ಬೆಂಗಳೂರು: ದಿನಪತ್ರಿಕೆ ವಿತರಿಸುವವರಿಗೆ ಇನ್ನು ಮುಂದೆ ₹2 ಲಕ್ಷ ಅಪಘಾತ ಪರಿಹಾರ ಸೌಲಭ್ಯ ಹಾಗೂ ₹1 ಲಕ್ಷವರೆಗೆ ವೈದ್ಯಕೀಯ ಸೌಲಭ್ಯ ಸಿಗಲಿದೆ.
ಕಾರ್ಮಿಕ ಇಲಾಖೆಯು ಇದೇ 22ರಂದು ಹೊರಡಿಸಿರುವ ಆದೇಶದಲ್ಲಿ, ದಿನಪತ್ರಿಕೆ ವಿತರಕರನ್ನು ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ವ್ಯಾಪ್ತಿಗೆ ಸೇರಿಸಲಾಗಿದೆ.
ಪತ್ರಿಕಾ ವಿತರಕರು ಅರೆಕಾಲಿಕ ವೃತ್ತಿ ನಿರ್ವಹಿಸುತ್ತಿದ್ದು, ಅಸಂಘಟಿತ ವಲಯಕ್ಕೆ ಸೇರಿದ್ದಾರೆ. ಹಾಗಿದ್ದರೂ ಕಾರ್ಮಿಕ ಕಾನೂನುಗಳಡಿ ನಿಗದಿಪಡಿಸಿರುವ ಸಾಮಾಜಿಕ ಭದ್ರತಾ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಇಂತಹ ಅಸಂಘಟಿತ ಕಾರ್ಮಿಕರಿಗೆ ಸೌಲಭ್ಯ ಒದಗಿಸಲು ಸಾಮಾಜಿಕ ಭದ್ರತಾ ಮಂಡಳಿ ರಚನೆಯಾಗಿದೆ. ದಿನಪತ್ರಿಕೆ ವಿತರಿಸಲು ಬಹುತೇಕರು ದ್ವಿಚಕ್ರ ಅಥವಾ ಸೈಕಲ್ ಬಳಸುತ್ತಿದ್ದು, ಅಪಘಾತಕ್ಕೆ ತುತ್ತಾಗುವ ಸಾಧ್ಯತೆ ಇದೆ. ಹೀಗಾದಲ್ಲಿ, ವಿತರಕರು ಹಾಗೂ ಅವರ ಅವಲಂಬಿತರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಅವರಿಗೆ ನೆರವು ನೀಡಲು ಅಪಘಾತ ಪರಿಹಾರ ಸೌಲಭ್ಯ ಹಾಗೂ ವೈದ್ಯಕೀಯ ಸೌಲಭ್ಯ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದು ಆದೇಶ ಹೇಳಿದೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರು, ಪತ್ರಿಕಾ ವಿತರಕರಿಗೆ ಸಾಮಾಜಿಕ ಭದ್ರತೆ ಕಲ್ಪಿಸಲು ಸರ್ಕಾರದ ಮೇಲೆ ನಿರಂತರ ಒತ್ತಡ ಹೇರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.