ಬೆಂಗಳೂರು: ಮಿದುಳು ನಿಷ್ಕ್ರಿಯಗೊಂಡಿದ್ದ ಕೋಲಾರದ 51 ವರ್ಷದ ರೈತರೊಬ್ಬರ ಅಂಗಾಂಗಗಳನ್ನು ಇಲ್ಲಿನ ಸ್ಪರ್ಶ್ ಆಸ್ಪತ್ರೆಯ ವೈದ್ಯರು ದಾನವಾಗಿ ಪಡೆದಿದ್ದಾರೆ.
ಅವರ ಪತ್ನಿ ಅಂಧರಾಗಿದ್ದು, ಪುತ್ರಿ ಇದ್ದಾಳೆ. ಅನಿಯಂತ್ರಿತ ರಕ್ತದೊತ್ತಡದಿಂದ ಅವರಿಗೆ ಮಿದುಳಿನಲ್ಲಿ ರಕ್ತಸ್ರಾವವಾಗಿತ್ತು. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಜು.18ರಂದು ಯಶವಂತಪುರದ ಸ್ಪರ್ಶ್ ಆಸ್ಪತ್ರೆಗೆ ದಾಖಲಾಗಿದ್ದರು. ಜು.20ರಂದು ಅವರ ಮಿದುಳು ನಿಷ್ಕ್ರಿಯಗೊಂಡಿರುವುದಾಗಿ ಘೋಷಿಸಿದ ವೈದ್ಯರು, ಕುಟುಂಬದ ಸದಸ್ಯರ ಸಮ್ಮತಿ ಮೇರೆಗೆ ಅಂಗಾಂಗ ದಾನ ಪ್ರಕ್ರಿಯೆ ಕೈಗೊಂಡರು. ಹೃದಯ, ಶ್ವಾಸಕೋಶ, ಎರಡು ಮೂತ್ರಪಿಂಡಗಳು ಮತ್ತು ಕಾರ್ನಿಯಾವನ್ನು ದಾನವಾಗಿ ಪಡೆದರು ಎಂದು ಆಸ್ಪತ್ರೆ ತಿಳಿಸಿದೆ.
‘ದುಃಖದ ಸಂದರ್ಭದಲ್ಲಿಯೂ ಕುಟುಂಬ ಸದಸ್ಯರು ಅಂಗಾಂಗ ದಾನಕ್ಕೆ ಸಮ್ಮತಿಸುವ ಮೂಲಕ ಮಾದರಿಯಾಗಿದ್ದಾರೆ. ಅಂಗಾಂಗಕ್ಕಾಗಿ ಹಲವಾರು ಮಂದಿ ಎದುರು ನೋಡುತ್ತಿದ್ದು, ಈ ಬಗ್ಗೆ ಜಾಗೃತಿ ಹೆಚ್ಚಬೇಕು’ ಎಂದು ಆಸ್ಪತ್ರೆಗಳ ಸಮೂಹದ ಮುಖ್ಯ ಕಾರ್ಯಾಚರಣೆ ಅಧಿಕಾರಿ ಜೋಸೆಫ್ ಪಸಂಘ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.