ಬೆಂಗಳೂರು: ‘ಮೊಬೈಲ್ ಆ್ಯಪ್ ಆಧಾರಿತ ಬಾಡಿಗೆ ಕೊಠಡಿ ಸೇವೆ ಒದಗಿಸುತ್ತಿರುವ ‘ಓಯೊ’ ಕಂಪನಿ₹ 42,83,301 ಬಾಡಿಗೆ ಪಾವತಿಸದೆ ವಂಚಿಸಿದೆ’ ಎಂದು ಆರೋಪಿಸಿ ಸೂರ್ಯಪ್ರಕಾಶ್ ಪೊಕ್ಕಾಲಿ ಎಂಬುವರು ಹಲಸೂರು ಠಾಣೆಗೆ ದೂರು ನೀಡಿದ್ದಾರೆ.
‘12 ಡಿಗ್ರಿ ವೆಸ್ಟ್’ ಹೋಟೆಲ್ ಮಾಲೀಕರಾದ ಸೂರ್ಯಪ್ರಕಾಶ್ ಅವರು ವಂಚನೆ ಸಂಬಂಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ನೀಡಿರುವ ನಿರ್ದೇಶನದನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಹೋಟೆಲ್ ಕೊಠಡಿ ಕಾಯ್ದಿರಿಸುವ ಸಂಬಂಧ ಓಯೊ ಕಂಪನಿ ಜೊತೆ 2017ರಲ್ಲೇ ಸೂರ್ಯಪ್ರಕಾಶ್ ಒಪ್ಪಂದ ಮಾಡಿಕೊಂಡಿದ್ದರು. ಅಂದಿನಿಂದ ಇಲ್ಲಿಯವರೆಗೂ ಕಂಪನಿಯವರು ಬಾಡಿಗೆ ಪಾವತಿಸಿಲ್ಲ. ಒಳಸಂಚು ನಡೆಸಿ ಆರೋಪಿಗಳು ನಂಬಿಕೆ ದ್ರೋಹ ಹಾಗೂ ಮೋಸ ಮಾಡಿರುವುದಾಗಿ ಸೂರ್ಯಪ್ರಕಾಶ್ ದೂರಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಓಯೊ ಕಂಪನಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಿತೇಶ್ ಅಗರ್‌ವಾಲ್ ಸೇರಿದಂತೆ ಐವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ನೋಟಿಸ್ ನೀಡಿ ವಿಚಾರಣೆ ನಡೆಸಬೇಕಿದೆ’ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.