ಬೆಂಗಳೂರು: ‘ಕನ್ನಡ ಪರಂಪರೆಯ ಅರಿವಿದ್ದವರು ಪಂಪ ಮಹಾಕವಿ ರಸ್ತೆಯ ಹೆಸರು ಬದಲಾಯಿಸುವ ಕೆಲಸಕ್ಕೆ ಮುಂದಾಗುವುದಿಲ್ಲ. ಯಾವುದೇ ಕಾರಣಕ್ಕೂ ಕನ್ನಡ ಸಾಹಿತ್ಯ ಪರಿಷತ್ತಿನ ಮುಂಭಾಗ ಇರುವ ರಸ್ತೆಯ ಹೆಸರನ್ನು ಬದಲಾಯಿಸಬಾರದು’ ಎಂದು ಸಾಹಿತಿ ಪ್ರೊ.ಎಸ್.ಜಿ. ಸಿದ್ಧರಾಮಯ್ಯ ಆಗ್ರಹಿಸಿದರು.
ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆಯು ನಗರದಲ್ಲಿ ಭಾನುವಾರ ಹಮ್ಮಿಕೊಂಡ ‘ಕುವೆಂಪು ಚಿಂತನೆಗಳು: ಸಮಕಾಲೀನ ಸಂದರ್ಭ’ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ, ಮಾತನಾಡಿದರು.
‘ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕಟ್ಟಿದ ಕನ್ನಡ ಸಾಹಿತ್ಯ ಪರಿಷತ್ತಿಗೆ ದೊಡ್ಡ ಇತಿಹಾಸವಿದೆ. ಈ ಸಂಸ್ಥೆಯ ಮುಂಭಾಗದ ರಸ್ತೆಗೆ ಪಂಪ ಮಹಾಕವಿ ರಸ್ತೆ ಎಂದು ಹೆಸರಿಡಲಾಗಿದೆ. ಪಂಪ ಕನ್ನಡದ ಹೆಮ್ಮೆಯ ಪ್ರತೀಕ. ಅವರ ಆದರ್ಶದ ನೆಲೆಯಲ್ಲಿಯೇ ಕನ್ನಡ ಸಾಹಿತ್ಯಲೋಕ ನಡೆದು ಬಂದಿದೆ. ಈಗ ಅವರ ಹೆಸರಿನ ರಸ್ತೆಯ ಹೆಸರನ್ನು ಬದಲಾಯಿಸುವ ಪ್ರಯತ್ನ ನಡೆಯುತ್ತಿದೆ. ಈ ಕೆಲಸ ಮಾಡುತ್ತಿರುವವರಿಗೆ ಕನ್ನಡ ಪರಂಪರೆಯ ಅರಿವಿದೆಯೇ’ ಎಂದು ಪ್ರಶ್ನಿಸಿದರು.
‘ಹೆಸರು ಬದಲಾಯಿಸುವಂತಹ ದುಸ್ಸಾಹಸ ತೋರುವ ಕೆಲಸವನ್ನು ಯಾರೂ ಮಾಡಬಾರದು. ಪರಿಷತ್ತಿಗೆ ಅದರದೇ ಆದ ಘನತೆಯಿದೆ. ಪಂಪ ಮಹಾಕವಿ ರಸ್ತೆಯಿಂದ ಪರಿಷತ್ತಿಗೆ ಬರುತ್ತೇವೆ. ಸಾಹಿತ್ಯದ ಪ್ರವೇಶವೂ ಪಂಪನಿಂದಲೇ ಆಗುತ್ತದೆ. ಒಂದು ವೇಳೆ ಹೆಸರು ಬದಲಾಯಿಸಿದರೆಕನ್ನಡ ಸಾಹಿತ್ಯದ ವಿವೇಕ ಇಲ್ಲದವರು ಮಾಡುವ ಕೆಲಸವಾಗುತ್ತದೆ. ಅದು ಆಗುವುದು ಬೇಡ’ ಎಂದು ಹೇಳಿದರು.
ಭಾರತ್ ಸ್ಕೌಟ್ ಅಂಡ್ ಗೈಡ್ಸ್‌ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ, ‘ಕುವೆಂಪು ಅವರ ಸಾಹಿತ್ಯ ಓದುವುದು ಕಷ್ಟದ ಕೆಲಸ. ಅವರ ‘ಕಾನೂರು ಸುಬ್ಬಮ್ಮ ಹೆಗ್ಗಡತಿ’ ಹಾಗೂ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿ ಓದಿದ್ದೇನೆ. ಈ ಕಾದಂಬರಿಯಲ್ಲಿನ ಪಾತ್ರಗಳು ತಲೆಯಲ್ಲಿ ಹಾಗೇ ನಿಚ್ಚಳವಾಗಿ ಉಳಿದಿವೆ. ಕುವೆಂಪು ಅವರ ವಿಶ್ವ ಮಾನವನ ಚಿಂತನೆ ಪ‍್ರಸ್ತುತ ಸಂದರ್ಭಕ್ಕೆ ಅತ್ಯಗತ್ಯ.ಇವತ್ತಿನ ಜಾತಿ, ಧರ್ಮ ಸಂಘರ್ಷ ವ್ಯವಸ್ಥೆಯಲ್ಲಿ ಈ ಚಿಂತನೆಗಳ ಅಳವಡಿಕೆ ಸುಲಭವಲ್ಲ. ಆದರೆ, ಈ ಚಿಂತನೆಗಳ ಅಳವಡಿಕೆಯಿಂದ ಜಗತ್ತಿಗೆ ಒಳ್ಳೆಯದಾಗುತ್ತದೆ’ ಎಂದು ಅವರು ಹೇಳಿದರು.
‘ಮುಂಚಿತವಾಗಿ ವೇತನ ಪಾವತಿ’
‘ಕರ್ನಾಟಕ ಜಾನಪದ ಪರಿಷತ್ತಿನ ಸಿಬ್ಬಂದಿಗೆ ಮಾರ್ಚ್ ತಿಂಗಳಲ್ಲಿಯೇ ಮುಂದಿನ ಐದು ತಿಂಗಳ ವೇತನವನ್ನು ಮುಂಚಿತವಾಗಿ ನೀಡಲಾಗಿತ್ತು. ಆಗಸ್ಟ್ ತಿಂಗಳವರೆಗೆ ವೇತನ ಕೊಡಲಾಗಿದೆ. ಇದಕ್ಕೆ ಸರ್ಕಾರವು ವೇತನಕ್ಕಾಗಿ ನೀಡಿದ ಅನುದಾನವನ್ನೇ ಬಳಸಿಕೊಳ್ಳಲಾಗಿದೆ. ವೇತನ ನೀಡಿಲ್ಲ ಎನ್ನುವ ಆರೋಪದಲ್ಲಿ ಯಾವುದೇ ಹುರುಳಿಲ್ಲ’ ಎಂದು ಕರ್ನಾಟಕ ಜಾನಪದ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಟಿ. ತಿಮ್ಮೇಗೌಡ ತಿಳಿಸಿದರು.
‘ಈ ಹಣಕಾಸು ವರ್ಷದಿಂದ ಎಚ್‌ಆರ್‌ಎಂಎಸ್ ಅಡಿ ಬರುವ ಇಬ್ಬರು ಸಿಬ್ಬಂದಿಗೆ ಮಾತ್ರ ಅನುದಾನ ನೀಡುವುದಾಗಿ ಸರ್ಕಾರ ಹೇಳಿತ್ತು. ಉಳಿದ 30 ಹಂಗಾಮಿ ಸಿಬ್ಬಂದಿಗೆ ಪರಿಷತ್ತೇ ಭರಿಸಬೇಕು ಎಂದು ತಿಳಿಸಲಾಗಿತ್ತು. ಮೊದಲಿನಂತೆ ಅನುದಾನ ನೀಡಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಇಷ್ಟು ವರ್ಷ ಸರ್ಕಾರದಿಂದ ಪರಿಷತ್ತಿನ ಚಟುವಟಿಕೆಗೆ ₹ 1 ಕೋಟಿ, ವೇತನಕ್ಕೆ ₹ 60 ಲಕ್ಷ ಬಿಡುಗಡೆಯಾಗುತ್ತಿತ್ತು. ನನ್ನ ಅವಧಿಯಲ್ಲಿ ವೇತನ ನಿಲ್ಲಿಸಿಲ್ಲ. ಹಣದ ಕೊರತೆಯೂ ಎದುರಾಗಿಲ್ಲ’ ಎಂದು ಹೇಳಿದರು.
‘ವಿಶ್ವಚೇತನ ಪ್ರಶಸ್ತಿ’ ಪ್ರದಾನ
ಕಣ್ವ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್.ಎಂ. ವೆಂಕಟಪ್ಪ, ಸಾಹಿತಿ ಬೈರಮಂಗಲ ರಾಮೇಗೌಡ, ಬೆಂಗಳೂರು ಪೂರ್ವ ವಿಭಾಗದ ಪೊಲೀಸ್ ಉಪ ಆಯುಕ್ತ ಭೀಮಾಶಂಕರ ಗುಳೇದ ಹಾಗೂ ಸಮಾಜ ಸೇವಕ ಸೂರಿ ಮೀರಡೆ ಅವರಿಗೆ ಕರ್ನಾಟಕ ಜಾನಪದ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಟಿ. ತಿಮ್ಮೇಗೌಡ ಅವರು ‘ವಿಶ್ವಚೇತನ ಪ್ರಶಸ್ತಿ’ ಪ್ರದಾನ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.