ಬೆಂಗಳೂರು: ಲಕ್ಷಾಂತರ ರೂಪಾಯಿ ಸಾಲ ಪಡೆದು ಮರುಪಾವತಿಸದ ನಿರ್ದೇಶಕರ ವಿರುದ್ಧ ಹೆಸರಘಟ್ಟದ ರೈತರ ಸೇವಾ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಸ್ವಾರ್ಥಕ್ಕೆ ಸಾರ್ವಜನಿಕ ಹಣವನ್ನು ಉಪಯೋಗಿಸಿಕೊಂಡ ನಿರ್ದೇಶಕರನ್ನು ಸಂಘದಿಂದ ಹೊರ ಹಾಕಬೇಕು. ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ರೈತರು ಸಭೆಯಲ್ಲಿ ಪಟ್ಟು ಹಿಡಿದರು. ಸುಸ್ತಿದಾರ ನಿರ್ದೇಶಕರು ವೇದಿಕೆ ಮೇಲೆ ಕೂರಲು ಅರ್ಹರಲ್ಲ. ಅವರು ಕೆಳಗಿಳಿಯಬೇಕು ಎಂದು ಆಗ್ರಹಿಸಿದರು.
ಎಚ್.ಎಂ.ವೆಂಕಟೇಶ್ ಎನ್ನುವ ನಿರ್ದೇಶಕ ವಾಹನದ ಮೇಲೆ ₹15 ಲಕ್ಷ, ಮಧ್ಯಮಾವಧಿ ಸಾಲವಾಗಿ ₹10 ಲಕ್ಷ ಸಾಲ ಪಡೆದಿದ್ದಾರೆ. ವಾಹನ ಸಾಲವನ್ನು ಒಂದು ಬಿಡಿಗಾಸು ಪಾವತಿ ಮಾಡಿಲ್ಲ. ನಮ್ಮಂತಹ ರೈತರು ₹50 ಸಾವಿರ ಸಾಲ ಕೇಳಿದರೆ
ಪಹಣಿ ಕೇಳುತ್ತಾರೆ. ಇವರ ಬಳಿ ಏನು ದಾಖಲೆ ಪಡೆದಿದ್ದೀರಿ’ ಎಂದು ಗ್ರಾಮದ ನಿವಾಸಿ ಗೋವಿಂದರಾಜು ಪ್ರಶ್ನಿಸಿದರು.
‘ಸಂಘದ ನಿರ್ದೇಶಕ ಎಚ್.ಎನ್.ರಂಗೇಗೌಡ, ಕೆ.ಎನ್.ವನಜಾಕ್ಷಿ, ಟಿ.ಆರ್.ಲಕ್ಷ್ಮೀನಾರಾಯಣ್, ಕೆ.ಎಂ.ಹನುಮಂತರಾಜು ಅವರು ಲಕ್ಷಾಂತರ ರೂಪಾಯಿ ಸಾಲ ತೆಗೆದುಕೊಂಡಿದ್ದು ಇಲ್ಲಿಯ ತನಕ ಎಷ್ಟು ಹಣವನ್ನು ಮರು ಪಾವತಿ ಮಾಡಿದ್ದಾರೆ? ಇವರ ಹತ್ತಿರ ಯಾಕೆ ವಸೂಲಿ ಮಾಡಿಲ್ಲ’ ಎಂದು ರೈತರು ಪ್ರಶ್ನಿಸಿದರು.
‘ಸಂಘದ ಸಿಇಒ ಪುರುಷೋತ್ತಮ, ನಿರ್ದೇಶಕರ ಜೊತೆ ಕೂಡಿಕೊಂಡು ಅನೇಕ ಬಿಲ್ ವೋಚರ್ ಸಿದ್ಧಪಡಿಸಿಕೊಂಡಿದ್ದಾರೆ. ಅವರನ್ನು ಬಂಧಿಸಲು ಸೋಲದೇವನಹಳ್ಳಿ ಪೋಲಿಸರು ಲೆಕ್ಕಪತ್ರ ವರದಿ ಕೇಳುವುದೇಕೆ ಎಂದು ರೈತರು ಪ್ರಶ್ನಿಸಿದರು.
ಸಂಘದ ಅಧ್ಯಕ್ಷರಾದ ನಾಗರಾಜ್ ಅವರು ಮಾತನಾಡಿ, ‘ಆಡಳಿತ ಮಂಡಳಿಯನ್ನು ರದ್ದು ಮಾಡುವಂತೆ ಸದಸ್ಯರು ಹೇಳಿದ್ದಾರೆ. ಅದರಂತೆ ಆಡಳಿತ ಮಂಡಳಿಯನ್ನು ರದ್ದು ಮಾಡುತ್ತೇನೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.