ಬೆಂಗಳೂರು: ‘ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ರಾಜ್ಯವು ದೇಶದಲ್ಲೇ ಮುಂಚೂಣಿಯಲ್ಲಿದ್ದರೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು 15ನೇ ಹಣಕಾಸು ಆಯೋಗದ ಅನುದಾನಕ್ಕೆ ಪೂರಕ ದಾಖಲೆ ಸಲ್ಲಿಸಲು ವಿಳಂಬ ಮಾಡಿರುವುದು ಇಲಾಖೆಯ ದುರವಸ್ಥೆಗೆ ಸಾಕ್ಷಿ’ ಎಂದು ಕಾಂಗ್ರೆಸ್ ಮುಖಂಡ ಪ್ರೊ.ಬಿ.ಕೆ. ಚಂದ್ರಶೇಖರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಪ್ರಜಾವಾಣಿ’ಯ ಗುರುವಾರದ ಸಂಚಿಕೆಯಲ್ಲಿ ‘ಪಂಚಾಯಿತಿಗಳಿಗೆ ಅನುದಾನದ ಸಂಕಟ’ ಶೀರ್ಷಿಕೆಯಡಿ ಪ್ರಕಟವಾದ ವರದಿ ಕುರಿತು ಪ್ರತಿಕ್ರಿಯಿಸಿರುವ ಅವರು, ‘15ನೇ ಹಣಕಾಸು ಆಯೋಗದ ಶಿಫಾರಸಿನಂತೆ ಹಂಚಿಕೆಯಾದ ಅನುದಾನವನ್ನು ಸಕಾಲಕ್ಕೆ ಪಡೆದುಕೊಳ್ಳಲು ವಿಫಲವಾಗಿರುವುದು ಆಕ್ಷೇಪಾರ್ಹ. ರಾಜ್ಯದ ಪಂಚತಂತ್ರ 2.0 ತಂತ್ರಾಂಶವನ್ನು ಕೇಂದ್ರದ ಪೋರ್ಟಲ್ ಜೊತೆ ಸಂಯೋಜನೆ ಮಾಡಲು ಆರು ತಿಂಗಳು ಬೇಕಿತ್ತೆ? ಈ ವೈಫಲ್ಯಕ್ಕೆ ವಿವರಣೆ ನೀಡುವವರು ಯಾರು? ಇಲಾಖೆಯ ಅಧಿಕಾರಿಗಳ ಅಸಡ್ಡೆ ಅಥವಾ ಉದಾಸೀನವೆ ಕಾರಣವೆ’ ಎಂದು ಪ್ರಶ್ನಿಸಿದ್ದಾರೆ.
‘ರಾಜ್ಯದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಅಸ್ತಿತ್ವಕ್ಕೆ ತರುವ ಹಿಂದಿನ ಸರ್ಕಾರಗಳ ಪ್ರಯತ್ನದಲ್ಲಿ ಸಕ್ರಿಯವಾಗಿ ನಾನು ಭಾಗಿಯಾಗಿದ್ದೆ. ಇಲಾಖೆಯ ಈ ಗಂಭೀರ ವೈಫಲ್ಯವು ತೀವ್ರ ಅಸಮಾಧಾನ ಮೂಡಿಸಿದೆ. ಹಲವು ರಾಜ್ಯಗಳು ಈಗಾಗಲೇ ಮೊದಲ ಕಂತಿನ ಅನುದಾನ ಪಡೆದಿದ್ದು, ಕೆಲವು ರಾಜ್ಯಗಳಿಗೆ ಎರಡನೇ ಕಂತಿನ ಅನುದಾನವೂ ಬಿಡುಗಡೆಯಾಗಿದೆ. ರಾಜ್ಯಕ್ಕೆ ಮೊದಲ ಕಂತಿನ ಅನುದಾನವೂ ಬಂದಿಲ್ಲ ಎಂಬುದು ರಾಜ್ಯಕ್ಕೆ ಆಭಾಸ ತಂದಿದೆ’ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.