ADVERTISEMENT

ಸೌಜನ್ಯ ಪ್ರಕರಣ: ಎಸ್‌ಐಟಿ ತನಿಖೆಗೆ ಆಗ್ರಹ, ವಿವಿಧ ಸಂಘಟನೆಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2023, 15:32 IST
Last Updated 28 ಜುಲೈ 2023, 15:32 IST
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದ ಪ್ರಗತಿಪರ ಸಂಘಟನೆಗಳ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ವಿಜಯಾ, ಸಿ.ಎಸ್. ದ್ವಾರಕಾನಾಥ್‌, ಸಬಿಹಾ ಭೂಮಿಗೌಡ, ಸೌಜನ್ಯ ತಾಯಿ ಕುಸುಮಾವತಿ, ಲಕ್ಷ್ಮಿ ಮೊದಲ ಸಾಲಿನಲ್ಲಿದ್ದಾರೆ
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದ ಪ್ರಗತಿಪರ ಸಂಘಟನೆಗಳ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ವಿಜಯಾ, ಸಿ.ಎಸ್. ದ್ವಾರಕಾನಾಥ್‌, ಸಬಿಹಾ ಭೂಮಿಗೌಡ, ಸೌಜನ್ಯ ತಾಯಿ ಕುಸುಮಾವತಿ, ಲಕ್ಷ್ಮಿ ಮೊದಲ ಸಾಲಿನಲ್ಲಿದ್ದಾರೆ    –ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಧರ್ಮಸ್ಥಳದ ಸೌಜನ್ಯ ಪ್ರಕರಣದ ಬಗ್ಗೆ ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ತನಿಖೆ ನಡೆಸಬೇಕು’ ಎಂದು ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಹೋರಾಟ ಸಮಿತಿ ಪದಾಧಿಕಾರಿಗಳು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಸ್ವಾತಂತ್ರ್ಯ ಉದ್ಯಾನದಲ್ಲಿ ಸೇರಿದ್ದ ಪ್ರತಿಭಟನಕಾರರು, ‘ಸೌಜನ್ಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಆರೋಪಿಗಳಿಗೆ ಶಿಕ್ಷೆಯಾಗಬೇಕು’ ಎಂದು ಘೋಷಣಾ ಫಲಕ ಪ್ರದರ್ಶಿಸಿದರು. ಸೌಜನ್ಯ ತಾಯಿ ಕುಸುಮಾವತಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

‘ಸೌಜನ್ಯ ಪ್ರಕರಣದ ಆರೋಪಿಗಳು ಧರ್ಮಸ್ಥಳದಲ್ಲಿ ರಾಜಾರೋಷವಾಗಿ ಸುತ್ತಾಡುತ್ತಿದ್ದಾರೆ. ಪ್ರಕರಣದ ಮರು ತನಿಖೆ ನಡೆಸಿ, ತಪ್ಪಿತಸ್ಥರನ್ನು ಜೈಲಿಗೆ ಕಳುಹಿಸಬೇಕು. ಪ್ರಕರಣದಲ್ಲಿ ಸೂಕ್ತ ತನಿಖೆ ನಡೆಸದ ಪೊಲೀಸ್ ಅಧಿಕಾರಿಗಳು ಹಾಗೂ ನೈಜ ವೈದ್ಯಕೀಯ ವರದಿ ನೀಡದ ವೈದ್ಯೆ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ADVERTISEMENT

ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿ, ‘ಸೌಜನ್ಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಪ್ರಕರಣವನ್ನು ಮುಚ್ಚಿಹಾಕಲು ಸರ್ಕಾರ ಪ್ರಯತ್ನಿಸುತ್ತಿದೆ. ಅಪರಾಧಿಗಳನ್ನು ರಕ್ಷಿಸುತ್ತಿರುವವರಿಗೆ ಶಾಪ ತಟ್ಟುತ್ತದೆ’ ಎಂದು ಕಿಡಿಕಾಡಿದರು.

‘ಪ್ರಕರಣದ ತನಿಖೆಯನ್ನು ಸಿಬಿಐ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ನಡೆಸಿಲ್ಲ. ಪ್ರಕರಣದ ತನಿಖೆಯಲ್ಲಿ ಲೋಪಗಳಿದ್ದು, ಮರು ತನಿಖೆಗೆ ಅರ್ಹವಾಗಿದೆ’ ಎಂದು ನ್ಯಾಯಾಲಯವೇ ಅಭಿಪ್ರಾಯಪಟ್ಟಿದೆ. ಹೀಗಾಗಿ, ನ್ಯಾಯಾಂಗದ ಮೇಲ್ವಿಚಾರಣೆಯಲ್ಲಿ ಎಸ್‌ಐಟಿ ಮೂಲಕ ಪ್ರಕರಣದ ಮರು ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿಗೆ ಮನವಿ: ಸೌಜನ್ಯ ಕೊಲೆ ಪ್ರಕರಣವನ್ನು ಎಸ್ಐಟಿ ತನಿಖೆಗೆ ವಹಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಗತಿಪರ ಸಂಘಟನೆಗಳ ಸದಸ್ಯರು ಭೇಟಿಯಾಗಿ ಮನವಿ ಸಲ್ಲಿಸಿದರು.

ಕೆ.ಎಸ್. ವಿಮಲಾ, ಗೌರಮ್ಮ, ಲಕ್ಷ್ಮಿ ಪ್ರಭಾ ಬೆಳವಂಗಲ, ಲೀಲಾ ಸಂಪಿಗೆ, ದೇವಿ, ರೂತ್ ಮನೋರಮಾ, ಅಕ್ಕೈ ಪದ್ಮಸಾಲಿ, ಅಖಿಲಾ, ಬಿ.ಎಂ. ಭಟ್, ಭೀಮನಗೌಡ, ಬಸಮ್ಮ, ಸುಮತಿ ಹಾಗೂ ಲಹರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.