ಬೆಂಗಳೂರು: ನಗರದಲ್ಲಿರುವ ಪೇಯಿಂಗ್ ಗೆಸ್ಟ್ (ಪಿ.ಜಿ) ಕಟ್ಟಡಗಳಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಮಾಲೀಕರಿಗೆ ಸೂಚನೆ ನೀಡಿರುವ ಪೊಲೀಸರು, ಯಾವುದಾದರೂ ಅಹಿತಕರ ಘಟನೆಗಳು ನಡೆದರೆ ಮಾಲೀಕರನ್ನೇ ಹೊಣೆಯನ್ನಾಗಿ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಪ್ರಕಟಿಸಿರುವ ಹೆಚ್ಚುವರಿ ಪೊಲೀಸ್ ಕಮಿಷನರ್ ರಮಣ್ ಗುಪ್ತಾ, ಸುರಕ್ಷತಾ ಕ್ರಮ ಕೈಗೊಳ್ಳದವರ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆಯಡಿ ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ.
‘ಪಿ.ಜಿ ನಡೆಸಲು ಬಿಬಿಎಂಪಿ ವತಿಯಿಂದ ಪರವಾನಗಿ ಪಡೆಯಬೇಕು. ವಾಸಕ್ಕೆ ಬರುವ ವ್ಯಕ್ತಿಗಳ ಗುರುತಿನ ಚೀಟಿಗಳು ಹಾಗೂ ಸಂಬಂಧಿಕರ ವಿವರಗಳನ್ನು ದಾಖಲಿಸಿಕೊಳ್ಳಬೇಕು. ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಡ್ರಗ್ಸ್ ಸೇವನೆ ಹಾಗೂ ಮಾರಾಟಕ್ಕೆ ಅವಕಾಶ ನೀಡಬಾರದು’ ಎಂದು ರಮಣ್ ಗುಪ್ತಾ ತಿಳಿಸಿದ್ದಾರೆ.
‘ಅಡುಗೆ, ಸ್ವಚ್ಛತೆ ಹಾಗೂ ಇತರೆ ಕೆಲಸಕ್ಕೆ ನೇಮಿಸಿಕೊಳ್ಳುವ ವ್ಯಕ್ತಿಗಳ ಬಗ್ಗೆ ಪೊಲೀಸರ ಪರಿಶೀಲನಾ ಪ್ರಮಾಣ ಪತ್ರ ಪಡೆಯಬೇಕು. ವಿದೇಶಿ ಪ್ರಜೆಗಳು ವಾಸವಿದ್ದರೆ, ಅವರ ಬಗ್ಗೆ ಸಂಬಂಧಪಟ್ಟ ಠಾಣೆಗೆ ಮಾಹಿತಿ ನೀಡಬೇಕು. ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಯಾವುದೇ ಧ್ವನಿವರ್ಧಕ ಬಳಸಬಾರದು’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.