ಹೆಸರಘಟ್ಟ: ‘ಹೆಸರಘಟ್ಟ ಹುಲ್ಲುಗಾವಲು ಪ್ರದೇಶವನ್ನು ಸಂರಕ್ಷಿತ ಮೀಸಲು ಪ್ರದೇಶವಾಗಿ ಘೋಷಣೆ ಮಾಡಿರುವುದು ರೈತ ವಿರೋಧಿ ಧೋರಣೆ. ಇದರಿಂದ ಸುತ್ತಮುತ್ತಲಿನ 50 ಹಳ್ಳಿಗಳ ಜನರಿಗೆ ತೊಂದರೆ ಉಂಟಾಗುತ್ತದೆ’ ಎಂದು ಬಿಜೆಪಿ ರೈತ ಮೋರ್ಚ ರಾಜ್ಯ ಕಾರ್ಯದರ್ಶಿ ಸತೀಶ್ ಕಡತನ ಮಲೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹೋಬಳಿ ವ್ಯಾಪ್ತಿಯ ಐದು ಗ್ರಾಮ ಪಂಚಾಯಿತಿಯ ಚುನಾಯಿತ ಸದಸ್ಯರು, ರೈತ ಸಂಘಗಳು ಸರ್ಕಾರದ ಈ ನಿರ್ಧಾರವನ್ನು ಖಂಡಿಸಿವೆ. ಘೋಷಣಾ ನಿರ್ಧಾರವನ್ನು ಹಿಂಪಡೆಯದಿದ್ದಲ್ಲಿ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಸಿದರು.
‘ಈ ಭಾಗದಲ್ಲಿ ಬಹುತೇಕ ರೈತರು ಕೃಷಿ, ಮೀನುಗಾರಿಕೆ, ಹೈನುಗಾರಿಕೆಯನ್ನು ಅವಲಂಬಿಸಿದ್ದಾರೆ. ಹುಲ್ಲುಗಾವಲನ್ನು ಸಂರಕ್ಷಿತ ಮೀಸಲು ಪ್ರದೇಶವಾಗಿ ಘೋಷಣೆ ಮಾಡುವುದರಿಂದ ಮುಂದೆ ರೈತರಿಗೆ ಜಾನುವಾರು ಮೇಯಿಸಲು ಬಿಡುವುದಿಲ್ಲ. ಹುಲ್ಲುಗಾವಲು ಹಾದು ಹೋಗುವ ರಸ್ತೆಗಳನ್ನು ಮುಚ್ಚಲಾಗುತ್ತದೆ. ಈ ವ್ಯಾಪ್ತಿಯ ಕೆರೆಗಳಲ್ಲಿ ಮೀನುಗಾರಿಕೆ ಮಾಡುವಂತಿಲ್ಲ ಎಂಬ ನಿರ್ಬಂಧಗಳನ್ನು ಹೇರಲಾಗುತ್ತದೆ. ಮೀನುಗಾರಿಕೆಯನ್ನೇ ಅವಲಂಬಿಸಿರುವ ಕುಟುಂಬಗಳು ಇದರಿಂದ ಬೀದಿಗೆ ಬರುವಂತಾಗಲಿದೆ’ ಎಂದರು.
ಹೆಸರಘಟ್ಟ ಹುಲ್ಲುಗಾವಲು ಪ್ರದೇಶವನ್ನು ಸಮರ್ಪಕವಾಗಿ ಸಮೀಕ್ಷೆ ನಡೆಸದೆ, ಸ್ಥಳೀಯರ ಅಭಿಪ್ರಾಯವನ್ನು ಸಂಗ್ರಹಿಸದೆ ಸರ್ಕಾರವು ಏಕಾಏಕಿ ಗ್ರೇಟರ್ ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು ಪ್ರದೇಶ ಎಂದು ಘೋಷಣೆ ಮಾಡಿದೆ ಎಂದು ಆಕ್ಷೇಪಿಸಿದರು.
ಬಿಜೆಪಿ ಹಿರಿಯ ಮುಖಂಡ ಎಸ್.ಎನ್. ರಾಜಣ್ಣ, ದಿಬ್ಬೂರು ಜಯಣ್ಣ, ವಿವಿಧ ಗ್ರಾಮ ಪಂಚಾಯಿತಿಗಳ ಹಾಲಿ ಮತ್ತು ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಮುಖಂಡರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.