಾರ್ಥಿಗಳು ಹಾಗೂ ಸಾಫ್ಟ್‌ವೇರ್ ಉದ್ಯೋಗಿಗಳನ್ನು ಕಡ್ಡಾಯ ಗ್ರಾಹಕರನ್ನಾಗಿ ಮಾಡಿಕೊಂಡಿದ್ದ. ಅವರೂ ಪಾನಿಪೂರಿ ತಿನ್ನುವವರಂತೆ ಬಂದು, ಅಫೀಮನ್ನು ತೆಗೆದುಕೊಂಡು ಹೋಗುತ್ತಿದ್ದರು ಎಂದು ಪೊಲೀಸರು ಹೇಳಿದರು.

ADVERTISEMENT

ರಾಜಸ್ಥಾನದ ಚಿತ್ತೋರಘಡದಿಂದ ಅಫೀಮನ್ನು ತರುತ್ತಿದ್ದ ಆರೋಪಿ, ಅದನ್ನು ಸಣ್ಣ ಸಣ್ಣ ಪ್ಯಾಕೇಟ್‌ಗಳನ್ನು ಮಾಡಿ ಮಾರುತ್ತಿದ್ದ.

ಆತನಿಂದ ₹ 52 ಸಾವಿರ ಮೌಲ್ಯದ 750 ಗ್ರಾಂ ಮಾದಕ ವಸ್ತು ಜಪ್ತಿ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಗಸ್ತು ಪೊಲೀಸರಿಗೆ ಸಿಕ್ಕಿಬಿದ್ದ: ‘ಬೆಳ್ಳಂದೂರು ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಹಾಗೂ ದರೋಡೆ ಪ್ರಕರಣಗಳು ಹೆಚ್ಚಾಗಿದ್ದವು. ಹೀಗಾಗಿ, ಹಗಲು ಸಹ ಗಸ್ತು ತಿರುಗಲು ಸಿಬ್ಬಂದಿಗೆ ಸೂಚಿಸಲಾಗಿತ್ತು.

ಹೆಡ್‌ಕಾನ್‌ಸ್ಟೆಬಲ್ ಮುನಿರಾಜು ಹಾಗೂ ಕಾನ್‌ಸ್ಟೆಬಲ್ ಶ್ರೀಶೈಲ ಬಗಲೂರು ಅವರು ಸರ್ಜಾಪುರ ರಸ್ತೆಯಲ್ಲಿ ಗಸ್ತು ಹೋಗುತ್ತಿದ್ದಾಗ ಪ್ಲಾಸ್ಟಿಕ್ ಕವರ್ ಹಿಡಿದು ನಿಂತಿದ್ದ ಶ್ಯಾಮಲಾಲ್‌ನನ್ನು ನೋಡಿದ್ದಾರೆ.

ತಮ್ಮನ್ನು ನೋಡುತ್ತಿದ್ದಂತೆಯೇ ಆತ ಪರಾರಿಯಾಗಲು ಯತ್ನಿಸಿದ್ದರಿಂದ ಸಿಬ್ಬಂದಿ ಬೆನ್ನಟ್ಟಿ ಹಿಡಿದಿದ್ದಾರೆ. ಬಳಿಕ ತಪಾಸಣೆ ನಡೆಸಿದಾಗ ಅಫೀಮು ಪತ್ತೆಯಾಗಿದೆ’ ಎಂದು ಪೊಲೀಸರು ಹೇಳಿದರು.

**

₹ 8 ಸಾವಿರ ವಹಿವಾಟು

‘ಪಾನಿಪೂರಿ ವ್ಯಾಪಾರದಿಂದ ನಿತ್ಯ ₹ 1.5 ಸಾವಿರದವರೆಗೆ ಸಂಪಾದನೆ ಮಾಡುತ್ತಿದ್ದ ಶ್ಯಾಮಲಾಲ್, ಅಫೀಮು ಮಾರಾಟದಿಂದ ಕನಿಷ್ಠ ₹ 8 ಸಾವಿರ ಗಳಿಸುತ್ತಿದ್ದ. ನ್ಯಾಯಾಧೀಶರ ಆದೇಶದಂತೆ ಶ್ಯಾಮಲಾಲ್‌ನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದೇವೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.