ನವದೆಹಲಿ: ಪನಾಮ ಪೇಪರ್ಸ್ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಕಾರ್ಯಾಚರಣೆಯಲ್ಲಿ ಬೆಂಗಳೂರಿನ ರಾಜೇಂದ್ರ ಪಾಟೀಲ ಎಂಬುವರ ಮನೆ ಮತ್ತು ಕಚೇರಿಯಲ್ಲಿ ಜೂನ್ 2ರಂದು ಜಾರಿ ನಿರ್ದೇಶನಾಲಯವು ಶೋಧ ಕಾರ್ಯಾಚರಣೆ ಕೈಗೊಂಡಿದೆ.
ಪನಾಮ ಪೇಪರ್ಸ್ ಸೋರಿಕೆ ಪ್ರಕರಣದಲ್ಲಿ ರಾಜೇಂದ್ರ ಪಾಟೀಲ ಅವರ ಹೆಸರು ಕೇಳಿಬಂದಿದೆ ಎಂದು ಇ.ಡಿ ದೃಢಪಡಿಸಿದೆ. ಈ ಹಿನ್ನೆಲೆಯಲ್ಲಿ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಅಡಿಯಲ್ಲಿ ಪಾಟೀಲ ಅವರ ಮನೆ ಹಾಗೂ ಅವರು ನಿರ್ದೇಶಕರಾಗಿರುವ ಶ್ರೀಪಾರ್ವತಿ ಟೆಕ್ಸ್ (ಇಂಡಿಯಾ)ಪ್ರೈವೇಟ್ ಲಿಮಿಟೆಡ್‌ನ ಕಚೇರಿ ಆವರಣ ಹಾಗೂ ಇದರ ನಿರ್ದೇಶಕರಲ್ಲಿ ಒಬ್ಬರಾದ ಪಾಟೀಲ ಅವರ ಕುಟುಂಬ ಸದಸ್ಯರನ್ನೂ ಶೋಧಕ್ಕೆ ಒಳಪಡಿಸಲಾಗಿದೆ ಎಂದ ಇ.ಡಿ ತಿಳಿಸಿದೆ.
ಪಾಟೀಲ ಅವರು ದುಬೈ, ತಾಂಜಾನಿಯಾ ಸೇರಿದಂತೆ ಇತರೆಡೆಗಳಲ್ಲಿರುವ ವಿವಿಧ ಕಂಪನಿಗಳಲ್ಲಿ ₹ 66.35 ಕೋಟಿ ಮೊತ್ತವನ್ನು ಹೂಡಿಕೆ ಮಾಡಿದ್ದರು ಎಂದು ಆರೋಪಿಸಲಾಗಿದೆ. ‘ಅಷ್ಟೇ ಅಲ್ಲ, ಅವರು, ದುಬೈ, ತಾಂಜಾನಿಯಾದಲ್ಲಿನ ವಿವಿಧ ಬ್ಯಾಂಕುಗಳಲ್ಲಿ ಖಾತೆಗಳನ್ನು ಹೊಂದಿದ್ದಾರೆ. ವಿದೇಶಿ ಹೂಡಿಕೆಗೆ ಸಂಬಂಧಿಸಿದ ಅನೇಕ ದಾಖಲೆಗಳನ್ನು ಶೋಧ ಕಾರ್ಯಾಚರಣೆ ಸಮಯದಲ್ಲಿ ವಶಪಡಿಸಿಕೊಳ್ಳಲಾಗಿದೆ’ ಎಂದೂ ಇ.ಡಿ ತಿಳಿಸಿದೆ.
₹2.74 ಮೌಲ್ಯದ ಆಸ್ತಿ ಜಪ್ತಿ: ಇ.ಡಿ ಕೈಗೊಂಡಿದ್ದ ಮತ್ತೊಂದು ಕಾರ್ಯಾಚರಣೆಯಲ್ಲಿ ಸ್ವಿಸ್ ಬ್ಯಾಂಕ್‌ನ ಖಾತೆ ಹೊಂದಿರುವ ಹಾಗೂ ಪನಾಮ ಪೇಪರ್ಸ್ ಪ್ರಕರಣದಲ್ಲಿ ಕೇಳಿಬಂದಿರುವ ಕೋಲ್ಕತ್ತ ಮೂಲದ ಉದ್ಯಮಿ ಕುಟುಂಬವೊಂದರ ₹ 2.74 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ.
ಫೆಮಾ ಅಡಿಯಲ್ಲಿ ಕೋಲ್ಕತ್ತದ ದಿವಂಗತ ಶ್ಯಾಮಪ್ರಸಾದ್ ಮುರಾರ್ಕಾ ಮತ್ತು ಸಂಜಯ್ ಮುರಾರ್ಕಾ ಎಂಬುವರಿಗೆ ಸೇರಿದ ಸ್ಥಿರ ಠೇವಣಿ ಮತ್ತು ಜಮೀನನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಶ್ಯಾಮಪ್ರಸಾದ್ ಮತ್ತು ಸಂಜಯ್ ಇಬ್ಬರೂ ಬಿಲ್ಲಿಪ್ಯಾಕ್ ಲಿಮಿಟೆಡ್ ಎನ್ನುವ ಕಂಪನಿಯ ಷೇರುದಾರರಾಗಿದ್ದರು. ಇಬ್ಬರೂ ಸ್ವಿಟ್ಜರ್ಲೆಂಡ್‌ನ ಎಚ್‌ಎಸ್‌ಬಿಸಿಯಲ್ಲಿದ್ದ ಕಂಪನಿಯ ಬ್ಯಾಂಕ್ ಖಾತೆಯ ಫಲಾನುಭವಿಗಳಾಗಿದ್ದರು. ಇ.ಡಿ ನಡೆಸಿದ್ದ ತನಿಖೆಯಲ್ಲಿ ಇಬ್ಬರೂ ತಮ್ಮ ಮತ್ತು ಕಂಪನಿಯ ಹೆಸರಿನಲ್ಲಿದ್ದ ವಿವಿಧ ಖಾತೆಗಳಲ್ಲಿ ವಿದೇಶಿ ವಿನಿಮಯ ರೂಪದಲ್ಲಿ ಆಸ್ತಿಯನ್ನು ಹೊಂದಿರುವುದು ಕಂಡುಬಂದಿತ್ತು ಎಂದು ಇ.ಡಿ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.