ಬೆಂಗಳೂರು: ಯಾದಗಿರಿಯಲ್ಲಿ ದಲಿತ ಯುವಕ ರಾಕೇಶ್ ಹತ್ಯೆ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳದ ಸರ್ಕಾರ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸಿದ್ದು, ಇದರ ನೈತಿಕ ಹೊಣೆ ಹೊತ್ತು ಗೃಹ ಸಚಿವ ಜಿ.ಪರಮೇಶ್ವರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಒತ್ತಾಯಿಸಿದರು.
ಭಾನುವಾರ ಘಟನೆ ನಡೆದಿದ್ದರೂ ಸೋಮವಾರ ಮಧ್ಯಾಹ್ನದವರೆಗೆ ಎಫ್‌ಐಆರ್ ದಾಖಲಿಸಿರಲಿಲ್ಲ. ಒತ್ತಡ ಹೆಚ್ಚಾದ ಬಳಿಕ ಅಂದರೆ 14 ಗಂಟೆಗಳ ಬಳಿಕ ಎಫ್‌ಐಆರ್ ದಾಖಲಿಸಲಾಗಿದೆ. ಮುಖ್ಯಮಂತ್ರಿ ಮತ್ತು ಗೃಹ ಸಚಿವರ ಕೃಪಾಕಟಾಕ್ಷದಿಂದ ಕರ್ನಾಟಕ ಅತ್ಯಂತ ಕರಾಳ ದಿನಗಳನ್ನು ಎದುರಿಸಬೇಕಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರಾಜ್ಯದಲ್ಲಿ ಕಾನೂನು– ಸುವ್ಯವಸ್ಥೆ ಜೀವಂತ ಇದೆಯೇ ಎಂಬ ಸಂಶಯ ಮೂಡುತ್ತಿದೆ. ಹೆಣ್ಣು ಮಕ್ಕಳು, ವಿದ್ಯಾರ್ಥಿಗಳ ಜೀವಕ್ಕೆ ಸುರಕ್ಷತೆಯೇ ಇಲ್ಲವಾಗಿದೆ. ದಲಿತರ ಮನೆಗೆ ನುಗ್ಗಿ ಪೋಷಕರ ಸಮ್ಮುಖದಲ್ಲೇ ದಲಿತ ಯುವಕನ ಮರ್ಮಾಂಗಕ್ಕೆ ಒದ್ದು, ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ನಡೆದಿದೆ. ಆದರೆ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಸಂವೇದನೆಯನ್ನೇ ಕಳೆದುಕೊಂಡಿದ್ದಾರೆ ಎಂದು ಕಿಡಿಕಾರಿದರು.
ಹತ್ಯೆ ನಡೆದು 14 ಗಂಟೆಗಳು ಕಳೆದರೂ ಎಫ್‌ಐಆರ್ ದಾಖಲು ಮಾಡಲು ಪೊಲೀಸ್ ಇಲಾಖೆಗೆ ಸಾಧ್ಯವಿಲ್ಲ ಎಂದಾದರೆ ದಲಿತ ಸಮುದಾಯದಿಂದ ಬಂದ ಗೃಹ ಸಚಿವರು ದಲಿತರಿಗೆ ಹೇಗೆ ಮುಖ ತೋರಿಸುತ್ತಾರೆ ಎಂದು ರಾಜೀವ್ ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.