ADVERTISEMENT

ಕೆ.ಆರ್.ಪುರ: ಕೊಳೆಗೇರಿ ನಿವಾಸಿಗಳ ಸ್ಥಳಾಂತರಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2024, 23:30 IST
Last Updated 9 ಅಕ್ಟೋಬರ್ 2024, 23:30 IST
ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ ಅವರು ಕೊಡಿಗೆಹಳ್ಳಿ ಸರ್ವೇ ನಂ 38ರಲ್ಲಿ ಸ್ಥಳ ಪರಿಶೀಲನೆ ನಡೆಸುವ ವೇಳೆ, ಸ್ಥಳೀಯರು ಭೇಟಿಯಾಗಿ ಚರ್ಚೆ ನಡೆಸಿದರು.
ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ ಅವರು ಕೊಡಿಗೆಹಳ್ಳಿ ಸರ್ವೇ ನಂ 38ರಲ್ಲಿ ಸ್ಥಳ ಪರಿಶೀಲನೆ ನಡೆಸುವ ವೇಳೆ, ಸ್ಥಳೀಯರು ಭೇಟಿಯಾಗಿ ಚರ್ಚೆ ನಡೆಸಿದರು.   

ಕೆ.ಆರ್.ಪುರ: ಪುಲಿಕೇಶಿನಗರ ಕ್ಷೇತ್ರದ ಕೊಳೆಗೇರಿಯ ನಿವಾಸಿಗಳನ್ನು ಮಹದೇವಪುರ ಕ್ಷೇತ್ರದ ಕೊಡಿಗೆಹಳ್ಳಿಗೆ ಸ್ಥಳಾಂತರ ಮಾಡುತ್ತಿರುವುದಕ್ಕೆ, ಸ್ಥಳೀಯ ನಿವಾಸಿಗಳು ವಿರೋಧ ವ್ಯಕ್ತಪಡಿಸಿದರು.

ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ ಅವರು, ಸ್ಥಳ ಪರಿಶೀಲನೆಗಾಗಿ (ಸರ್ವೆ ನಂ 38) ಕೊಡಿಗೆಹಳ್ಳಿಗೆ ಭೇಟಿ ನೀಡಿದ ವೇಳೆ ಸ್ಥಳೀಯ ನಿವಾಸಿಗಳು ಮತ್ತು ಜಮೀನಿನ ಮಾಲೀಕರು, ಕೊಳೆಗೇರಿ ನಿವಾಸಿಗಳನ್ನು ಸ್ಥಳಾಂತರಿಸದಂತೆ ಒತ್ತಾಯಿಸಿದರು.

‘ಈ ಜಾಗದಲ್ಲಿ 60 ವರ್ಷಗಳಿಂದ ವ್ಯವಸಾಯ ಮಾಡಿಕೊಂಡು ಬರುತ್ತಿದ್ದೇವೆ. ರೈತರನ್ನು ಒಕ್ಕಲೆಬ್ಬಿಸದೇ, ಬಗರಹುಕುಂ ಕಾಯ್ದೆ ಅನ್ವಯ ಸಾಗುವಳಿ ಪತ್ರ ನೀಡಬೇಕೆಂದು 1992 ರಲ್ಲಿ ಹೈಕೋರ್ಟ್ ಅದೇಶ ನೀಡಿದೆ. ಸಾಗುವಳಿ ಪತ್ರ ನೀಡುವುದು ವಿಳಂಬವಾಗಿದೆ. ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ. ಆದ್ದರಿಂದ ಈ ಜಾಗವನ್ನು ಕೊಳೆಗೇರಿ ನಿವಾಸಿಗಳಿಗೆ ನೀಡಬಾರದು’ ಎಂದು ಕೊಡಿಗೆಹಳ್ಳಿ ನಿವಾಸಿ ವಿವೇಕ್ ಮನವಿ ಮಾಡಿದರು.

ADVERTISEMENT

‘ಮಹದೇವಪುರ ಕ್ಷೇತ್ರದಲ್ಲಿ ಸರ್ಕಾರ ಈಗಾಗಲೇ ನಿರ್ವಿಸಿರುವ ಕೊಳೆಗೇರಿಗೆ ಮಂಡಳಿಯು ಮೂಲಸೌಕರ್ಯ ಕಲ್ಪಿಸುವಲ್ಲಿ ವಿಫಲವಾಗಿದೆ. ಇಲ್ಲಿ ಕೊಳೆಗೇರಿ ನಿರ್ಮಿಸುವುದು ಬೇಡ’ ಎಂದು ಸ್ಥಳೀಯ ಮುಖಂಡ ಹೂಡಿ ಪಿಳ್ಳಪ್ಪ‌ ಆಗ್ರಹಿಸಿದರು.

ನಂತರ ಮಾತನಾಡಿದ ಅಧ್ಯಕ್ಷ ಪ್ರಸಾದ ಅಬ್ಬಯ್ಯ, ‘ಸರ್ಕಾರದಿಂದ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಗೆ ಇಲ್ಲಿ ನಾಲ್ಕು ಎಕರೆ ಜಮೀನು ನೀಡಲಾಗಿದೆ. ಸ್ಥಳ ಪರಿವೀಕ್ಷಣೆ ವೇಳೆಯಲ್ಲಿ, ಇದು ದಲಿತರಿಗೆ ಸೇರಿದ ಭೂಮಿಯಾಗಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆ ಎಂದು ಗೊತ್ತಾಗಿದೆ. ಯಾವ ಕೋರ್ಟ್‌ನಲ್ಲಿದೆ ಎಂಬುದನ್ನು ತಿಳಿದುಕೊಂಡು ದಾಖಲೆ ಪರಿಶೀಲಿಸುತ್ತೇನೆ’ ಎಂದು ತಿಳಿಸಿದರು.

‘ಸ್ಥಳೀಯರು ಕೊಳೆಗೇರಿ ನಿರ್ಮಿಸುವುದು ಬೇಡ ಎಂದು ಒತ್ತಾಯಿಸುತ್ತಿದ್ದಾರೆ. ಸಮಸ್ಯೆಯನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ನಿರ್ಧರಿಸುತ್ತೇನೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.