ADVERTISEMENT

ವಿಧಾನಸೌಧವನ್ನೂ ಔಟ್ ಸೋರ್ಸ್ ಕೊಟ್ಟುಬಿಡಿ: ಮಾಧುಸ್ವಾಮಿ

ಮಾಧುಸ್ವಾಮಿ ಮಾತಿಗೆ ತಲೆದೂಗಿದ ಆಡಳಿತ–ವಿರೋಧ ಪಕ್ಷದ ಶಾಸಕರು!

​ಪ್ರಜಾವಾಣಿ ವಾರ್ತೆ
Published 3 ಜುಲೈ 2018, 19:54 IST
Last Updated 3 ಜುಲೈ 2018, 19:54 IST

ಬೆಂಗಳೂರು: ‘ಸರ್ಕಾರ ಎಲ್ಲವನ್ನೂ ಔಟ್ ಸೋರ್ಸ್ ನೀಡುತ್ತಿದೆ. ವಿಧಾನಸೌಧವನ್ನೂ ಔಟ್ ಸೋರ್ಸ್ ಕೊಟ್ಟುಬಿಡಿ’ ಎಂದು ಬಿಜೆಪಿಯ ಜೆ.ಸಿ. ಮಾಧುಸ್ವಾಮಿ, ಸಮ್ಮಿಶ್ರ ಸರ್ಕಾರವನ್ನು ತೀಕ್ಷ್ಣ ಮಾತುಗಳಿಂದ ತಿವಿದರು.

ರಾಜ್ಯಪಾಲರ ಭಾಷಣದ ಮೇಲೆ ಮಂಗಳವಾರ ಮಾತನಾಡಿದ ಅವರು, ಸರ್ಕಾರಿ ವ್ಯವಸ್ಥೆ, ವಿವಿಧ ಇಲಾಖೆಗಳಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಕಡೆಗೆ ಬೆಳಕು ಚೆಲ್ಲಿದರು.

‘ಇದೊಂದು ನಿರ್ಜೀವ ಸರ್ಕಾರ. ಇಲ್ಲಿರುವವರು ಮಂತ್ರಿಗಳಲ್ಲ, ಮ್ಯಾನೇಜರ್‌ಗಳು’ ಎಂದರು.

ADVERTISEMENT

ಅವರ ಮಾತಿನ ಶೈಲಿಗೆ ತಲೆದೂಗಿದ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಮತ್ತು ಬಿಜೆಪಿ ಶಾಸಕರು ‘ಹೇಳಬೇಕಾದ್ದನ್ನು ಚೆನ್ನಾಗಿಯೇ ಹೇಳಿದಿರಿ’ ಎಂದು ಬೆನ್ನು ತಟ್ಟಿದರು. ಆಡಳಿತ ಪಕ್ಷದ ಕೆಲವು ಸದಸ್ಯರೂ ಮೆಚ್ಚುಗೆ ವ್ಯಕ್ತಪಡಿಸಿದರು.

‘ರಾಜ್ಯಪಾಲರ ಭಾಷಣ ಸರ್ಕಾರ ಮುಂದಿನ ನಡೆ ದಿಕ್ಕು ತೋರಿಸಬೇಕು. ಆದರೆ, ಮರಣೋತ್ತರ ವರದಿಯಂತಿದೆ’ ಎಂದೇ ಮಾತು ಆರಂಭಿಸಿದ ಮಾಧುಸ್ವಾಮಿ, ಮುಖ್ಯಮಂತ್ರಿಯವರ ಮಾತುಗಳನ್ನು ಗಮನಿಸಿದರೆ, ‘ಈ ಸರ್ಕಾರ ಪೈಲೆಟ್ ಇಲ್ಲದ ವಿಮಾನ, ನಾವಿಕನಿಲ್ಲದ ಹಡಗಿನಂತಾಗಿದೆ’ ಎಂದರು.

ಜೆಡಿಎಸ್ ಚುನಾವಣಾ ಪ್ರಣಾಳಿಕೆಯಲ್ಲಿರುವ ಕಾಂಗ್ರೆಸ್ ಬಗೆಗಿನ ಟೀಕೆಗಳನ್ನು ಪ್ರಸ್ತಾಪಿಸಿದ ಅವರು, ಶೇಂಗಾ ಸೂರ್ಯಕಾಂತಿ ಎಣ್ಣೆಯಲ್ಲಿ ಕಲಬೆರಕೆ ಹೆಚ್ಚಲು ಕಾಂಗ್ರೆಸ್ ಕಾರಣ ಎಂದು ಜೆಡಿಎಸ್ ಪ್ರಣಾಳಿಕೆಯಲ್ಲೇ ಇದೆ. ಕಲಬೆರಕೆ ನಿಯಂತ್ರಿಸಲು ಏನು ಕ್ರಮ ಕೈಗೊಳ್ಳುತ್ತೀರಿ’ ಎಂದು ಪ್ರಶ್ನಿಸಿದರು.

‘ಎಲ್ಲ ಸಿವಿಲ್ ಕಾಮಗಾರಿಗಳು ನಿರ್ಮಿತಿ ಕೇಂದ್ರ, ಲ್ಯಾಂಡ್ ಆರ್ಮಿ, ಕೆಆರ್‌ಡಿಎಲ್‌ ಮೂಲಕ ಆಗುತ್ತಿದೆ. ಕರ್ನಾಟಕ ಪಾರದರ್ಶಕ ಕಾಯ್ದೆ ಇದ್ದರೂ ಅದನ್ನು ಬದಿಗಿಟ್ಟು ಈ ಸಂಸ್ಥೆಗಳ ಮೂಲಕ ಮಾಡಿಸುತ್ತಿರುವುದು ಯಾರನ್ನು ಉದ್ಧಾರ ಮಾಡಲು’ ಎಂದೂ ಕೆಣಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.