ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ಕೆಲವು ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳನ್ನು (ಎಸ್‌ಟಿಪಿ) ಹಿಂದೆ ಗುರುತಿಸಿದ ಜಾಗಗಳ ಬದಲು ಬೇರೆ ಕಡೆ ನಿರ್ಮಿಸಲು ಮುಂದಾಗಿದೆ.
ಸ್ಥಳೀಯರ ವಿರೋಧಕ್ಕೆ ಮಣಿದು ಬೇರೆ ಕಡೆ ಎಸ್‌ಟಿಪಿಗಳನ್ನು ನಿರ್ಮಿಸಿದ್ದೇ ಆದರೆ, ಈಗಾಗಲೇ ಹಂಚಿಕೆಯಾದ ಕೆಲವು ನಿವೇಶನಗಳಿಗೆ ಬದಲಿ ನಿವೇಶನಗಳನ್ನು ನೀಡಬೇಕಾಗಿ ಬರಬಹುದು. ಇದು ಇನ್ನಷ್ಟು ಗೊಂದಲ ಸೃಷ್ಟಿಸಬಹುದು ಎಂಬ ಆತಂಕವನ್ನು ಈ ಬಡಾವಣೆಯ ನಿವೇಶನದಾರರು ತೋಡಿಕೊಂಡಿದ್ದಾರೆ.
ಪ್ರಾಧಿಕಾರವು ಬಡಾವಣೆಯ ಒಂಬತ್ತು ಬ್ಲಾಕ್‌ಗಳಲ್ಲೂ ತಲಾ ಒಂದು ಎಸ್‌ಟಿಪಿ ನಿರ್ಮಿಸುತ್ತಿದೆ. 1, 2, 3, 4 ಹಾಗೂ 8ನೇ ಬ್ಲಾಕ್‌ಗಳಲ್ಲಿ ಎಸ್‌ಟಿಪಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಶೇ 30ರಷ್ಟು ಕಾಮಗಾರಿಯೂ ಪೂರ್ಣಗೊಂಡಿದೆ. ಆದರೆ, 5, 6, 7 ಹಾಗೂ 9ನೇ ಬ್ಲಾಕ್‌ಗಳಲ್ಲಿ ಎಸ್‌ಟಿಪಿ ನಿರ್ಮಾಣದ ಕೆಲಸ ಇನ್ನೂ ಆರಂಭವಾಗಿಲ್ಲ.
‘ಎಸ್‌ಟಿಪಿಗೆ ಗುರುತಿಸಿದ ಪ‍್ರದೇಶಗಳು ಜನವಸತಿಗೆ ಸಮೀಪದಲ್ಲಿವೆ. ಎಸ್‌ಟಿಪಿ ಸರಿಯಾಗಿ ನಿರ್ವಹಣೆ ಮಾಡದಿದ್ದರೆ, ಅವುಗಳು ದುರ್ನಾತ ಬೀರುವ ಅಪಾಯವಿದೆ. ಹಾಗಾಗಿ ಇವುಗಳನ್ನು ಜನವಸತಿ ಇರುವ ಕಡೆ ಸ್ಥಾಪಿಸಬಾರದು’ ಎಂದು ಒತ್ತಾಯಿಸಿ ಸ್ಥಳೀಯರು ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದರು. ರಾಜಕೀಯ ಮುಖಂಡರ ಮೂಲಕವೂ ಬಿಡಿಎ ಮೇಲೆ ಒತ್ತಡ ಹೇರಿದ್ದರು. ಹಾಗಾಗಿ ನಾಲ್ಕು ಬ್ಲಾಕ್‌ಗಳಲ್ಲಿ ಈ ಹಿಂದೆ ಗುರುತಿಸಿದ್ದ ಸ್ಥಳದ ಬದಲು ಬೇರೆ ಕಡೆ ಎಸ್‌ಟಿಪಿ ನಿರ್ಮಿಸಲು ಬಿಡಿಎ ಚಿಂತನೆ ನಡೆಸುತ್ತಿದೆ. ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರವು (ರೇರಾ) ಈ ಬಡಾವಣೆ ಅಭಿವೃದ್ಧಿ ಕುರಿತ ಅರ್ಜಿಯನ್ನು ಇತ್ತೀಚೆಗೆ ವಿಚಾರಣೆ ನಡೆಸಿದ ವೇಳೆ ಬಿಡಿಎ ಎಂಜಿನಿಯರಿಂಗ್ ಸದಸ್ಯ ಡಾ.ಶಾಂತರಾಜಣ್ಣ ಅವರು ಈ ಬಗ್ಗೆ ಮಾಹಿತಿ ನೀಡಿದ್ದರು.
‘ಎಸ್‌ಟಿಪಿಯನ್ನು ಬೇರೆ ಕಡೆ ನಿರ್ಮಿಸಿ ಎಂದು ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೆಲವು ಕಡೆ ಸಮಸ್ಯೆ ಇಲ್ಲ. ಕೆಲವು ಕಡೆ ಈಗಾಗಲೇ ಗುರುತಿಸಿದ ಜಾಗದ ಬದಲು ಬೇರೆ ಕಡೆ ಎಸ್‌ಟಿಪಿ ನಿರ್ಮಿಸುವ ಚಿಂತನೆ ಇದೆ’ ಎಂದು ಶಾಂತರಾಜಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.
ಈ ಪ್ರಸ್ತಾವ ಬಡಾವಣೆಯ ನಿವೇಶನದಾರರಲ್ಲಿ ಆತಂಕ ಸೃಷ್ಟಿಸಿದೆ.
‘ಎಸ್‌ಟಿಪಿಯ ಸ್ಥಳ ಬದಲಾವಣೆ ಬಗ್ಗೆ ನಮ್ಮ ತಕರಾರು ಇಲ್ಲ. ಆದರೆ, ಸ್ಥಳ ಬದಲಾವಣೆ ಮಾಡುವಾಗ ಈಗಾಗಲೇ ಹಂಚಿಕೆ ಮಾಡಿರುವ ನಿವೇಶನಗಳನ್ನು ಎಸ್‌ಟಿಪಿಗಾಗಿ ಬಳಸಿಕೊಳ್ಳಬೇಕಾಗುತ್ತದೆ. ಆ ನಿವೇಶನದಾರರಿಗೆ ಬದಲಿ ನಿವೇಶನ ಹಂಚಿಕೆ ಮಾಡಬೇಕಾಗುತ್ತದೆ. ಇದು ಭವಿಷ್ಯದಲ್ಲಿ ಇನ್ನಷ್ಟು ಗೊಂದಲ ಸೃಷ್ಟಿಸಲಿದೆ’ ಎಂದು ಬಡಾವಣೆಯ ನಿವೇಶನದಾರರ ಮುಕ್ತ ವೇದಿಕೆಯ ಎ.ಎಸ್.ಸೂರ್ಯಕಿರಣ್ ಆತಂಕ ತೋಡಿಕೊಂಡರು.
‘ಬಡಾವಣೆಯ ನೀಲನಕ್ಷೆ ರಚಿಸುವಾಗ ನೈಸರ್ಗಿಕ ಇಳಿಜಾರನ್ನು ಗುರುತಿಸಿ ಇದ್ದುದರಲ್ಲಿ ಅತ್ಯಂತ ಸೂಕ್ತವಾದ ಸ್ಥಳವನ್ನು ಎಸ್‌ಟಿಪಿಗೆ ನಿರ್ಮಿಸಲು ಗೊತ್ತುಪಡಿಸಲಾಗಿರುತ್ತದೆ. ಇನ್ನು ಅಷ್ಟು ಸೂಕ್ತ ಸ್ಥಳ ಹುಡುಕುವುದು ಕಷ್ಟ. ಸ್ಥಳ ಬದಲಾವಣೆಯ ಕಸರತ್ತಿನ ಬದಲು ಎಸ್‌ಟಿಪಿಯಿಂದ ದುರ್ವಾಸನೆ ಹೊರಹೊಮ್ಮದ ರೀತಿಯ ತಂತ್ರಜ್ಞಾನ ಬಳಸಿ, ಸ್ಥಳೀಯರ ಮನವೊಲಿಕೆ ಮಾಡುವುದು ಸೂಕ್ತ’ ಎಂದರು.
‘ನಾವು ಅತ್ಯಾಧುನಿಕ ಮೆಂಬ್ರೇನ್ ಬಯೊರಿಯಾಕ್ಟರ್ (ಎಂಬಿಆರ್) ತಂತ್ರಜ್ಞಾನ ಬಳಸಿ ಎಸ್‌ಟಿಪಿ ನಿರ್ಮಿಸುತ್ತಿದ್ದೇವೆ. ಇದರಲ್ಲಿ ಸಂಸ್ಕರಣೆಗೆ ಒಳಗಾಗುವ ತ್ಯಾಜ್ಯ ನೀರು ಕುಡಿಯುವ ನೀರಿನಷ್ಟೇ ಶುದ್ಧವಾಗಲಿದೆ. ಇದನ್ನು ಸ್ಥಳೀಯ ನಿವಾಸಿಗಳಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದೇವೆ. ಆದರೂ ಸ್ಥಳೀಯರು ಒಪ್ಪುತ್ತಿಲ್ಲ’ ಎಂದು ಶಾಂತರಾಜಣ್ಣ ತಿಳಿಸಿದರು.
ಏನಿದು ಎಂಬಿಆರ್ ತಂತ್ರಜ್ಞಾನ?
ಎಂಬಿಆರ್ ತಂತ್ರಜ್ಞಾನದಲ್ಲಿ ತ್ಯಾಜ್ಯ ನೀರನ್ನು ಜೈವಿಕ ಸಂಸ್ಕರಣೆಗೆ ಒಳಪಡಿಸುವುದರ ಜೊತೆಗೆ ಸೂಕ್ಷ್ಮಪರದೆಗಳ ಮೂಲಕ ಸೋಸುವಿಕೆಗೂ (ಮೈಕ್ರೊಫಿಲ್ಟ್ರೇಷನ್) ಒಳಪಡಿಸಲಾಗುತ್ತದೆ. ತ್ಯಾಜ್ಯ ನೀರಿನಲ್ಲಿರುವ ರಾಡಿಯ ಅಂಶವು ಚೆನ್ನಾಗಿ ಬೇರ್ಪಡುತ್ತದೆ. ನಗರಗಳ ತ್ಯಾಜ್ಯನೀರು ಹಾಗೂ ಕೈಗಾರಿಕೆಗಳ ತ್ಯಾಜ್ಯ ನೀರಿನ ಸಂಸ್ಕರಣೆಗೆ ಈ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸಲಾಗುತ್ತದೆ.
‘ಎಸ್‌ಟಿಪಿ ಪಕ್ಕ ಕಿರು ಅರಣ್ಯ ಬೆಳೆಸಿ’
‘ಬಡಾವಣೆಯ ಐದು ಬ್ಲಾಕ್‌ಗಳಲ್ಲಿ ನಿರ್ಮಾಣವಾಗುತ್ತಿರುವ ಎಸ್‌ಟಿಪಿಗಳ ಆಸುಪಾಸಿನಲ್ಲಿ ಸಾಕಷ್ಟು ಮೀಸಲು ಪ್ರದೇಶವನ್ನು ಉಳಿಸಿಕೊಂಡಿಲ್ಲ. ಎಸ್‌ಟಿಪಿ ಪಕ್ಕ 30 ಅಡಿ ಅಗಲದ ರಸ್ತೆಗೆ ಜಾಗ ಬಿಟ್ಟು, ಅದರ ಪಕ್ಕದಲ್ಲೇ ನಿವೇಶನ ಹಂಚಿಕೆ ಮಾಡಲಾಗಿದೆ. ಅದರ ಬದಲು ಎಲ್ಲ ಎಸ್‌ಟಿಪಿಗಳ ಬಳಿಯೂ ಕಿರು ಅರಣ್ಯದ ಪಟ್ಟಿಯನ್ನು ಬೆಳೆಸಬೇಕು. ಭವಿಷ್ಯದಲ್ಲಿ ಎಸ್‌ಟಿಪಿಯಿಂದ ಅಲ್ಪ ಪ್ರಮಾಣದಲ್ಲಿ ದುರ್ವಾಸನೆ ಬಂದರೂ, ಅದರ ಪಕ್ಕ ಕಿರು ಅರಣ್ಯವಿದ್ದರೆ, ಅದರಿಂದ ಆಸುಪಾಸಿನಲ್ಲಿ ನೆಲೆಸಿರುವ ಜನರಿಗೆ ಸಮಸ್ಯೆಯಾಗುವುದಿಲ್ಲ’ ಎಂದು ಸೂರ್ಯಕಿರಣ್ ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.