ಬೆಂಗಳೂರು: ಕಾಸರಗೋಡು ಜಿಲ್ಲೆಯ ಮಂಜೇಶ್ವರ ಹಾಗೂ ಅಲ್ಲಿನ ಕೆಲವು ಗ್ರಾಮಗಳ ಕನ್ನಡದ ಹೆಸರುಗಳನ್ನು ಮಲಯಾಳಿ ಭಾಷೆಗೆ ಬದಲಾಯಿಸುವ ಪ್ರಕ್ರಿಯೆಯನ್ನು ಕೇರಳ ಸರ್ಕಾರ ಪ್ರಾರಂಭಿಸಿದೆ ಎಂದು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಆಕ್ಷೇಪ ದೂರಿದೆ.
ಕೇರಳ ಸರ್ಕಾರ ಮತ್ತು ಅಲ್ಲಿನ ಲೋಕೋಪಯೋಗಿ ಹಾಗೂ ಕಂದಾಯ ಸಚಿವರಿಗೆ ಪತ್ರ ಬರೆದಿರುವ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ. ಸೋಮಶೇಖರ್, ಗ್ರಾಮಗಳ ಕನ್ನಡದ ಹೆಸರುಗಳನ್ನು ಯಾವುದೇ ಕಾರಣಕ್ಕೂ ಬದಲಾಯಿಸಬಾರದು ಎಂದು ಆಗ್ರಹಿಸಿದ್ದಾರೆ. ನಾಮಫಲಕ ಬದಲಾಯಿಸುವ ಪ್ರಕ್ರಿಯೆಯನ್ನು ಕೈಬಿಡಬೇಕೆಂದು ಕೇರಳ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅವರಿಗೆ ಮನವಿಯನ್ನೂ ಸಲ್ಲಿಸಿದ್ದಾರೆ.
‘ಕನ್ನಡ ಭಾಷೆಯನ್ನೇ ಹೆಚ್ಚು ಬಳಸುವಂತಹ ಕಾಸರಗೋಡು ಜಿಲ್ಲೆಯ ಕೆಲವು ಹಳ್ಳಿಗಳ ಹೆಸರನ್ನು ಕೇರಳ ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳು ಬದಲಾಯಿಸುವ ಪ್ರಕ್ರಿಯೆ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಕನ್ನಡ ಸಾಂಸ್ಕೃತಿಕ ಪರಂಪರೆಯನ್ನು ಸೂಚಿಸುವ ಹೆಸರುಗಳನ್ನು ಅಲ್ಲಿನ ಕೆಲವು ಗ್ರಾಮಗಳು ಹೊಂದಿವೆ. ಮಲಯಾಳಂ ಭಾಷೆಯ ಹೆಸರುಗಳನ್ನು ಗ್ರಾಮಗಳಿಗೆ ನೀಡುವುದರಿಂದ ಆ ಭಾಗದ ಕನ್ನಡಿಗರ ಪರಂಪರಾಗತ ಭಾವನೆಗಳಿಗೆ ಧಕ್ಕೆಯಾಗುತ್ತದೆ’ ಎಂದು ಪ್ರಾಧಿಕಾರ ತಿಳಿಸಿದೆ.
‘ಇಂತಹ ಬದಲಾವಣೆಗಳನ್ನು ತರಲು ಪ್ರಯತ್ನಿಸುವ ಮುನ್ನ ಆ ಭಾಗದ ಕನ್ನಡಿಗರು ಅಥವಾ ಅಲ್ಲಿನ ನಾಗರಿಕರ ಅಭಿಪ್ರಾಯವನ್ನೂ ಕೇಳಿಲ್ಲ. ಮಧೂರು–ಮಧುರಮ್, ಮಲ್ಲ–ಮಲ್ಲಮ್, ಕಾರಡ್ಕ–ಕಡಗಮ್, ಬೇದಡ್ಕ–ಬೆಡಗಮ್, ಪಿಳಿಕುಂಜೆ–ಪಿಳಿಕುನ್ನು, ಆನೆಬಾಗಿಲು–ಆನೆವಾಗಿಲ್, ಮಂಜೇಶ್ವರ–ಮಂಜೇಶ್ವರಮ್, ಹೊಸದುರ್ಗ–ಪುದಿಯಕೋಟ, ಕುಂಬಳೆ–ಕುಂಬ್ಳಾ, ಸಸಿಹಿತ್ಲು–ಶೈವಲಪ್, ನೆಲ್ಲಿಕುಂಜ–ನೆಲ್ಲಿಕುನ್ನಿ ಎಂದು ಮಲಯಾಳಂ ಭಾಷೆಗೆ ಮಾರ್ಪಾಡು ಮಾಡಲಾಗುತ್ತಿದೆ. ಗ್ರಾಮಗಳ ಹೆಸರುಗಳನ್ನು ಬದಲಾಯಿಸುವ ಬಗ್ಗೆ ಅಲ್ಲಿನ ಕನ್ನಡ ಪರ ಸಂಘ–ಸಂಸ್ಥೆಗಳು ಕೂಡ ಅಸಮಾಧಾನ ವ್ಯಕ್ತಪಡಿಸಿವೆ’ ಎಂದು ಪ್ರಕಟಣೆಯಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತೀಹಳ್ಳಿ ತಿಳಿಸಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.