ಪೀಣ್ಯ ದಾಸರಹಳ್ಳಿ: ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಸಾವಯವ ಕೃಷಿ ಉತ್ಪನ್ನಗಳು ಸಿಗಬೇಕು. ಉತ್ಪಾದಕರು – ಗ್ರಾಹಕರ ನಡುವೆ ಸಂಪರ್ಕ ಕಲ್ಪಿಸಬೇಕೆಂಬ ಮಹತ್ವದ ಉದ್ದೇಶಗಳೊಂದಿಗೆ ‘ಸಾವಯವ ಸಂತೆಯನ್ನು ಸ್ವದೇಶಿ ಜಾಗರಣ ಮಂಚ್ ಆಯೋಜಿಸುತ್ತಿದೆ‘ ಎಂದು ಶಾಸಕ ಎಸ್. ಮುನಿರಾಜು ಹೇಳಿದರು.
ಹೆಸರಘಟ್ಟ ಮುಖ್ಯ ರಸ್ತೆಯ ಸಿಲ್ವರ್ ಸ್ಪಿಂಗ್ ಫೀಲ್ಡ್ ಅಪಾರ್ಮೆಂಟ್‌ನಲ್ಲಿ ಸ್ವದೇಶಿ ಜಾಗರಣ ಮಂಚ್ ಅಯೋಜಿಸಿದ್ದ ಸಾವಯವ ಸಂತೆಯನ್ನು ಉದ್ಘಾಟಿಸಿ ಮಾತಾನಡಿದರು.
‘ಮುಂದಿನ ದಿನಗಳಲ್ಲಿ ನಗರದ ಬೇರೆ ಬೇರೆ ಅಪಾರ್ಟ್‌ಮೆಂಟ್‌ಗಳ ಆವರಣದಲ್ಲೂ ಈ ಸಾವಯವ ಸಂತೆಯನ್ನು ಆಯೋಜಿಸಲು ಸ್ವದೇಶಿ ಜಾಗರಣ ಮಂಚ್ ಯೋಜನೆ ರೂಪಿಸಿದೆ. ಈ ಮೂಲಕ ಗ್ರಾಹಕರಿಗೆ ಮನೆ ಬಾಗಿಲಿಗೆ ಆರೋಗ್ಯಪೂರ್ಣ ಆಹಾರ ತಲುಪಿಸಲು ಅಗತ್ಯ ಸಿದ್ದತೆ ನಡೆಸಿದೆ’ ಎಂದು ಹೇಳಿದರು.
’ಈ ಸಂತೆಯ ಪರಿಕಲ್ಪನೆಯಿಂದ ಬೆಳೆಗಾರರಿಗೂ ಉತ್ತಮ ಬೆಂಬಲ ಸಿಗುತ್ತದೆ. ಹಾಗೆಯೇ, ಸಾವಯವ ಉತ್ಪನ್ನಗಳ ಮಾರಾಟಕ್ಕೆ ಉತ್ತಮ ವೇದಿಕೆಯೂ ಸಿಕ್ಕಂತಾಗುತ್ತದೆ' ಎಂದರು.
ಬಿಜೆಪಿಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಭರತ್ ಸೌಂದರ್ಯ ಮಾತಾನಾಡಿ, ‘ಸಂತೆಯಲ್ಲಿ ಸಾವಯವ ಪದ್ಧತಿಯಲ್ಲಿ ಬೆಳೆದ ಹಣ್ಣು, ತರಕಾರಿ, ಬೇಳೆಕಾಳುಗಳನ್ನು ಇಟ್ಟಿದ್ದಾರೆ. ಜೊತೆಗೆ, ಗಾಣದ ಎಣ್ಣೆ, ಕರಕುಶಲ ವಸ್ತುಗಳು, ಕೈಮಗ್ಗದ ವಸ್ತ್ರಗಳು, ಸಾವಯವ ಪ್ರಸಾಧನ ಸಾಮಗ್ರಿಗಳು ಸೇರಿದಂತೆ ಪರಿಸರ ಸ್ನೇಹಿ ಉತ್ಪನ್ನಗಳೂ ಇವೆ’ ಎಂದರು
ಕಾರ್ಯಕ್ರಮದಲ್ಲಿ ಸ್ವದೇಶಿ ಜಾಗರಣಾ ಮಂಚ್‌ನ ಗಂಗಾಧರ್, ಮಹಂತೇಶ್, ಸಂದೀಪ್, ಅಪಾರ್ಟಮೆಂಟ್ ನಿವಾಸಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.